ಮುಂಬೈ: ಇದು ಮಹಾರಾಷ್ಟ್ರ ರಾಜ್ಯದ ಅಹ್ಮದ್ ನಗರ್ ಜಿಲ್ಲೆಯ ಪರ್ವತ ಮನುಷ್ಯನೊಬ್ಬನ ಕಥೆ. 84 ವರ್ಷದ ರಾಜಾರಾಮ್ ಬಾಪ್ ಕರ್ ಎಂಬವರು ಪರ್ವತವನ್ನು ಕೊರೆದು ರಸ್ತೆ ನಿರ್ಮಿಸಿ ಸಾಹಸ ಮೆರೆದಿದ್ದಾರೆ.
84 ವರ್ಷದ ಬಾಪ್ ಕರ್ ನಿವೃತ್ತ ಶಿಕ್ಷಕರಾಗಿದ್ದು, ಕಳೆದ 57 ವರ್ಷಗಳಲ್ಲಿ ಅವರು ಪರ್ವತವನ್ನು ಕೊರೆದು 40 ಕಿಲೋ ಮೀಟರ್ ಉದ್ದದ 7 ರಸ್ತೆ ನಿರ್ಮಾಣ ಮಾಡಿದ್ದಾರೆ.
ಗ್ರಾಮದ ನಿವಾಸಿಗಳಿಂದ ಬಾಪ್ ರಾಕ್ ಗುರೂಜಿ ಎಂದು ಕರೆಯಲ್ಪಡುವ ಬಾಪ್ ರಾಕ್ ಗಾಂಧಿ ಅನುಯಾಯಿ. ಬಿಳಿ ಶರ್ಟ್ ಮತ್ತು ಬಿಳಿ ಪಂಚೆ ಉಟ್ಟುಕೊಳ್ಳುವ ಅವರು ಸರಳ ಜೀವನವನ್ನು ಅಳವಡಿಸಿಕೊಂಡವರು. ಸ್ವಾತಂತ್ರ್ಯ ಪಡೆದ ದಿನಗಳಲ್ಲಿ ಇವರ ಗ್ರಾಮದಿಂದ ಪಕ್ಕದ ಗ್ರಾಮಕ್ಕೆ ತೆರಳಲು ಸರಿಯಾದ ರಸ್ತೆ ಇರಲಿಲ್ಲ. ತುಂಬಾ ಕಷ್ಟದಲ್ಲಿಯೇ ಓದಿದ್ದ ಅವರು ನಂತರ ಶಿಕ್ಷಕರಾದರು.
ಊರಿಗೆ ರಸ್ತೆ ನಿರ್ಮಿಸಿಕೊಡುವಂತೆ ಇದ್ದಬದ್ದ ಜನಪ್ರತಿನಿಧಿಗಳನ್ನೆಲ್ಲಾ ಕೇಳಿಕೊಂಡರು. ಪ್ರಯೋಜನವಾಗಲಿಲ್ಲ. ಆಗ ತಾವೇ ದೃಢ ನಿರ್ಧಾರ ಮಾಡಿಕೊಂಡು ಕಾರ್ಮಿಕರನ್ನು ಹಿಡಿದು ಕೆಲಸ ಮಾಡಲು ಆರಂಭಿಸಿದರು. ತಮ್ಮ ಸ್ವಂತ ಖರ್ಚಿನಿಂದಲೇ ಕಾರ್ಮಿಕರಿಗೆ ಹಣ ನೀಡುತ್ತಿದ್ದರು.ಸರ್ಕಾರದಿಂದ ಏನೂ ಸಹಾಯ ಬರಲಿಲ್ಲ ಎನ್ನುತ್ತಾರೆ ಬಾಪ್ ಕರ್.
1968ರಲ್ಲಿ ಒಂದು ಸೈಕಲ್ ಹೋಗಲೂ ಕಷ್ಟವಾಗುತ್ತಿದ್ದ ಜಾಗದಲ್ಲಿ ಈಗ ಸುಂದರ ಮಾರ್ಗ ನಿರ್ಮಾಣವಾಗಿ ದೊಡ್ಡ ದೊಡ್ಡ ವಾಹನಗಳು ಸಂಚರಿಸುತ್ತಿವೆ.