ರಾಷ್ಟ್ರೀಯ

ನೇತಾಜಿಯ 64 ರಹಸ್ಯ ಕಡತಗಳು ಬಹಿರಂಗ

Pinterest LinkedIn Tumblr

CMMಕೋಲ್ಕತಾ, ಸೆ.18: ಹಿರಿಯ ಸ್ವಾತಂತ್ರಹೋರಾಟಗಾರ ನೇತಾಜಿ ಸುಭಾಶ್ಚಂದ್ರ ಬೋಸ್‌ರವರಿಗೆ ಸಂಬಂಧಿಸಿದ 64 ರಹಸ್ಯ ಕಡತಗಳನ್ನು ಪಶ್ಚಿಮ ಬಂಗಾಳ ಸರಕಾರ ಶುಕ್ರವಾರ ಬಹಿರಂಗಗೊಳಿಸಿದೆ.
ದೇಶದ ಹಿರಿಯ ರಾಷ್ಟ್ರವಾದಿ ನಾಯಕರಲ್ಲಿ ಒಬ್ಬರಾಗಿರುವ ನೇತಾಜಿ ಯವರಿಗೆ ಸಂಬಂಧಿಸಿದ ರಹಸ್ಯ ಕಡತಗಳನ್ನು ಬಹಿರಂಗಗೊಳಿಸಬೇಕೆಂಬ ದೀರ್ಘಕಾಲದ ಬೇಡಿಕೆಯನ್ನು ಈಡೇ ರಿಸಿದ ಪಶ್ಚಿಮ ಬಂಗಾಳ ಸರಕಾರದ ಕ್ರಮವನ್ನು ‘ಐತಿಹಾಸಿಕ’ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಣ್ಣಿಸಿದ್ದಾರೆ.ದೇಶದ ಜನತೆ ಸತ್ಯವನ್ನು ತಿಳಿಯುವಂತಾಗ ಬೇಕು. ಕೇಂದ್ರ ಸರಕಾರದ ಬಳಿ ನೇತಾಜಿಯವರಿಗೆ ಸಂಬಂಧಿಸಿದ 130 ಕಡತಗಳಿವೆ. ಕೇಂದ್ರವು ಕೂಡ ಈ ದಿಸೆಯಲ್ಲಿ ನಿರ್ಧಾರ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ. ಪೊಲೀಸ್ ಮತ್ತು ಸರಕಾರದ ಲಾಕರ್‌ಗಳಲ್ಲಿ ಹಲವು ವರ್ಷಗಳಿಂದ ಭದ್ರವಾಗಿದ್ದ, 12,744 ಪುಟಗಳನ್ನು ಒಳಗೊಂಡ 64 ಕಡತಗಳನ್ನು ಬೋಸ್ ಕುಟುಂಬದ ಸದಸ್ಯರ ಸಮ್ಮುಖದಲ್ಲಿ ಬಹಿರಂಗಗೊಳಿಸಲಾಯಿತು. ಆಝಾದ್ ಹಿಂದ್ ಫೌಜ್ (ಐಎನ್‌ಎ)ಸ್ಥಾಪಕರಾಗಿದ್ದ ನೇತಾಜಿಯವರಿಗೆ ಸಂಬಂಧಿಸಿದ ಕಡತಗಳನ್ನು ಬಹಿರಂಗಗೊಳಿಸಬೇಕೆಂದು ಬೋಸ್ ಕುಟುಂಬಸ್ಥರು ಹಲವು ವರ್ಷಗಳಿಂದ ಒತ್ತಾಯಿಸುತ್ತಲೇ ಬಂದಿದ್ದಾರೆ.
