ಮುಂಬೈ

ಗೋವಿಂದ್ ಪನ್ಸಾರೆ ಹತ್ಯೆ: ಸನಾತನ ಸಂಸ್ಥೆಯ ಕಾರ್ಯಕರ್ತನ ಸೆರೆ

Pinterest LinkedIn Tumblr

pansareಸಾಂಗ್ಲಿ, ಸೆ.16: ಹಿರಿಯ ಸಿಪಿಐ ನಾಯಕ ಮತ್ತು ವಿಚಾರವಾದಿ ಗೋವಿಂದ್ ಪನ್ಸಾರೆ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಂಗ್ಲಿ ಪಟ್ಟಣದ ನಿವಾಸಿ, ಸನಾತನ ಸಂಸ್ಥೆಯ ಕಾರ್ಯಕರ್ತ ಸಮೀರ್ ವಿಷ್ಣು ಗಾಯಕ್ವಾಡ್ ಎಂಬಾತನನ್ನು ಮಹಾರಾಷ್ಟ್ರ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಈತನ ವಿಚಾರಣೆಯ ಬಳಿಕ ಗೋವಾ, ಪುಣೆ, ಮುಂಬೈಗಳಲ್ಲಿ ಮಹಿಳೆ ಸೇರಿದಂತೆ ಇನ್ನೂ ಮೂವರನ್ನು ಬಂಧಿಸಲಾಗಿದೆ.
ಸನಾತನ ಸಂಸ್ಥಾದ ಸಕ್ರಿಯ ಸದಸ್ಯ ವಿಷ್ಣು ಗಾಯಕ್ವಾಡ್‌ನನ್ನು ಸಾಂಗ್ಲಿ ಮತ್ತು ಕೊಲ್ಹಾಪುರ ಪೊಲೀಸರು ಜಂಟಿ ಕಾರ್ಯಾಚರಣೆಯ ಮೂಲಕ ಬಂಧಿಸಿದ್ದಾರೆ. ಆತನ ಮೊಬೈಲ್ ಫೋನ್ ದಾಖಲೆಗಳ ವಿವರಗಳನ್ನು ಆಧರಿಸಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು.
ಸಾಂಗ್ಲಿಯ ಸ್ಥಳೀಯ ನ್ಯಾಯಾಲಯ ವೊಂದರಲ್ಲಿ ಬುಧವಾರ ಆರೋಪಿಯನ್ನು ಹಾಜರುಪಡಿಸಲಾಗಿದ್ದು, ನ್ಯಾಯಾಧೀಶರು ಏಳು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದ್ದಾರೆ.
ತಾಂತ್ರಿಕ ನಿಗಾ ವ್ಯವಸ್ಥೆಯನ್ನು ಆಧರಿಸಿ ವಿಷ್ಣು ಗಾಯಕ್ವಾಡ್‌ನನ್ನು ಬಂಧಿಸಲಾಗಿದೆ. ವಿಚಾರಣೆಯ ಮೂಲಕ ಆತನಿಂದ ಕೆಲವೊಂದು ಸಾಕ್ಷಾಧಾರಗಳನ್ನು ಪತ್ತೆ ಹಚ್ಚಬೇಕಾಗಿದೆ. ಸಮೀರ್ ಬಂಧನದ ಮೂಲಕ ಪನ್ಸಾರೆ ಹತ್ಯೆ ಪ್ರಕರಣವನ್ನು ಭೇದಿಸಲಾಗಿದೆ ಎಂದೇನೂ ನಾವು ಹೇಳಿಕೊಳ್ಳುವುದಿಲ್ಲ ಎಂದು ಸಿಐಡಿಯ ಹಿರಿಯ ಪೊಲೀಸ್ ಅಧಿಕಾರಿ ಸಂಜಯ್ ಕುಮಾರ್ ಹೇಳಿದ್ದಾರೆ.
