ಮುಂಬೈ

ಮುಂಬೈ ಕೊಳೆಗೇರಿಯಲ್ಲಿ ಭೀಕರ ಅಗ್ನಿ ದುರಂತ: ಇಬ್ಬರ ಸಾವು 1 ಸಾವಿರಕ್ಕೂ ಅಧಿಕ ಗುಡಿಸಲುಗಳು ಬೆಂಕಿಗಾಹುತಿ

Pinterest LinkedIn Tumblr

kandivli-fire4

ಮುಂಬೈ,ಡಿ.8: ನಗರದ ಕಾಂಡಿವಿಲಿಯ ಕೊಳೆಗೇರಿಯೊಂದರಲ್ಲಿ ಸೋಮವಾರ ಅಡುಗೆ ಅನಿಲವೊಂದು ಸ್ಫೋಟಿಸಿ, ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ 1 ಸಾವಿರಕ್ಕೂ ಅಧಿಕ ಗುಡಿಸಲುಗಳು ಬೆಂಕಿಗಾಹುತಿಯಾಗಿವೆ. ದುರಂತದಲ್ಲಿ ಇಬ್ಬರು ಮೃತಪಟ್ಟಿದ್ದಾರೆ .ಮಧ್ಯಾಹ್ನ 12:30ರ ವೇಳೆಗೆ, ಕಾಂಡಿವಿಲಿಯ ದಾಮುನಗರ ದಕೊಳೆಗೇರಿಯಲ್ಲಿ ಅಡುಗೆ ಅನಿಲವೊಂದು ಸ್ಫೋಟಿಸಿದ ಬಳಿಕ ಕಾಣಿಸಿಕೊಂಡ ಬೆಂಕಿಯು ಕೆಲವೇ ನಿಮಿಷಗಳಲ್ಲಿ ಇಡೀ ಕೊಳೆಗೇರಿಗೆ ಹರಡಿತು. ಘಟನೆಯಲ್ಲಿ ಸುಮಾರು 1 ಸಾವಿರ ಗುಡಿಸಲುಗಳು ಸುಟ್ಟುಹೋಗಿವೆ ಎಂದು ಮುಂಬೈ(ಉತ್ತರ) ಪೊಲೀಸ್ ಆಯುಕ್ತ ಫತೇಸಿಂಗ್ ಪಾಟೀಲ್ ತಿಳಿಸಿದ್ದಾರೆ. ಈಗ ಬೆಂಕಿ ನಿಯಂತ್ರಣಕ್ಕೆ ಬಂದಿರುವುದಾಗಿ ಅವರು ಹೇಳಿದ್ದಾರೆ.

ಅಗ್ನಿದುರಂತ ಸಂಭವಿಸಿದ ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕೆ 16 ಅಗ್ನಿಶಾಮಕದಳದ ವಾಹನಗಳು ಹಾಗೂ 9 ನೀರಿನ ಟ್ಯಾಂಕರ್ ವಾಹನಗಳು ಧಾವಿಸಿ, ಬೆಂಕಿನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿದವು. ಆದರೆ ಅಗ್ನಿ ಯ ಜ್ವಾಲೆಗಳು ಆಗಲೇ ಇಡೀ ಕೊಳೆಗೇರಿಗೆ ವ್ಯಾಪಿಸಿದ್ದರಿಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸಪಡಬೇಕಾಯಿತು. ಮಧ್ಯಾಹ್ನ 3:10ರ ವೇಳೆಗೆ ಅವರಿಗೆ ಬೆಂಕಿಯನ್ನು ಹತೋಟಿಗೆ ತರಲು ಸಾಧ್ಯವಾಯಿತು. ಅಗ್ನಿಅನಾಹುತದಲ್ಲಿ ಇಬ್ಬರು ಸಾವನ್ನಪ್ಪಿದ್ದು, ಈ ಪೈಕಿ ಒಂದು ಮೃತದೇಹವು ಗುರುತುಹಿಡಿಯಲಾರದಷ್ಟು ಸುಟ್ಟುಕರಕಲಾಗಿದ್ದು, ಅದು ಹೆಣ್ಣೊ, ಗಂಡೊ ಎಂದು ಪತ್ತೆ ಹಚ್ಚಲು ಸಾಧ್ಯವಾಗಿಲ್ಲವೆಂದವರು ಹೇಳಿದ್ದಾರೆ. ಕಳೆದ ಜೂನ್‌ನಲ್ಲಿ ಮುಂಬೈನ ಗಗನಚುಂಬಿ ಕಟ್ಟಡವೊಂದರಲ್ಲಿ ಸಂಭವಿಸಿದ ಅಗ್ನಿಅನಾಹುತದಲ್ಲಿ ಮೇಲಂತಸ್ತಿನ ಲಿಫ್ಟೊಂದರಲ್ಲಿ ಸಿಕ್ಕಿಹಾಕಿಕೊಂಡ ಏಳು ಮಂದಿ, ದಟ್ಟವಾದ ಹೊಗೆಯಿಂದ ಉಸಿರುಗಟ್ಟಿ ಸಾವನ್ನಪ್ಪಿದ್ದರು.

Write A Comment