ರಾಷ್ಟ್ರೀಯ

ಮೋದಿಯವರು ಒಂದು ಸಲ ಬಾ ಎಂದು ಕರೆದರೆ ಸಾಕು ಅವರ ಜೊತೆ ಹೋಗಿ ಬಿಡುತ್ತೇನೆ: ಪತ್ನಿ ಜಶೋದಾಬೆನ್

Pinterest LinkedIn Tumblr

modi-and-ben

ಮುಂಬೈ: ಅವರ ಜೊತೆ ಇಲ್ಲದೆ 43 ವರ್ಷಗಳನ್ನು ಕಳೆದರೂ ಮನಸ್ಸು ಮಾತ್ರ ಅವರಿಗಾಗಿ ಮಿಡಿಯುತ್ತಿದೆ. ತನ್ನ ಪತಿ ತನ್ನ ಮೇಲೆ ಇನ್ನು ಕೂಡ ಪ್ರೀತಿಯ ಭಾವನೆ ಇಟ್ಟುಕೊಂಡಿದ್ದಾರೆ ಎಂದು ಇವರು ಅದೇ ಆಶಾವಾದದಲ್ಲಿ ಜೀವನ ಕಳೆಯುತ್ತಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರ ಪತ್ನಿ 64 ವರ್ಷದ ಜಶೋದಾಬೆನ್ ಮುಂಬೈಯಲ್ಲಿ ತಮ್ಮ ಸಂಬಂಧಿಕರ ಮನೆಯಲ್ಲಿ ಮಿಡೆ ಪತ್ರಿಕೆಯ ವರದಿಗಾರರ ಜೊತೆ ಮಾತನಾಡಿದರು. ತಮ್ಮ ತವರೂರು ಗುಜರಾತ್ ಗೆ ತೆರಳುವ ಮುನ್ನ ಮಾತನಾಡಿದ ಅವರ ಕಣ್ಣುಗಳು ನರೇಂದ್ರ ಮೋದಿಯವರ ವಿಷಯ ಬಂದಾಗ ಹೊಳೆಯುತ್ತಿದ್ದವು. ಮೋದಿಯವರು ಒಂದು ಸಲ ಬಾ ಎಂದು ಕರೆದರೆ ಸಾಕು ಅವರ ಜೊತೆ ಹೋಗಿ ಬಿಡುತ್ತೇನೆ ಎನ್ನುತ್ತಾರೆ. ತೀವ್ರ ಬಯಕೆ, ತುಡಿತ ಅವರ ಮಾತುಗಳಲ್ಲಿ ವ್ಯಕ್ತವಾಗುತ್ತಿತ್ತು.

ಅವರು 80ರ ದಶಕದಲ್ಲಿ ಮುಂಬೈಗೆ ತಮ್ಮ ಚಿಕ್ಕಮ್ಮನ ಮನೆಗೆ ಬಂದಿದ್ದರು. ಮೋದಿಯವರು ಪ್ರಧಾನಿಯಾದ ಬಳಿಕ ಇದೇ ಮೊದಲ ಬಾರಿ ಮುಂಬೈಗೆ ಹೋಗಿದ್ದು. ಈಗ ಅವರ ಪರಿಸ್ಥಿತಿ ಬದಲಾಗಿದೆ. ಅವರು ಎಲ್ಲೆಲ್ಲಾ ಹೋಗುತ್ತಾರೋ ಅವರ ಹಿಂದೆ ಗುಜರಾತ್ ಪೊಲೀಸ್ ಪಡೆಯ ಐವರು ಪೊಲೀಸರು ಬೆಂಗಾವಲಾಗಿ ಅವರ ಹಿಂದೆಯೇ ಹೋಗುತ್ತಾರೆ. ನಾನು ಆಟೋದಲ್ಲಿ ಹೋದರೂ ನನ್ನ ಹಿಂದೆಯೇ ಬೆಂಗಾವಲಾಗಿ ಬರುತ್ತಾರೆ. ನಿಜಕ್ಕೂ ನನಗೆ ಇದು ಇರಿಸುಮುರುಸು, ಕಿರಿಕಿರಿ ಅನ್ನಿಸುತ್ತದೆ ಎನ್ನುತ್ತಾರೆ ಜಶೋದಾ ಬೆನ್.

