ಮುಂಬೈ

ಅಗ್ಗವಾಗಲಿವೆ ಗೃಹ, ವಾಹನ ಸಾಲ ಆರ್‌ಬಿಐ ರೆಪೊದರ ಶೇ.0.50ರಷ್ಟು ಕಡಿತ

Pinterest LinkedIn Tumblr

Cutಮುಂಬೈ,ಸೆ.29: ದೇಶದ ಆರ್ಥಿಕತೆಯನ್ನು ಉತ್ತೇಜಿಸುವ ಮಹತ್ವಾಕಾಂಕ್ಷೆಯೊಂದಿಗೆ ಭಾರತೀಯ ರಿಸರ್ವ್ ಬ್ಯಾಂಕ್ ಮಂಗಳವಾರ ತನ್ನ ರೆಪೊ ದರದಲ್ಲಿ ಶೇ.0.50ರಷ್ಟು ಕಡಿತವನ್ನು ಘೋಷಿಸಿದ್ದು, ಇದರಿಂದಾಗಿ ಗೃಹ ಹಾಗೂ ಕಾರ್ಪೊರೇಟ್ ಸಾಲಗಳು ಅಗ್ಗವಾಗಲಿವೆ. ಆರ್‌ಬಿಐ ಕಳೆದ ಮೂರು ವರ್ಷಗಳಲ್ಲಿ ಮಾಡಿರುವ ಗರಿಷ್ಠ ರೆಪೊ ದರ ಕಡಿತ ಇದಾಗಿದೆ.
ಮನೆಸಾಲದ ಕಂತು ಪಾವತಿಸುವ ಹಾಗೂ ಸಾಲ ಪಡೆಯಲು ಯೋಚಿಸುತ್ತಿರುವ ಲಕ್ಷಾಂತರ ಬಳಕೆದಾರರಿಗೆ ಈ ದರಕಡಿತ ಸಂತೋಷ ತರುವ ನಿರೀಕ್ಷೆಯಿದೆ. ಆರ್‌ಬಿಐಯು ದೇಶದ ವಾಣಿಜ್ಯ ಬ್ಯಾಂಕ್‌ಗಳಿಗೆ ನೀಡುವ ಸಾಲದ ಬಡ್ಡಿದರವನ್ನು ರೆಪೊ ದರ ಎಂಬುದಾಗಿ ಕರೆಯಲಾಗುತ್ತದೆ.
ಮುಂಬೈಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಆರ್‌ಬಿಐ ಗವರ್ನರ್ ರಘುರಾಮ್ ರಾಜನ್, ರೆಪೋದರವನ್ನು ಶೇ.0 .50 ರಷ್ಟು ಮೂಲಾಂಕ ( ಬೇಸಿಸ್ ಪಾಯಿಂಟ್) ಕಡಿಮೆ ಮಾಡಲಾಗಿದೆ ಎಂದು ತಿಳಿಸಿದ್ದರು. ಆದರೆ ಶೇ.4 ರಷ್ಟಿದ್ದ ಸಿ.ಆರ್.ಆರ್ (ನಗದು ಮೀಸಲು ಅನುಪಾತ) ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ದೊಡ್ಡ ಪ್ರಮಾಣದಲ್ಲಿ ರೆಪೊದರ ಕಡಿತಗೊಳಿಸುವ ಮೂಲಕ ರಾಜನ್ ಉದ್ಯಮ ವಲಯಕ್ಕೂ ಅಚ್ಚರಿ ಮೂಡಿಸಿದ್ದಾರೆ.