ಸೋಮವಾರ ಲಭ್ಯ: ಕೋಲ್ಕತಾ ಪೊಲೀಸ್ ಮ್ಯೂಸಿಯಂನಲ್ಲಿ ಗಾಜಿನ ಕಪಾಟುಗಳಲ್ಲಿ ಪ್ರದರ್ಶನಕ್ಕೆ ಇರಿಸಿರುವ ನೇತಾಜಿಯವರ ಕಡತಗಳು ಸೋಮವಾರದಿಂದ ಸಾರ್ವಜನಿಕರಿಗೆ ಲಭ್ಯವಾಗಲಿವೆ ಎಂದು ಮಹಾನಗರದ ಪೊಲೀಸ್ ಆಯುಕ್ತ ಸುರ್ಜೀತ್‌ಕಾರ್ ಪುರಕಾಯಸ್ಥ ಹೇಳಿದ್ದಾರೆ. 64 ಕಡತಗಳ ಪೈಕಿ 55 ಕೋಲ್ಕತಾ ಪೊಲೀಸರ ಬಳಿ ಹಾಗೂ ಉಳಿದ ಒಂಬತ್ತು ಕಡತಗಳು ರಾಜ್ಯ ಪೊಲೀಸ್ ಇಲಾಖೆಯೊಂದಿಗೆ ಇದ್ದವು. ಈ ಕಡತಗಳ ಡಿಜಿಟಲ್ ರೂಪದ ಪ್ರತಿಯೊಂದನ್ನು ನೇತಾಜಿ ಕುಟುಂಬದ ಸದಸ್ಯರಿಗೆ ಪೊಲೀಸ್ ಆಯುಕ್ತರು ಈ ಸಂದರ್ಭದಲ್ಲಿ ಹಸ್ತಾಂತರಿಸಿದರು.
‘ಇದೊಂದು ಸರಿಯಾದ ಹೆಜ್ಜೆ. ಇನ್ನು ಕೇಂದ್ರ ಸರಕಾರದ ಬಳಿ ಇರುವ 130 ಕಡತಗಳನ್ನು ಬಹಿರಂಗಗೊಳಿಸುವುದು ಆ ಸರಕಾರದ ಕರ್ತವ್ಯವಾಗಿದೆ’ ಎಂದು ನೇತಾಜಿಯವರ ಮರಿಮೊಮ್ಮಗ ಚಂದ್ರಾ ಬೋಸ್ ಹೇಳಿದ್ದಾರೆ.
‘70 ವರ್ಷಗಳಷ್ಟು ದೀರ್ಘಕಾಲ ಕಡತಗಳನ್ನು ರಹಸ್ಯವಾಗಿರಿಸುವ ಮೂಲಕ ಕೆಲವು ರಾಜಕೀಯ ನಾಯಕರು ದೇಶಕ್ಕೆ ದ್ರೋಹ ಬಗೆದಿದ್ದಾರೆ. ಇಂತಹ ನಾಯಕರ ಮುಖವಾಡ ಬಹಿರಂಗಗೊಳಿಸಲು ಕೇಂದ್ರ ಸರಕಾರವೂ ಕೂಡ ಕಡತಗಳನ್ನು ಬಹಿರಂಗ ಮಾಡಬೇಕು’ ಎಂದು ಅವರು ಒತ್ತಾಯಿಸಿದರು.
ಕಡತಗಳನ್ನು ಬಹಿರಂಗಗೊಳಿಸುವ ಮೂಲಕ ಮಮತಾ ಬ್ಯಾನರ್ಜಿಯವರು ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರೆ ಎಂದು ಟಿಎಂಸಿ ಸಂಸದ ಹಾಗೂ ನೇತಾಜಿಯವರ ಕುಟುಂಬ ಸದಸ್ಯರಾಗಿರುವ ಕೃಷ್ಣಾ ಬೋಸ್ ಪ್ರತಿಕ್ರಿಯೆ ನೀಡಿದ್ದಾರೆ. ಈವರೆಗೆ ಗಾಸಿಪ್‌ಗಳು ಮಾತ್ರ ಕೇಳಿ ಬರುತ್ತಿದ್ದವು. ಈಗ ಸತ್ಯ ಹೊರಬಿದ್ದಿದೆ. ಕಡತಗಳು ಬಹಿರಂಗಗೊಂಡಿದ್ದರಿಂದ ನನಗೆ ಬಹಳ ಸಂತಸವಾಗಿದೆ ಎಂದು ಅವರು ಹೇಳಿದ್ದಾರೆ.
ವಿಮಾನಾಪಘಾತದಲ್ಲಿ ನೇತಾಜಿ ಸತ್ತಿಲ್ಲ: ಮಮತಾ
ಕೋಲ್ಕತಾ: ತೈವಾನ್ ವಿಮಾನ ಅಪಘಾತದ ಘಟನೆಯಲ್ಲಿ ನೇತಾಜಿ ಸುಭಾಶ್ಚಂದ್ರ ಬೋಸ್ ಸತ್ತಿಲ್ಲ. 1945ರ ನಂತರವೂ ಅವರು ಬದುಕಿದ್ದರು ಎಂಬುದು ನನ್ನ ಪ್ರಬಲ ನಂಬಿಕೆಯಾಗಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶುಕ್ರವಾರ ಹೇಳಿದ್ದಾರೆ.