ವಿಷ್ಣು ಗಾಯಕ್ವಾಡ್ ಪನ್ಸಾರೆ ಮೇಲೆ ಗುಂಡು ಹಾರಿಸಿದಾತನೆಂದು ನಾವು ಹೇಳಿಲ್ಲ. ಈತ ಕೊಲೆ ಘಟನೆಯಲ್ಲಿ ಸಂಚು ರೂಪಿಸಿದ ವ್ಯಕ್ತಿಯಾಗಿದ್ದಾನೆ ಎಂದು ಅವರು ತಿಳಿಸಿದ್ದಾರೆ.
ಮಂಗಳವಾರ ರಾತ್ರಿ ಪೊಲೀಸರು ಸಮೀರ್‌ನನ್ನು ವಶಕ್ಕೆ ತೆಗೆದುಕೊಂಡಿದ್ದರು. ಆರಂಭಿಕ ವಿಚಾರಣೆಯ ನಂತರ ಬುಧವಾರ ಅಧಿಕೃತವಾಗಿ ಬಂಧಿಸಿದರು. ಸಾಂಗ್ಲಿ ಜಿಲ್ಲೆಯಲ್ಲಿ ಹಲವಾರು ಪ್ರಕರಣಗಳಲ್ಲಿ ಸಮೀರ್ ಆರೋಪಿಯಾಗಿದ್ದಾನೆ. ಕೆಲವು ವರ್ಷಗಳ ಹಿಂದೆ ಸಾಂಗ್ಲಿಯಲ್ಲಿ ಮೊಬೈಲ್ ದುರಸ್ತಿ ಅಂಗಡಿಯೊಂದನ್ನು ಈತ ನಡೆಸುತ್ತಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪನ್ಸಾರೆ ಸೊಸೆ ಪ್ರತಿಕ್ರಿಯೆ: ಹತ್ಯೆ ಆರೋಪಿಯ ಬಂಧನದ ಕುರಿತಂತೆ ಇನ್ನಷ್ಟು ಮಾಹಿತಿಯನ್ನು ನಾವು ನಿರೀಕ್ಷಿಸುತ್ತಿದ್ದೇವೆ. ಪ್ರಗತಿಪರ ಚಿಂತನೆಗಳಿಗೆ ಪ್ರಸಿದ್ಧವಾಗಿರುವ ಪ್ರದೇಶವೊಂದಕ್ಕೆ ಸೇರಿದ ವ್ಯಕ್ತಿ ಪನ್ಸಾರೆ ಹತ್ಯೆಯಲ್ಲಿ ಶಾಮೀಲಾಗಿರುವುದು ದುರದೃಷ್ಟಕರ ಎಂದು ಪನ್ಸಾರೆ ಸೊಸೆ ಮೇಧಾ ಹೇಳಿದ್ದಾರೆ.
ಖ್ಯಾತ ವಿಚಾರವಾದಿ ನರೇಂದ್ರ ದಾಭೋಲ್ಕರ್ ಹತ್ಯೆ ನಡೆದು ಕೆಲವೇ ತಿಂಗಳುಗಳ ಅಂತರದಲ್ಲಿ ಗೋವಿಂದ್ ಪನ್ಸಾರೆ ಹಂತಕರ ಗುಂಡಿಗೆ ಬಲಿಯಾಗಿದ್ದರು. ಎರಡೂ ಘಟನೆಗಳಲ್ಲಿ ಬಹಳಷ್ಟು ಸಾಮ್ಯತೆ ಇದೆ. ಈ ಎರಡೂ ಘಟನೆಗಳು ಮಹಾರಾಷ್ಟ್ರವೂ ಸೇರಿದಂತೆ ದೇಶಾದ್ಯಂತ ಬುದ್ಧಿಜೀವಿಗಳ ವಲಯದಲ್ಲಿ ಭಾರೀ ಆತಂಕಕ್ಕೆ ಕಾರಣವಾಗಿದ್ದವು.

Write A Comment