ಮುಂದಿನ ವರ್ಷದ ಜನವರಿಯ ವೇಳೆಗೆ ಗ್ರಾಹಕ ಹಣದುಬ್ಬರ ದರವು ಶೇ. 5.8ಕ್ಕೆ ತಲುಪುವ ನಿರೀಕ್ಷೆಯಿದೆಯೆಂದು ರಘುರಾಮ್ ರಾಜನ್ ತಿಳಿಸಿದ್ದರು. ಮಾರ್ಚ್ 2017ರ ವೇಳೆಗೆ ಹಣದುಬ್ಬರ ದರವನ್ನು ಶೇ.5ಕ್ಕಿಳಿಸಲು ಆರ್‌ಬಿಐ ಗಮನಹರಿಸಿರುವುದಾಗಿ ಅವರು ಹೇಳಿದ್ದರು.
ಮಧ್ಯಮ ಹಣದುಬ್ಬರದ ಮಟ್ಟ, ಹಾಗೂ ಅಮೆರಿಕದ ಫೆಡರಲ್ ರಿಸರ್ವ್( ವಿದೇಶಿ ವಿನಿಮಯ ಮೀಸಲು) ಬಡ್ಡಿದರ ಯಥಾಸ್ಥಿತಿಯಲ್ಲಿ ಮುಂದುವರಿದಿರುವುದು ಹಾಗೂ ಆರ್ಥಿಕ ಚೇತರಿಕೆ ಉತ್ತೇಜಿಸುವ ಅಗತ್ಯ ಈ ಎಲ್ಲ ಅಂಶಗಳನ್ನು ಮನಗಂಡು ಬಡ್ಡಿದರವನ್ನು ಇಳಿಕೆ ಮಾಡಲಾಗಿದೆಯೆಂದು ರಘುರಾಮ್ ರಾಜನ್ ತಿಳಿಸಿದ್ದರು.
ಅಮೆರಿಕದ ಫೆಡರಲ್ ರಿಸರ್ವ್ , ಕಳೆದ ಒಂಭತ್ತು ವರ್ಷಗಳಲ್ಲಿ, ಇದೇ ಮೊದಲ ಬಾರಿಗೆ ಮಾಡಹೊರಟಿರುವ ಬಡ್ಡಿದರ ಏರಿಕೆಯನ್ನು ವಿಳಂಬಗೊಳಿಸಿರುವುದು ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ಸಮಾಧಾನತಂದಿದೆಯೆಂದು ಅವರು ಹೇಳಿದ್ದಾರೆ. ಹಾಲಿ ಹಣಕಾಸು ವರ್ಷದ ತನ್ನ ದ್ವೈಮಾಸಿಕ ಹಣಕಾಸು ನೀತಿಯಲ್ಲಿ ಆರ್‌ಬಿಐ ರೆಪೊ ದರವನ್ನು ಕಡಿತಗೊಳಿಸುವಂತೆ ಕೇಂದ್ರ ಸರಕಾರ ಹಾಗೂ ಕೈಗಾರಿಕೆಗಳಿಂದ ಭಾರೀ ಒತ್ತಡವನ್ನು ಆರ್‌ಬಿಐ ಗವರ್ನರ್ ರಘುರಾಮ್ ರಾಜನ್ ಎದುರಿಸಿದ್ದರು. ಆರ್‌ಬಿಐ ತನ್ನ ಬಡ್ಡಿದರ ನೀತಿಯನ್ನು ಘೋಷಿಸಿದ ಕೆಲವೇ ನಿಮಿಷಗಳಲ್ಲಿ ಆಂಧ್ರಬ್ಯಾಂಕ್ ತನ್ನ ಸಾಲದ ದರಗಳಲ್ಲಿ 0.25ರಷ್ಟು ಕಡಿತ ಮಾಡಿದೆ. ಮುಂದಿನ ದಿನಗಳಲ್ಲಿ ಇತರ ಬ್ಯಾಂಕ್‌ಗಳೂ ಇದೇ ದಾರಿಯನ್ನು ಅನುಸರಿಸುವ ಸಾಧ್ಯತೆಯಿದೆ.
