ಮುಂಬೈ, ಡಿ.17-ತನ್ನ ಗೆಳೆಯ ಪೊಲೀಸ್ ಪೇದೆಯೊಬ್ಬನ ಜೊತೆ ಮದ್ಯಪಾನ ಮಾಡಿ, ಗೆಳೆಯನನ್ನು ಕರ್ತವ್ಯಕ್ಕೆ ಕಳುಹಿಸದೆ ಜೊತೆಯಲ್ಲೇ ಉಳಿಸಿಕೊಳ್ಳುವ ಕಾರಣಕ್ಕಾಗಿ ರಿಕ್ಷಾ ಡ್ರೈವರ್ ಒಬ್ಬ ಪೊಲೀಸ್ ಠಾಣೆಗೆ ಕರೆ ಮಾಡಿ ರೈಲು ನಿಲ್ದಾಣದಲ್ಲಿ ಎಕೆ-47 ಬಂದೂಕುಗಳನ್ನು ಹಿಡಿದ ನಾಲ್ವರು ಉಗ್ರರು ಪ್ರವೇಶಿಸಿರುವುದಾಗಿ ಠಾಣೆಗೆ ಕರೆ ಮಾಡಿ ಇಡೀ ಪೊಲೀಸ್ ಸಿಬ್ಬಂದಿ 6 ಗಂಟೆಗಳ ಕಾಲ ಸತತ ಶೋಧ ಕಾರ್ಯ ನಡೆಸಿರುವ ಘಟನೆ ಮುಂಬೈನಲ್ಲಿ ನಡೆದಿದೆ.
ನಡೆದದ್ದಿಷ್ಟು: ರಿಕ್ಷಾ ಡ್ರೈವರ್ ಮತ್ತು ಪೊಲೀಸ್ ಪೇದೆ ಆತ್ಮೀಯ ಗೆಳೆಯರು. ಇಬ್ಬರೂ ಬಾರ್ಗೆ ತೆರಳಿ ಕುಡಿದಿದ್ದಾರೆ. ಕುಡಿದು ಠಾಣೆಗೆ ಹೋದರೆ ತೊಂದರೆ. ಹಾಗಾಗಿ ಸಮಯ ಕಳೆಯಲು ಏನಾದರೊಂದು ಉಪಾಯ ಕಂಡುಹಿಡಿಯುವ ನಿಟ್ಟಿನಲ್ಲಿ ರಿಕ್ಷಾ ಚಾಲಕ ತನ್ನ ಮಿತ್ರ ಕೆಲಸ ಮಾಡುವ ಠಾಣೆಗೆ ಕರೆ ಮಾಡಿ ಉಗ್ರರ ವದಂತಿ ಹಬ್ಬಿಸಿದ. ಇದರಿಂದ ಕಂಗಾಲಾದ ರೈಲ್ವೇ ಪೊಲೀಸ್ ಸಿಬ್ಬಂದಿ, ಕುರ್ಲಾ ಠಾಣೆಯ ಸಿಬ್ಬಂದಿ ಹಾಗೂ ಭಯೋತ್ಪಾದಕ ನಿಗ್ರಹ ದಳದ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಧಾವಿಸಿದರು. ಉಗ್ರರಿಗಾಗಿ ತೀವ್ರ ಶೋಧ ನಡೆಸಿದರು.
ನಂತರ ಇದು ಹುಸಿ ಕರೆ ಎಂದು ತಿಳಿಯಿತು. ಆಗ ರಿಕ್ಷಾ ವಾಲಾನನ್ನು ಠಾಣೆಗೆ ಹಿಡಿದು ತಂದು ತನಿಖೆಗೆ ಗುರಿಪಡಿಸಿದರು. ನಂತರ ತನ್ನ ಪೇದೆ ಗೆಳೆಯನನ್ನು ಅವನ ಕರ್ತವ್ಯದ ಅವಧಿಮುಗಿಯುವವರೆಗೂ ತನ್ನ ಜೊತೆಯಲ್ಲೇ ಉಳಿಸಿಕೊಳ್ಳಲು ಈ ನಾಟಕವಾಡಿದ್ದಾಗಿ ವಿಚಾರಣೆ ವೇಳೆ ರಿಕ್ಷಾ ಡ್ರೈವರ್ ಒಪ್ಪಿಕೊಂಡ. ಮತ್ತೊಮ್ಮೆ ಈ ರೀತಿ ಕಪಿಚೇಷ್ಟೆ ಮಾಡದಂತೆ ಎಚ್ಚರಿಕೆ ನೀಡಿ ಪೊಲೀಸರು ಅವನನ್ನು ಮನೆಗೆ ಕಳುಹಿಸಿದ್ದಾರೆ.