ಮುಂಬೈ

ಅಂಬಾನಿ ವೇತನ 205 ಪಟ್ಟು ಹೆಚ್ಚು!: ಕಂಪನಿಗಳ ಸಾಮಾನ್ಯ ಉದ್ಯೋಗಿಗಳ ವೇತನಕ್ಕೆ ಬಾಸ್‌ಗಳ ಪೇ ಪ್ಯಾಕೇಜ್‌ ಹೋಲಿಕೆ

Pinterest LinkedIn Tumblr

5aಎಕನಾಮಿಕ್‌ ಟೈಮ್ಸ್‌ ಹೊಸದಿಲ್ಲಿ: ರಿಲಯನ್ಸ್ ಇಂಡಸ್ಟ್ರೀಸ್‌ನ ಒಡೆಯ , ಶ್ರೀಮಂತ ಭಾರತೀಯ ಮುಕೇಶ್ ಅಂಬಾನಿ ಕಳೆದ ಏಳು ವರ್ಷಗಳಿಂದ ವೇತನ ಹೆಚ್ಚಳ ಪಡೆಯುತ್ತಿಲ್ಲ ಎಂಬುದು ಜಗತ್ತಿಗೇ ಗೊತ್ತಿರುವ ವಿಷಯ. ಆದರೆ ಅವರು ಪಡೆಯುತ್ತಿರುವ ಸಂಬಳವನ್ನು ರಿಲಯನ್ಸ್ ಕಂಪನಿಯ ಸಾಮಾನ್ಯ ಉದ್ಯೋಗಿಯ ವೇತನಕ್ಕೆ ಹೋಲಿಸಿದರೆ, ಭಾರಿ ವ್ಯತ್ಯಾಸ ಇರುವ ಮಹತ್ವದ ಅಂಶ ಬೆಳಕಿಗೆ ಬಂದಿದೆ. ಮುಕೇಶ್ ಅಂಬಾನಿ ಅವರು ಸಾಮಾನ್ಯ ಉದ್ಯೋಗಿಗಿಂತ 205 ಪಟ್ಟು ಅಧಿಕ ವೇತನ ಪಡೆಯುತ್ತಿದ್ದಾರೆ ಎಂದರೆ ನೀವು ನಂಬುತ್ತೀರಾ? ಇದು ಅಕ್ಷರಶಃ ನಿಜ. 2014-15ನೇ ಸಾಲಿನಲ್ಲಿ ಮುಕೇಶ್ 15 ಕೋಟಿ ರೂ. ವಾರ್ಷಿಕ ವೇತನ ಪ್ಯಾಕೇಜ್ ಪಡೆದರೆ, ರಿಲಯನ್ಸ್‌ನ ಸಾಮಾನ್ಯ ಉದ್ಯೋಗಿ ವಾರ್ಷಿಕ ವೇತನದಲ್ಲಿ ಶೇ 3.71ರಷ್ಟು ಹೆಚ್ಚಳವಾಗಿ, 7.29 ಲಕ್ಷ ರೂ. ಪಡೆಯುತ್ತಿದ್ದಾನೆ.

ಅದಿರಲಿ. ಇನ್ನೊಂದು ಆಶ್ಚರ್ಯಕರ ಸಂಗತಿ ಎಂದರೆ, ಐಟಿಸಿ ಕಂಪನಿಯ ಕಾರ್ಯಕಾರಿ ಅಧ್ಯಕ್ಷ ವೈ.ಸಿ. ದೇವೇಶ್ವರ್ ಅವರ ವೇತನ ಐಟಿಸಿಯ ಸಾಮಾನ್ಯ ಉದ್ಯೋಗಿಗೆ ತಾಳೆ ಹಾಕಿದರೆ 439 ಪಟ್ಟು ಹೆಚ್ಚಿದೆ. ಕಳೆದ ವರ್ಷ ದೇವೇಶ್ವರ್ ವೇತನದಲ್ಲಿ ಶೇ 24ರಷ್ಟು ಏರಿಕೆ ಆಗಿ, 15 ಕೋಟಿ ರೂ.ನಷ್ಟಿದ್ದರೆ, ಸಾಮಾನ್ಯ ಉದ್ಯೋಗಿಗೆ ಶೇ 14ರಷ್ಟು ವೇತನ ಹೆಚ್ಚಳ ಆಗಿದೆ.

ಹೊಸ ಕಂಪನಿ ಕಾಯ್ದೆ ಮತ್ತು ಸೆಬಿಯ ಇತ್ತೀಚಿನ ಕಾರ್ಪೊರೇಟ್ ಆಡಳಿತ ಸಂಹಿತೆ ಕಳೆದ ಅಕ್ಟೋಬರ್‌ನಿಂದ ಜಾರಿಗೆ ಬಂದಿರುವ ಹಿನ್ನೆಲೆಯಲ್ಲಿ ನೋಂದಾಯಿತ ಕಂಪನಿಗಳು, ಇದೀಗ ನೌಕರರು ಮತ್ತು ಆಡಳಿತ ಮಂಡಳಿಯ ವೇತನ ಅನುಪಾತದ ವಿವರ ಒದಗಿಸುತ್ತಿವೆ. ಈ ವಿವರದ ಆಸಕ್ತಿದಾಯಕವಾದ ವೇತನ ಹೋಲಿಕೆಯನ್ನು ಇಲ್ಲಿ ನೀಡಲಾಗಿದೆ.