ತೈವಾನ್ ದೇಶದ ತೈಹೊಕು ಎಂಬಲ್ಲಿ 1945ರ ಆಗಸ್ಟ್ 18ರಂದು ಸಂಭವಿಸಿದ್ದ ವಿಮಾನ ಅಪಘಾತದಲ್ಲಿ ನೇತಾಜಿ ಮೃತಪಟ್ಟಿದ್ದರು ಎಂಬುದು ಈವರೆಗಿನ ನಂಬಿಕೆಯಾಗಿದೆ. ನೇತಾಜಿಯವರಿಗೆ ಸಂಬಂಧಿಸಿದ 64 ರಹಸ್ಯ ಕಡತಗಳನ್ನು ಬಹಿರಂಗಗೊಳಿಸಿದ ನಂತರ ಮಮತಾ ಬ್ಯಾನರ್ಜಿ ಈ ಮಾತುಗಳನ್ನು ಹೇಳಿದ್ದಾರೆ.
ಬೋಸ್ ಕುರಿತಂತೆ
ತಾನು ಈವರೆಗೆ ಓದಿಕೊಂಡಿರುವ ಮಾಹಿತಿಗಳನ್ನು ಆಧರಿಸಿ ಈ ಮಾತುಗಳನ್ನು ಹೇಳುತ್ತಿರುವುದಾಗಿ ಮಮತಾ ಹೇಳಿದರು. ಬೋಸ್ ಕಡತಗಳನ್ನು ಬಹಿರಂಗಗೊಳಿಸುವ ಮೂಲಕ ಪಶ್ಚಿಮ ಬಂಗಾಳ ಸರಕಾರವು ತನ್ನ ಕರ್ತವ್ಯವನ್ನು ನೆರವೇರಿಸಿದೆ. ಇನ್ನು ಕೇಂದ್ರ ಸರಕಾರವು ಈ ದಿಕ್ಕಿನಲ್ಲಿ ನಿರ್ಧಾರವೊಂದನ್ನು ತೆಗೆದುಕೊಳ್ಳಬೇಕು ಎಂದು ಮಮತಾ ನುಡಿದರು. ನೇತಾಜಿಯವರಿಗೆ ಸಂಬಂಧಿಸಿದಂತೆ ನಮ್ಮ ಬಳಿ ಇದ್ದ ಎಲ್ಲ ಕಡತಗಳು ಮತ್ತು ವರದಿಗಳನ್ನು ಬಹಿರಂಗಗೊಳಿಸುವ ಮೂಲಕ ನನ್ನ ಕರ್ತವ್ಯವನ್ನು ಪೂರೈಸಿದ್ದೇನೆ. ಇನ್ನು ಕೇಂದ್ರ ಸರಕಾರವು ಅದರ ವಶದಲ್ಲಿರುವ ಎಲ್ಲ ವರದಿಗಳನ್ನು ಬಹಿರಂಗಗೊಳಿಸಬೇಕು. ನಿಮಗೆ ಮುಚ್ಚಿಟ್ಟುಕೊಳ್ಳುವಂತಹದ್ದು ಏನೂ ಇಲ್ಲ ಎಂದಾದಲ್ಲಿ, ನೀವ್ಯಾಕೆ ವರದಿಗಳನ್ನು ಬಹಿರಂಗಗೊಳಿಸುತ್ತಿಲ್ಲ? ಎಂದು ಕೋಲ್ಕತಾದ ಪೊಲೀಸ್ ಮ್ಯೂಸಿಯಂನಲ್ಲಿ ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡುತ್ತ ಮಮತಾ ಬ್ಯಾನರ್ಜಿ ಪ್ರಶ್ನಿಸಿದರು.
