ಮುಂಬೈ: ತಮ್ಮ ವಿರುದ್ದ ವರದಕ್ಷಿಣೆ ಕಿರುಕುಳದ ದೂರು ದಾಖಲಾಗುತ್ತಿದ್ದಂತೆಯೇ ತಲೆಮರೆಸಿಕೊಂಡಿರುವ ಸ್ವಯಂ ಘೋಷಿತ ದೇವತೆ ‘ರಾಧೇ ಮಾ’ ವಿದೇಶಕ್ಕೆ ಪರಾರಿಯಾಗಲು ಹವಣಿಸುತ್ತಿದ್ದಾರೆಂದು ಹೇಳಲಾಗಿದೆ.
ತಮ್ಮ ಪತಿ ಮತ್ತಾತನ ಮನೆಯವರಿಗೆ ಹೆಚ್ಚಿನ ವರದಕ್ಷಿಣೆ ಪಡೆಯುವಂತೆ ‘ರಾಧೇ ಮಾ’ ಪ್ರಚೋದನೆ ನೀಡಿದ್ದಾರೆಂದು ಮುಂಬೈನ ಖಾಂಡಿವಲಿ ಪೊಲೀಸ್ ಠಾಣೆಯಲ್ಲಿ ಮಹಿಳೆಯೊಬ್ಬರು ಪ್ರಕರಣ ದಾಖಲಿಸಿದ್ದು, ‘ರಾಧೇ ಮಾ’ ಸನ್ನಿಧಿಯಲ್ಲಿ ಪತಿ ಮನೆಯವರು ತಮ್ಮನ್ನು ಬಿಟ್ಟಿದ್ದ ವೇಳೆ ಕೆಲಸದಾಳಿಗಿಂತ ಕೀಳಾಗಿ ನಡೆಸಿಕೊಂಡಿದ್ದರೆಂದು ಅವರು ಆರೋಪಿಸಿದ್ದಾರೆ. ಅಲ್ಲದೇ ನೀಲಿ ಚಿತ್ರಗಳ ಮಾಜಿ ತಾರೆ ಸನ್ನಿ ಲಿಯೋನ್ ಅಭಿಮಾನಿಯಾಗಿರುವ ‘ರಾಧೇ ಮಾ’ ಬಾಲಿವುಡ್ ಗೀತೆಗಳಿಗೆ ನೃತ್ಯ ಮಾಡುತ್ತಾರೆಂದು ಹೇಳಿದ್ದರು.
ಇದೀಗ ‘ರಾಧೇ ಮಾ’, ಮಹಿಳೆಯ ಪತಿ ಹಾಗೂ ಆತನ ಕುಟುಂಬ ಸದಸ್ಯರ ವಿರುದ್ದ ವರದಕ್ಷಿಣೆ ಕಿರುಕುಳ ಸೇರಿದಂತೆ ವಿವಿಧ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದು, ಪೊಲೀಸರು ಹುಡುಕಾಟ ನಡೆಸಿದ್ದಾರೆ. ‘ರಾಧೇ ಮಾ’ ವಿರುದ್ದ ಪ್ರಕರಣ ದಾಖಲಾಗುತ್ತಿದ್ದಂತೆಯೇ ವಿವಿಧ ಧಾರ್ಮಿಕ ಗುರುಗಳು ನಾಸಿಕ್ ಕುಂಭ ಮೇಳದಲ್ಲಿ ನಡೆಯುವ ಪವಿತ್ರ ಶಾಹಿ ಸ್ನಾನದಲ್ಲಿ ‘ರಾಧೇ ಮಾ’ ಪಾಲ್ಗೊಳ್ಳಬಾರದೆಂದು ಆಗ್ರಹಿಸಿದ್ದಾರೆ. ಈ ಮಧ್ಯೆ ‘ರಾಧೇ ಮಾ’ ವಿದೇಶಕ್ಕೆ ತೆರಳುವ ಹವಣಿಕೆಯಲ್ಲಿರುವುದರಿಂದ ಪೊಲೀಸರು ಕೂಡಲೇ ಅವರನ್ನು ಬಂಧಿಸಬೇಕೆಂದು ಆನೇಕರು ಸಾಮಾಜಿಕ ಜಾಲ ತಾಣದಲ್ಲಿ ಆಗ್ರಹಿಸಿದ್ದಾರೆ.