ಮುಂಬೈ ಶೇರು ಮಾರುಕಟ್ಟೆ ಚೇತರಿಕೆ
ಆರ್‌ಬಿಐ ರೆಪೊದರಲ್ಲಿ 50 ಮೂಲಾಂಕ (ಬೇಸಿಸ್ ಪಾಯಿಂಟ್) ಕಡಿತವನ್ನು ಘೋಷಿಸುತ್ತಿದ್ದಂತೆಯೇ ಕಳೆದ ಕೆಲವು ದಿನಗಳಿಂದ 300 ಸೂಚ್ಯಂಕಗಳಷ್ಟು ಕುಸಿತವನ್ನು ಕಂಡಿದ್ದ ಮುಂಬೈಯ ಶೇರು ಮಾರುಕಟ್ಟೆಯಲ್ಲಿ ಭಾರೀ ಚೇತರಿಕೆ ಕಂಡುಬಂದಿದೆ.
♦ಆರ್ಥಿಕತೆ ಉತ್ತೇಜಿಸಲು ಬಡ್ಡಿದರದಲ್ಲಿ ಶೇ.0.5ರಷ್ಟು ಕಡಿತ
♦ರೆಪೊದರ 6.75 ಶೇಕಡಕ್ಕೆ ನಿಗದಿ. ಇದು ಕಳೆದ ನಾಲ್ಕು ವರ್ಷಗಳಲ್ಲಿಯೇ ಅತಿ ಕನಿಷ್ಠ
♦ರೆಪೊ ದರ ಕಡಿತದ ಪ್ರಯೋಜನವನ್ನು ಬ್ಯಾಂಕ್‌ಗಳು ಗ್ರಾಹಕರಿಗೆ ವರ್ಗಾಯಿಸುವ ನಿರೀಕ್ಷೆ
♦ನಗದು ಮೀಸಲು ಅನುಪಾತ (ಸಿಆರ್‌ಆರ್) ಶೇ.4ರಲ್ಲೇ ಸ್ಥಿರ.
♦2015ರ ಸಾಲಿನ ನಿರೀಕ್ಷಿತ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ) ಪ್ರಮಾಣ 7.4 ಶೇಕಡ ಇಳಿಕೆ
♦ಜಾಗತಿಕ ಆರ್ಥಿಕ ವಾತಾವರಣ ದುರ್ಬಲವಾಗಿ ಗೋಚರಿಸುತ್ತಿದೆ. ಇದು ಭಾರತಕ್ಕೆ ಶುಭಸೂಚಕವಲ್ಲ
♦ಈ ಸಲದ ಹಣಕಾಸು ವರ್ಷದಲ್ಲಿ ಆರ್ಥಿಕ ಬೆಳವಣಿಗೆಯು ಚೇತರಿಸಿಕೊಳ್ಳುವ ಸಾಧ್ಯತೆ
♦ಸೆಪ್ಟಂಬರ್‌ನಲ್ಲಿ ಹಣದುಬ್ಬರ ಮತ್ತೆ ಏರಿಕೆ ಸಾಧ್ಯತೆ
♦ಸರಕಾರಿ ಬಾಂಡ್‌ಗಳಲ್ಲಿ ವಿದೇಶಿ ಬಂಡವಾಳ ಹೂಡಿಕೆ 2018ರೊಳಗೆ ಶೇ.5ರಷ್ಟು ಏರಿಕೆ.
♦ಡಿಸೆಂಬರ್ 1ರಂದು ಐದನೆ ದ್ವೈಮಾಸಿಕ ಹಣಕಾಸು ನೀತಿ.
♦♦♦
ಭಾರತೀಯ ರಿಸರ್ವ್ ಬ್ಯಾಂಕ್ ರೆಪೊ ದರದಲ್ಲಿ ಇಳಿಕೆ ಮಾಡಿದ ಬೆನ್ನಲ್ಲೇ ಭಾರತೀಯ ಸ್ಟೇಟ್‌ಬ್ಯಾಂಕ್ ತನ್ನ ಕನಿಷ್ಠ ಸಾಲದರವನ್ನು ಶೇ.0.4ರಷ್ಟು ಕಡಿತಗೊಳಿಸಿದೆ.

Write A Comment