ಜಶೋದಾ ಬೆನ್ ಮೋದಿಯವರನ್ನು ಮದುವೆಯಾಗಿದ್ದು 1968ರಲ್ಲಿ. ಮೂರು ವರ್ಷ ಸಂಸಾರ ನಡೆಸಿ ನಂತರ ತನ್ನ ತವರು ಮನೆಗೆ ವಾಪಾಸ್ಸಾದರು. ನಂತರ ವಿದ್ಯಾಭ್ಯಾಸ ಮಾಡಿ ತಮ್ಮ ತಂದೆಯ ಮಾರ್ಗದರ್ಶನದಂತೆ ಶಾಲಾ ಶಿಕ್ಷಕಿಯಾದರು. ಮೋದಿಯವರು ಬಿಟ್ಟಿರುವುದಕ್ಕೆ ಅವರಿಗೆ ಬೇಸರವಿಲ್ಲವಂತೆ. ತಮ್ಮ ಪತಿ ಹೋಗಿರುವುದು ದೇಶಸೇವೆ ಮಾಡಲಿಕ್ಕೆ ಎನ್ನುತ್ತಾರೆ.

ಈಗ ಜಶೋದಾ ಬೆನ್ ಅವರಿಗೆ ಕಿವಿ ಕೇಳಿಸುವುದಿಲ್ಲ. 40 ವರ್ಷ ಪ್ರಾಥಮಿಕ ಶಾಲಾ ಅಧ್ಯಾಪಕಿಯಾಗಿ 5 ವರ್ಷಗಳ ಹಿಂದಷ್ಟೇ ನಿವೃತ್ತಿ ಹೊಂದಿದ್ದಾರೆ.

ಮನೆಯಲ್ಲಿ ನಿವೃತ್ತ ಜೀವನ ನಡೆಸುತ್ತಿರುವ ಜಶೋದಾಬೆನ್ ವಾರದಲ್ಲಿ ನಾಲ್ಕು ದಿನ ಉಪವಾಸ ಮಾಡುತ್ತಾರೆ. ತಮ್ಮ ಪತಿಯ ಏಳಿಗೆಗಾಗಿ ಪ್ರಾರ್ಥನೆ ಮಾಡುತ್ತಿರುತ್ತಾರೆ. ನನಗೆ ಅವರ ಜೊತೆ ಸೇರಿ ಒಂದಾಗಿ ಬದುಕಲು ಇಷ್ಟವಿದೆ. ನಾನು ಅವರ ಸೇವೆ ಮಾಡಲು ಈಗಲೂ ಸಿದ್ಧನಿದ್ದೇನೆ. ಆದರೆ ಅವರು ಒಮ್ಮೆ ಬರಲು ಹೇಳಿದರೆ ತಕ್ಷಣವೇ ಅವರ ಜೊತೆ ಹೋಗುತ್ತೇನೆ.ಅವರ ಜೊತೆ ಹೊಸ ಜೀವನ ಆರಂಭಿಸಲು ನನ್ನ ಮನ ಹಾತೊರೆಯುತ್ತಿದೆ ಎನ್ನುತ್ತಾರೆ.

ನನ್ನ ಮತ್ತು ಮೋದಿಯವರ ಸಂಬಂಧದ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಲು ನನಗೆ ಯಾವ ಸಮಸ್ಯೆಯೂ ಇಲ್ಲ. ಈ ಹಿಂದೆಯೂ ಇರಲಿಲ್ಲ. ಆದರೆ ಮಾತನಾಡದಂತೆ ನನ್ನ ಮೇಲೆ ಒತ್ತಡ ಹೇರಲಾಗುತ್ತಿತ್ತು. ಯಾರು ಒತ್ತಡ ಹಾಕುತ್ತಿದ್ದರು ಎಂದು ನಾನು ಹೇಳುವುದಿಲ್ಲ.ಇಷ್ಟು ವರ್ಷಗಳಲ್ಲಿ ನಾನು ಮೋದಿಯವರ ಪತ್ನಿ ಎಂದು ಗುರುತಿಸಿಕೊಳ್ಳಲು ಹಪಹಪಿಸುತ್ತಿದ್ದೆ. ಮದುವೆ ಬಗ್ಗೆ ಮಾತನಾಡಲು ಹೊತೊರೆಯುತ್ತಿದ್ದೆ. ಆದರೆ ಯಾರಲ್ಲಿ ಹೇಳಿಕೊಳ್ಳುವುದು? ಗೊತ್ತಾಗಲಿಲ್ಲ. ಮುಂದೊಂದು ದಿನ ನಾನು ನರೇಂದ್ರ ಮೋದಿಯವರ ಪತ್ನಿ ಎಂದು ಅವರಿಂದಲೇ ಗುರುತಿಸಿಕೊಳ್ಳುತ್ತೇನೆ. ಅವರು ಬಂದು ನನ್ನನ್ನು ಕರೆದುಕೊಂಡು ಹೋಗುತ್ತಾರೆ ಎಂಬ ನಂಬಿಕೆ ಇದೆ ಎನ್ನುತ್ತಾರೆ.

ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ನಾಮಪತ್ರ ತುಂಬುವಾಗ ಮೋದಿಯವರು ಜಶೋದಾಬೆನ್ ತಮ್ಮ ಪತ್ನಿ ಎಂದು ಅರ್ಜಿ ತುಂಬಿದ್ದನ್ನು ನೆನಪಿಸಿಕೊಂಡ ಜಶೋದಾಬೆನ್, ಆಗ ನನಗೆ ಅಪಾರ ಸಂತೋಷವುಂಟಾಗಿ ಕಣ್ಣುಗಳಲ್ಲಿ ಆನಂದಭಾಷ್ಪ ಬಂತು.ಈಗ ನನ್ನ ಮೇಲೆ ಖಂಡಿತಾ ಅವರಲ್ಲಿರುವ ಭಾವನೆ ಬದಲಾಗಿದೆ. ಅವರು ನನ್ನನ್ನು ಇಷ್ಟಪಡುತ್ತಾರೆ. ಅವರ ಹೃದಯದಲ್ಲಿ ಖಂಡಿತಾ ನಾನಿದ್ದೇನೆ ಎನ್ನುತ್ತಾರೆ.

ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ತಮ್ಮನ್ನು ರಹಸ್ಯ ಸ್ಥಳಕ್ಕೆ ಕರೆದುಕೊಂಡು ಹೋಗಿ ಬಚ್ಚಿಡಲಾಗಿತ್ತು ಎಂಬ ವದಂತಿಯನ್ನು ಅವರು ತಳ್ಳಿಹಾಕುತ್ತಾರೆ. ಕೋಲ್ಕತ್ತಾದ ಗಂಗಸಾಗರ ಸೇರಿದಂತೆ ಅನೇಕ ಸ್ಥಳಗಳಿಗೆ ನಾನು ದೇವರ ಪೂಜೆಗೆಂದು ಹೋಗಿದ್ದೆ. ಅವರು ಚುನಾವಣೆಯಲ್ಲಿ ಗೆದ್ದಾಗ ನನಗೆ ತುಂಬಾ ಖುಷಿಯಾಯಿತು ಎನ್ನುವ ಜಶೋದಾಬೆನ್ ಗೆ ತನ್ನ ಪತಿ ಕರೆಯದೆ ಅವರ ಬಳಿಗೆ ಹೋಗಲು ಸುತಾರಾಂ ಇಷ್ಟವಿಲ್ಲ.

ವಿವಾಹಿತ ಸ್ತ್ರೀಯಂತೆಯೇ ಜಶೋದಾಬೆನ್ ಕೂಡ ವೇಷ ಭೂಷಣ ತೊಡುತ್ತಾರೆ. ಸಿಂಧೂರ, ತಿಲಕವಿಟ್ಟು ಮಂಗಳಸೂತ್ರ ಧರಿಸುತ್ತಾರೆ. ಭಾರತೀಯ ಮತ್ತು ಗುಜರಾತಿ ಸಂಸ್ಕೃತಿಯಲ್ಲಿ ಪತ್ನಿ ಪಾಲಿಸುವ ಎಲ್ಲಾ ಸಂಪ್ರದಾಯಗಳನ್ನು ಅವರೂ ಪಾಲಿಸಿಕೊಂಡು ಬಂದಿದ್ದಾರೆ. ಅದನ್ನು ಮುಂದಿನ ದಿನಗಳಲ್ಲಿ ಕೂಡ ಮುಂದುವರಿಸಿಕೊಂಡು ಹೋಗುತ್ತಾರಂತೆ.

Write A Comment