ಮುಂಬೈ

ಸಂಜಯ ದತ್‌ ಇಂದು ಬಿಡುಗಡೆ

Pinterest LinkedIn Tumblr

Sanjay-Duttಪುಣೆ (ಪಿಟಿಐ): 1993ರ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಜೈಲು ಸೇರಿದ್ದ ಬಾಲಿವುಡ್ ನಟ ಸಂಜಯ ದತ್‌ ಗುರುವಾರ (ಇಂದು) ಬಿಡುಗಡೆಯಾಗಲಿದ್ದಾರೆ.

ಸದ್ಯ ಪುಣೆಯ ಯೆರವಾಡಾ ಜೈಲಿನಲ್ಲಿರುವ 56 ವರ್ಷದ ದತ್, ಮುಂಬೈ ಸರಣಿ ಸ್ಪೋಟದ ವೇಳೆ ಅಕ್ರಮ ಶಸ್ತ್ತಾಸ್ತ್ರ ಹೊಂದಿದ ಆರೋಪ ಸಾಬೀತಾಗಿ ಐದು ವರ್ಷಗಳ ಶಿಕ್ಷೆಗೆ ಒಳಗಾಗಿದ್ದರು. ಆದರೆ, ಅವರ ಶಿಕ್ಷೆಯನ್ನು ಸನ್ನಡತೆಯ ಆಧಾರದಲ್ಲಿ ತಗ್ಗಿಸಲಾಗಿತ್ತು. ಇದು ವಿವಾದಕ್ಕೆ ಕಾರಣವಾಗಿತ್ತು.

ಆದರೆ, ದತ್ ಅವರ ಶಿಕ್ಷಾವಧಿಯನ್ನು ಜೈಲು ಕೈಪಿಡಿ ಹಾಗೂ ನಿಮಯಗಳಿಗೆ ಅನುಗುಣವಾಗಿಯೇ ಲೆಕ್ಕಾಚಾರ ಮಾಡಲಾಗಿದೆ ಎಂದು ಅವರ ವಕೀಲರು ಹೇಳುತ್ತಾರೆ.

ಇನ್ನು, ‘ಪ್ರತಿಕೈದಿಗೂ ಅನ್ವಯಿಸುವ ಎಲ್ಲಾ ನಿಯಮಗಳ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ದತ್ ಅವರನ್ನು ಗುರುವಾರ (25 ಫೆಬ್ರುವರಿ 2016) ಬೆಳಿಗ್ಗೆ 10ಗಂಟೆಗೆ ಬಿಡುಗಡೆ ಮಾಡಲಾಗುವುದು’ ಎಂದು ಯೆರವಾಡಾ ಜೈಲಿನ ಅಧೀಕ್ಷಕ ಯು ಟಿ ಪವಾರ್ ತಿಳಿಸಿದ್ದಾರೆ.

ಆದರೆ, ಕಾರಾಗೃಹದಲ್ಲಿ ದತ್ ಅವರಿಗೆ ವಿಶೇಷ ಆತಿಥ್ಯ ನೀಡಿರುವ ಆರೋಪವನ್ನು ಪವಾರ್ ಅಲ್ಲಗಳೆದಿದ್ದಾರೆ. ಸೆಲೆಬ್ರಿಟಿ ವ್ಯಕ್ತಿತ್ವದ ಕಾರಣಕ್ಕಾಗಿ ದತ್ ಅವರಿಗೆ ಜೈಲಿನಲ್ಲಿ ವಿಶೇಷ ಆತಿಥ್ಯ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು.

‘ಜೈಲಿನ ನಿಯಮಾವಳಿ ಅನ್ವಯವೇ ಅವರ ಶಿಕ್ಷಾವಧಿಯ ತಗ್ಗಿಸಲಾಗಿದೆ. ಇತರ ಪ್ರಕರಣದ ದೋಷಿಗಳಂತೆಯೇ ಅವರನ್ನು ನಡೆಸಿಕೊಳ್ಳಲಾಗಿದೆ’ ಎಂದು ಪ್ರತಿಕ್ರಿಯಿಸಿದರು.

ಸನ್ನಡತೆಯ ಆಧಾರದಲ್ಲಿ 8 ತಿಂಗಳ ಹಾಗೂ 16 ದಿನಗಳ ಶಿಕ್ಷೆ ಕಡಿತದ ಕಾರಣ ದತ್ ಅವರ ಶಿಕ್ಷಾವಧಿ ಫೆಬ್ರುವರಿ 25ರಂದು ಪೂರ್ಣಗೊಳ್ಳಲಿದ್ದು, ಬಿಡುಗಡೆಯಾಗಲಿದ್ದಾರೆ ಎಂದು ಮಹಾರಾಷ್ಟ್ರ ಗೃಹ ಖಾತೆ ರಾಜ್ಯ ಸಚಿವ ರಾಮ್ ಶಿಂದೆ ಮಂಗಳವಾರವಷ್ಟೇ ತಿಳಿಸಿದ್ದರು.

1993ರ ಈ ಪ್ರಕರಣದ ಅಂತಿಮ ತೀರ್ಪನ್ನು ಸುಪ್ರೀಂ ಕೋರ್ಟ್  2013ರಲ್ಲಿ ಪ್ರಕಟಿಸಿತ್ತು. ಬಳಿಕ 2013ರ  ಮೇ ತಿಂಗಳಿಂದ ದತ್ ಪುಣೆಯ ಯೆರವಾಡಾ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ.

Write A Comment