ಮುಂಬೈ ಮೇಲೆ ನಡೆದ 26/11ರ ದಾಳಿಯ ಹಿಂದೆ ಪಾಕಿಸ್ತಾನ ಸಾಕಷ್ಟು ಕೆಲಸ ಮಾಡಿದೆ ಎಂಬ ಸತ್ಯವನ್ನು ಅಂತೂ ಪಾಕ್ ನ ಮಾಜಿ ತನಿಖಾಧಿಕಾರಿ ಹಾಗೂ ಎಫ್ಐಎ ಮುಖ್ಯಸ್ಥರಾಗಿದ್ದ ತಾರಿಖ್ ಖೋಸಾ ಒಪ್ಪಿಕೊಳ್ಳುವ ಮೂಲಕ ಭಾರತದಲ್ಲಿನ ಭಯೋತ್ಪಾದನೆಗೆ ಪಾಕಿಸ್ತಾನವೇ ಕಾರಣ ಎಂಬ ರಹಸ್ಯವನ್ನು ಬಹಿರಂಗಪಡಿಸಿದ್ದಾರೆ.
ಪಾಕಿಸ್ತಾನದ ‘ಡಾನ್’ ಪತ್ರಿಕೆಗೆ ಬರೆದ ಲೇಖನದಲ್ಲಿ ಮುಂಬೈ ದಾಳಿ ಪ್ರಕರಣದ ಕುರಿತಾಗಿ ಬರೆದಿರುವ ಖೋಸಾ, ಅಜ್ಮಲ್ ಕಸಬ್ ಪಾಕಿಸ್ತಾನಿ ಪ್ರಜೆಯಾಗಿದ್ದು, 26/11ರ ದಾಳಿ ನಡೆಸಿದ್ದು ಪಾಕಿಸ್ತಾನದಲ್ಲಿ ತರಬೇತಿ ಪಡೆದ ಭಯೋತ್ಪಾದಕನಾಗಿದ್ದ ಎಂಬ ಅಂಶವನ್ನು ಉಲ್ಲೇಖಿಸಿದ್ದಾರೆ. ಅಲ್ಲದೇ 2008ರ ಮುಂಬೈ ದಾಳಿಗಳ ತನಿಖೆಯನ್ನೂ ಸಹ ನಡೆಸಿದ್ದ ಪಾಕಿಸ್ತಾನಿ ತನಿಖಾಧಿಕಾರಿ ಖೋಸಾ, ತಮ್ಮ ರಾಷ್ಟ್ರವು ಸತ್ಯವನ್ನು ಎದುರೀಸುವ ಮತ್ತು ತಪ್ಪುಗಳನ್ನು ಒಪ್ಪಿಕೊಳ್ಳುವ ಅಗತ್ಯತೆಯಿದ್ದು ಆ ಮೂಲಕ ನಮ್ಮ ಪ್ರಾಮಾಣಿಕತೆಯನ್ನು ಪ್ರದರ್ಶಿಸಬೇಕು ಎಂದು ವಿವರಿಸಿದ್ದಾರೆ.
166 ಮಂದಿಯನ್ನು ಬಲಿ ಪಡೆದ ಮುಂಬೈ ಭಯೋತ್ಪಾದಕ ದಾಳಿಯ ನಂತರ ತಾರಿಖ್ ಖೋಸಾ ಅವರನ್ನು ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿಯ ಮುಖ್ಯಸ್ಥರನ್ನಾಗಿ ನೇಮಿಸಿ ಅವರಿಗೆ, ದಾಳಿ ಸಂಬಂಧಿತ 7 ಮಂದಿಯ ವಿಚಾರಣೆಯ ಉಸ್ತುವಾರಿ ವಹಿಸಲಾಗಿತ್ತು. ಈ ಸಮಯದಲ್ಲಿ ಪ್ರತಿವಾದಿಗಳ ವಿಳಂಬತಂತ್ರಗಳು, ವಿಚಾರಣಾ ನ್ಯಾಯಾಧೀಶರ ಬದಲಾವಣೆ, ಪ್ರಕರಣದ ಪ್ರಾಸೆಕ್ಯೂಟರ್ ಹತ್ಯೆ ಜೊತೆಗೆ ಕೆಲವು ಪ್ರಮುಖ ಸಾಕ್ಷಿಗಳ ಹೇಳಿಕೆ ಬದಲಾವಣೆಗಳು ಪಾಕಿಸ್ತಾನಿ ತನಿಖೆಗಾರರ ಪಾಲಿಗೆ ಗಂಭೀರ ಹಿನ್ನಡೆಗಳಾಗಿದ್ದವು ಎಂದು ಖೋಸಾ ತಿಳಿಸಿದ್ದಾರೆ.