ಬೆಂಗಳೂರು ಮೂಲದ ಮತ್ತೊಬ್ಬ ಉದ್ಯಮ ದಿಗ್ಗಜ, ವಿಪ್ರೊ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಜೀಂ ಪ್ರೇಮ್‌ಜಿ ಅವರ ಸಂಬಳ ಅಲ್ಲಿನ ಸರಾಸರಿ ಉದ್ಯೋಗಿಗಿಂತ 89 ಪಟ್ಟು ಅಧಿಕ. ಅಜೀಂ ಪ್ರೇಮ್‌ಜಿ ವೇತನದಲ್ಲಿ ಕಳೆದ ವರ್ಷ ಶೇ 53ರಷ್ಟು ಕುಸಿದು, ಒಟ್ಟು 4.78 ಕೋಟಿ ರೂ.ನಷ್ಟಿತ್ತು. ಅಲ್ಲಿನ ಸಾಮಾನ್ಯ ಉದ್ಯೋಗಿಯ ವೇತನ ಹೆಚ್ಚಳ ಕೇವಲ ಶೇ 9.5ರಷ್ಟಾಗಿದೆ. ವಿಪ್ರೊ ಸಿಇಒ ಟಿ.ಕೆ. ಕುರಿಯನ್ ಅವರ ವೇತನ ಸಾಮಾನ್ಯ ನೌಕರನಿಗಿಂತ 170 ಪಟ್ಟು ಹೆಚ್ಚು. ಶೇ 39ರಷ್ಟು ವೇತನ ಹೆಚ್ಚಳ ಆಗಿತ್ತು.

ಆದರೆ, ಎಚ್‌ಡಿಎಫ್‌ಸಿ ಕಂಪನಿಯ ಅಧ್ಯಕ್ಷ ದೀಪಕ್ ಪರೇಖ್ ಅವರು ಸಾಮಾನ್ಯ ಉದ್ಯೋಗಿಗಿಂತ ಬರೀ 19 ಪಟ್ಟು ಹೆಚ್ಚಿನ ವೇತನ ಗಳಿಸುತ್ತಿದ್ದಾರಂತೆ. ಈ ಅಂಕಿಅಂಶಗಳು 2014-15ನೇ ಸಾಲಿಗೆ ಅನ್ವಯ. ಅದೇ ಎಚ್‌ಡಿಎಫ್‌ಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಆದಿತ್ಯ ಪುರಿ 117 ಪಟ್ಟು ಹೆಚ್ಚಿನ ಪಗಾರ ಪಡೆಯುತ್ತಿದ್ದಾರೆ. ಅವರ ವಾರ್ಷಿಕ ವೇತನ 7.4 ಕೋಟಿ ರೂ. ಆದರೆ, ವೇತನ ಹೆಚ್ಚಳ ಪ್ರಮಾಣ ಶೇ 15. ಐಸಿಐಸಿಐ ಬ್ಯಾಂಕ್ ಸಿಇಒ ಚಂದಾ ಕೊಚ್ಚರ್ ಅಲ್ಲಿನ ಸಾಮಾನ್ಯ ಉದ್ಯೋಗಿಗಿಂತ 97 ಪಟ್ಟು ಜಾಸ್ತಿ ಸಂಬಳ ಸ್ವೀಕರಿಸುತ್ತಿದ್ದಾರೆ. ಎಕ್ಸಿಸ್ ಬ್ಯಾಂಕ್ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕಿ ಶಿಖಾ ಶರ್ಮ 74 ಪಟ್ಟು ಹೆಚ್ಚು.

ಬೆಂಗಳೂರಿನ ಇನ್ಫೋಸಿಸ್ ಕಂಪನಿಯಲ್ಲಿ ಆಡಳಿತ ಮಂಡಳಿ ಸಿಬ್ಬಂದಿಗೆ ಕಳೆದ ವರ್ಷ ಶೇ 57.7ರಷ್ಟು ವೇತನ ಹೆಚ್ಚಳವಾದರೆ, ಸಾಮಾನ್ಯ ಉದ್ಯೋಗಿಗಳು ವೇತನದಲ್ಲಿ ಶೇ 5.2ರಷ್ಟು ಹಿನ್ನಡೆ ಅನುಭವಿಸಿದ್ದಾರೆ.

ಆದರೆ, ಕೆಲವೇ ಕೆಲವು ಕಂಪನಿಗಳಲ್ಲಿ ಸಾಮಾನ್ಯ ನೌಕರರ ವೇತನ ಹೆಚ್ಚಳವು ಸಿಇಒ ವೇತನ ಹೆಚ್ಚಳಕ್ಕೆ ಸಮನಾಗಿದೆ. ಮತ್ತೆ ಕೆಲವು ಕಂಪನಿಗಳಲ್ಲಿ ಸಾಮಾನ್ಯ ನೌಕರರೇ ಉನ್ನತ ಅಧಿಕಾರಿಗಳಿಗಿಂತ ಹೆಚ್ಚಿನ ವೇತನ ಏರಿಕೆ ಪಡೆದಿದ್ದಾರೆ.

ಸಾಮಾನ್ಯ ನೌಕರರ ವೇತನ ನಿರ್ಲಕ್ಷಿಸಿ, ಉನ್ನತಾಧಿಕಾರಿಗಳಿಗೆ ಕೈತುಂಬಾ ಎಣಿಸುವ ಪ್ರವೃತ್ತಿ ಹಾಗೂ ವಿದೇಶಿ ಕಂಪನಿಗಳಿಗಿಂತ ಭಾರತೀಯ ಕಂಪನಿಗಳು ಸಿಇಒಗಳಿಗೆ ನೀಡುತ್ತಿರುವ ವಿಪರೀತ ವೇತನ ಶ್ರೇಣಿಯಲ್ಲಿ ಸಮತೋಲನ ಕಾಪಾಡುವ ಕ್ರಮವಾಗಿ ಸೆಬಿ, ಕಾರ್ಪೊರೇಟ್ ಆಡಳಿತ ಸಂಹಿತೆ ಜಾರಿಗೆ ತಂದಿದೆ.

Write A Comment