ನೇತಾಜಿಯವರ ನಾಪತ್ತೆ ಕುರಿತಾದ ರಹಸ್ಯ ಮತ್ತು ಈ ಹಿರಿಯ ಧೀಮಂತ ನಾಯಕ ತಮ್ಮ ಕೊನೆಯ ದಿನಗಳನ್ನು ಯಾವಾಗ, ಎಲ್ಲಿ ಹಾಗೂ ಹೇಗೆ ಕಳೆದರು ಹಾಗೂ ಕೊನೆಯಲ್ಲಿ ಹೇಗೆ ಮೃತಪಟ್ಟರು ಎಂಬುದರ ಬಗ್ಗೆ ನನಗೆ ಚಿಕ್ಕಂದಿನಿಂದಲೂ ಬಹಳ ಕುತೂಹಲವಿತ್ತು ಎಂದು ಮಮತಾ ಬ್ಯಾನರ್ಜಿ ತಿಳಿಸಿದರು.
ಬಹುಶಃ, ನನ್ನಂತೆ, ಇಡೀ ಜಗತ್ತು ಈ ರಹಸ್ಯವನ್ನು ತಿಳಿದುಕೊಳ್ಳಲು ಉತ್ಸುಕವಾಗಿರಬಹುದು. ಈ ಕಡತಗಳ ಕೆಲವೊಂದು ಪುಟಗಳನ್ನು ನಾನು ಓದಿದ್ದೇನೆ. 1945ರ ಆಗಸ್ಟ್ ನಂತರವೂ ನೇತಾಜಿ ಜೀವಂತವಿದ್ದರು ಎಂಬುದನ್ನು ಇವು ಸೂಚಿಸುತ್ತವೆ. ಕೇಂದ್ರ ಸರಕಾರದ ಬಳಿ ಇರುವ ಕಡತಗಳಲ್ಲಿರುವ ಮಾಹಿತಿ ಬಗ್ಗೆ ನನಗೆ ತಿಳಿದಿಲ್ಲ. ನೇತಾಜಿ ಕುರಿತಂತೆ ಯಾರಿಗೂ ಗೊತ್ತಿಲ್ಲದ ಇನ್ನಷ್ಟು ಕಥೆಗಳನ್ನು ಈ ವರದಿಗಳು ಬಹಿರಂಗಗೊಳಿಸಬಹುದು ಎಂದು ಮಮತಾ ಹೇಳಿದರು. 2011ರಲ್ಲಿ ಟಿಎಂಸಿ ಸರಕಾರ ಅಧಿಕಾರಕ್ಕೆ ಬರುವ ತನಕವೂ ನೇತಾಜಿ ಕುರಿತಾದ ಈ ಕಡತಗಳು/ವರದಿಗಳ ಬಗ್ಗೆ ತಮಗೆ ಮಾಹಿತಿ ಇರಲಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.
ನೇತಾಜಿ ನಾಪತ್ತೆ ಪ್ರಕರಣದಲ್ಲಿ ಜವಾಹರಲಾಲ್ ನೆಹರೂ ಮತ್ತು ಗಾಂಧಿ ಕುಟುಂಬದ ಪಾತ್ರದ ಕುರಿತಂತೆ ಪ್ರಶ್ನಿಸಿದಾಗ, ಯಾವುದೇ ಸಾಕ್ಷಾಧಾರವಿಲ್ಲದೆ ಈ ಬಗ್ಗೆ ಪ್ರತಿಕ್ರಿಯೆ ನೀಡಲು ತಾನು ಬಯಸುವುದಿಲ್ಲ ಎಂದು ಅವರು ಉತ್ತರಿಸಿದರು. ಸಾಕ್ಷಾಧಾರವಿಲ್ಲದೆ ಯಾರನ್ನೇ ಆಗಲಿ ದೂಷಿಸುವುದು ಇಲ್ಲವೇ ಪ್ರತಿಕ್ರಿಯೆ ನೀಡುವುದು ನೈತಿಕ ಕ್ರಮವಾಗದು. ಆದರೆ, ಸ್ವಾತಂತ್ರಾನಂತರವೂ ರಾಜ್ಯ ಮತ್ತು ನಗರ ಪೊಲೀಸ್‌ನ ಗುಪ್ತಚರ ಘಟಕಗಳು ಬೋಸ್ ಕುಟುಂಬದ ಮೇಲೆ ಕಠಿಣ ನಿಗಾ ಇರಿಸಿದ್ದು ಸುಳ್ಳಲ್ಲ ಎಂದು ಅವರು ತಿಳಿಸಿದರು.

Write A Comment