ಮುಂಬೈ

ಗೋವಿಂದ ಪನ್ಸಾರೆ ಹತ್ಯೆ: ಸಂಕೇಶ್ವರದಲ್ಲಿ ಇಬ್ಬರ ಸೆರೆ

Pinterest LinkedIn Tumblr

GPಮುಂಬೈ, ಸೆ.18: ಹಿರಿಯ ಕಮ್ಯುನಿಸ್ಟ್ ಧುರೀಣ ಮತ್ತು ವಿಚಾರವಾದಿ ಗೋವಿಂದ್ ಪನ್ಸಾರೆ ಹತ್ಯೆ ಸಂಬಂಧವಾಗಿ ಬಂಧಿತನಾಗಿರುವ ಸನಾತನ ಸಂಸ್ಥೆಯ ಕಾರ್ಯಕರ್ತ ಸಮೀರ್ ವಿಷ್ಣು ಗಾಯಕ್ವಾಡ್‌ನ ಹತ್ತಿರದ ಸಂಬಂಧಿಕರಿಬ್ಬರನ್ನು ಮಹಾರಾಷ್ಟ್ರ ಪೊಲೀಸರು ಕರ್ನಾಟಕದಲ್ಲಿ ಬಂಧಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಸಂಕೇಶ್ವರ ಪಟ್ಟಣದಲ್ಲಿ ಗುರುವಾರ ಆರೋಪಿಗಳನ್ನು ಬಂಧಿಸಲಾಗಿದೆ. ಸುನೀಲ್ ಜಾಧವ್ ಮತ್ತು ಶ್ರೀಧರ್ ಜಾಧವ್ ಎಂಬ ಸಹೋದರರು ಬಂಧಿತ ಆರೋಪಿಗಳಾಗಿದ್ದಾರೆ. ಇವರಿಬ್ಬರೂ ಗಾಯಕ್ವಾಡ್‌ಗೆ ತಾಯಿಯ ಕಡೆಯಿಂದ ಸಂಬಂಧಿಗಳು. ಸಂಕೇಶ್ವರ ಪಟ್ಟಣದಲ್ಲೇ ಗಾಯಕ್ವಾಡ್ ತನ್ನ ಆರಂಭಿಕ ಶಿಕ್ಷಣವನ್ನು ಪಡೆದಿದ್ದ ಎನ್ನಲಾಗಿದೆ.
ಆರೋಪಿಗಳನ್ನು ಸಾಂಗ್ಲಿಗೆ ಕರೆದೊಯ್ಯಲಾಗಿದ್ದು, ಗಾಯಕ್ವಾಡ್‌ನ ಸಮ್ಮುಖದಲ್ಲೇ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಕೊಲ್ಹಾಪುರದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ತನಿಖಾಧಿಕಾರಿಗಳಿಂದ ಆರೋಪಿಗಳ ವಿಚಾರಣೆ ನಡೆದಿದೆ. ಇವರಿಬ್ಬರೂ ಬಲಪಂಥೀಯ ಸನಾತನ ಸಂಸ್ಥೆಯ ಜೊತೆಗೆ ಸಂಪರ್ಕ ಹೊಂದಿದ್ದಾರೆ ಎಂದು ಅವರು ಹೇಳಿದ್ದಾರೆ. ಗಾಯಕ್ವಾಡ್‌ನ ಮೊಬೈಲ್ ಫೋನ್ ಕರೆ ವಿವರಗಳನ್ನು ಆಧರಿಸಿ ಜಾಧವ್ ಸಹೋದರರನ್ನು ಬಂಧಿಸಲಾಗಿದೆ. ಗಾಯಕ್ವಾಡ್‌ನ ಮೊಬೈಲ್ ಕರೆ ವಿವರಗಳು ಮತ್ತು ಆತನೊಂದಿಗೆ ಸತತ ಸಂಪರ್ಕದಲ್ಲಿರುವ ವ್ಯಕ್ತಿಗಳ ಮೇಲೆ ವಿಶೇಷ ತನಿಖಾ ತಂಡ (ಸಿಟ್) ನಿಗಾ ಇರಿಸಿತ್ತು ಎಂದು ಈ ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಜಾಧವ್ ಸಹೋದರರ ಧ್ವನಿ ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ಅದರ ವಿಶ್ಲೇಷಣೆಗಾಗಿ ಗುಜರಾತ್‌ನ ಪ್ರಯೋಗಾಲಯಕ್ಕೆ ಕಳುಹಿಸಿ ಕೊಡಲಾಗಿದೆ.
ಜಾಧವ್ ಸಹೋರರ ಬಂಧನಕ್ಕೂ ಮುನ್ನ ಸಮೀರ್‌ನ ತಾಯಿ ಶಾಂತಾ ಮತ್ತು ಸಹೋದರರಾದ ಸಚಿನ್ ಮತ್ತು ಸಂದೀಪ್ ಗಾಯಕ್ವಾಡ್ ಅವರನ್ನೂ ವಿಚಾರಣೆ ಮಾಡಿ ಬಿಡುಗಡೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ಸಾಂಗ್ಲಿಯಲ್ಲಿ ಸಮೀರ್ ವಿಷ್ಣು ಗಾಯಕ್ವಾಡ್‌ನಿಂದ ಒಂದು ಲ್ಯಾಪ್‌ಟಾಪ್, 23 ಮೊಬೈಲ್ ಹ್ಯಾಂಡ್‌ಸೆಟ್‌ಗಳು ಹಾಗೂ 50 ಸಿಮ್ ಕಾರ್ಡ್‌ಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಆತನ ಮೊಬೈಲ್‌ನ ಕರೆ ವಿವರಗಳನ್ನು ತನಿಖಾ ತಂಡ ಪರಿಶೀಲಿಸುತ್ತಿದೆ. ಇದರ ಜೊತೆಗೆ, ಮುಂಬೈನ ಕಂಜುರ್‌ಮಾರ್ಗ್‌ನ ನಿವಾಸಿ ಜ್ಯೋತಿ ಕಾಂಬ್ಳೆ ಎಂಬಾಕೆಯನ್ನು ಕೂಡ ತನಿಖಾ ತಂಡ ವಿಚಾರಣೆ ಮಾಡಿದೆ. ಈ ಇಬ್ಬರು ಸಹೋದರರ ಜೊತೆಗೆ ಆಕೆ ಹೊಂದಿರುವ ಸಂಬಂಧದ ಕುರಿತು ತನಿಖೆ ನಡೆದಿದೆ. ಗಾಯಕ್ವಾಡ್‌ನ ಮೊಬೈಲ್ ಕರೆ ವಿವರಗಳನ್ನು ಆಧರಿಸಿ ಮುಂದಿನ ದಿನಗಳಲ್ಲಿ ಇನ್ನಷ್ಟು ಬಂಧನದ ಸಾಧ್ಯತೆಗಳಿವೆ ಎಂದು ಅವರು ತಿಳಿಸಿದ್ದಾರೆ.
ಸನಾತನ ಸಂಸ್ಥೆ ಪ್ರತಿಕ್ರಿಯೆ: ಸಮೀರ್ ಗಾಯಕ್ವಾಡ್ ಅಮಾಯಕನಾಗಿದ್ದು, ಪೊಲೀಸರು ಆತನನ್ನು ಈ ಪ್ರಕರಣದಲ್ಲಿ ಸಿಲುಕಿಸಿ ಹಾಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಆತನಿಗೆ ಎಲ್ಲ ಬಗೆಯ ಆವಶ್ಯಕ ಕಾನೂನು ನೆರವು ನೀಡಲಾಗುವುದು ಎಂದು ಸನಾತನ ಸಂಸ್ಥೆಯ ಆಡಳಿತ ಟ್ರಸ್ಟಿ ವೀರೇಂದ್ರ ಮರಾಠೆ ಹೇಳಿದ್ದಾರೆ.

Write A Comment