ಮನೋರಂಜನೆ

‘ವಿಶ್ವಾಸಘಾತುಕ ಭಾಷೆಯಲ್ಲಿ’ ಅಮೀರ್ ಖಾನ್ ಮಾತನಾಡುತ್ತಿದ್ದಾರೆ; ಶಿವಸೇನೆ ಕಿಡಿ

Pinterest LinkedIn Tumblr

Shiv-Sena-Aamir-Khan

ಮುಂಬೈ: ಅಸಹಿಷ್ಣುತೆ ಚರ್ಚೆಗೆ ಜಿಗಿದಿರುವ ಬಾಲಿವುಡ್ ನಟ ಅಮೀರ್ ಖಾನ್ ಅವರನ್ನು ಟೀಕಿಸಿರುವ ಶಿವ ಸೇನೆ, ನಟ ‘ವಿಶ್ವಾಸಘಾತುಕ ಭಾಷೆಯಲ್ಲಿ’ ಮಾತನಾಡುತ್ತಿದ್ದಾರೆ ಎಂದಿದ್ದು, ತಮಗೆ ಬಂದೊದಗಿರುವ ಆಪತ್ಕಾಲವನ್ನು ವಿವರಿಸುವಂತೆ ‘ಖಾನ್’ ನಟರಿಗೆ ಆಗ್ರಹಿಸಿದೆ.

‘೩ ಇಡಿಯಟ್ಸ್’ ನಲ್ಲಿ ‘ರಾಂಚ್ಚೊದಾಸ್’ ಪಾತ್ರಮಾಡಿರುವ ಅಮೀರ್ ಖಾನ್ ಅವರಿಗೆ “ಈ ರಾಂಚ್ಚೊದಾಸ್ ಯಾವ ದೇಶದಲ್ಲಿ ವಾಸಿಸಲಿದ್ದಾರೆ ಎಂದು ವಿವರಿಸಬೇಕು” ಎಂದು ಕೂಡ ಶಿವಸೇನೆ ಪಕ್ಷ ಪ್ರಶ್ನಿಸಿದೆ.

“ಭಾರತವನ್ನು ಬಿಡುವ ಮಾತುಗಳನ್ನಾಡಿದ್ದು ವಿಶ್ವಾಸಘಾತುಕ. ಈ ದೇಶ ನಿಮಗೆ ಕೊಟ್ಟಿರುವ ಗೌರವವನ್ನೆಲ್ಲಾ ಇಲ್ಲೇ ಬಿಟ್ಟುಬಿಡಿ” ಎಂದು ಬಿಜೆಪಿ ಮೈತ್ರಿಪಕ್ಷವಾದ ಶಿವಸೇನೆ ತನ್ನ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಬರೆದಿದೆ.

“ತಮ್ಮ ಸಿನಿಮೀಯ ಪತ್ನಿಯವರ ಮಾತುಗಳನ್ನು ಅಷ್ಟು ಗಂಭೀರವಾಗಿ ತೆಗೆದುಕೊಂಡದ್ದೇಕೆ ಮತ್ತು ಈ ದೇಶವನ್ನು ಅವರು ಬಿಡಬೇಕು ಎಂದುಕೊಂಡದ್ದೇಕೆ ಎಂದು ಅಮೀರ್ ಅವರಿಗಷ್ಟೇ ಗೊತ್ತು” ಎಂದು ಕೂಡ ಶಿವಸೇನೆ ಹೇಳಿದೆ.

ಉಳಿದ ‘ಖಾನ್’ ನಟರ ಮೇಲೂ ಶಿವಸೇನೆ ವಾಗ್ದಾಳಿ ನಡೆಸಿದ್ದು ಇಲ್ಲಿ ಅಸಹಿಷ್ಣುತೆಯಿಂದ ಉಸಿರುಗಟ್ಟಿದ್ದರೆ ತಮ್ಮ ಸಿನೆಮಾಗಳನ್ನು ಬೇರೆ ದೇಶದಲ್ಲಿ ಬಿಡುಗಡೆ ಮಾಡಬೇಕೆಂದು ಪಕ್ಷ ಆಗ್ರಹಿಸಿದೆ.

ಕೆಲವು ದಿನಗಳ ಹಿಂದೆಯಷ್ಟೇ ಪಾಕಿಸ್ತಾನಿ ಗಾಯಕ ಗುಲಾಂ ಅಲಿ ಅವರ ಸಂಗೀತ ಕಚೇರಿ ರದ್ದುಗೊಳಿಸುವುದಕ್ಕೆ ಕಾರಣರಾದ, ಸುಧೀಂದ್ರ ಕುಲಕರ್ಣಿ ಅವರ ಮುಖಕ್ಕೆ ಮಸಿ ಬಳಿದದ್ದ ಶಿವಸೇನೆ ಪಕ್ಷ ತೀವ್ರ ಟೀಕೆಗೆ ಗುರಿಯಾಗಿತ್ತು.

Write A Comment