ಮುಂಬೈ

ಐಷಾರಾಮಿ ಫೋನ್ ಮಾರಾಟ ಪ್ರಗತಿ ದರದಲ್ಲಿ ಚೀನಾ ಹಿಂದಿಕ್ಕಿದ ಭಾರತ

Pinterest LinkedIn Tumblr

phoneಮುಂಬಯಿ: 3ಜಿಯ ಅತ್ಯುತ್ತಮ ಸಂಪರ್ಕ, ಕೈಗೆಟಕುವ ಬೆಲೆ ಹಾಗೂ ಸಾಧನಗಳ ಬೆಲೆ ಇಳಿಕೆಯಿಂದಾಗಿ ಐಷಾರಾಮಿ ಸ್ಮಾರ್ಟ್‌ಫೋನ್ ಮಾರಾಟದ ಪ್ರಗತಿ ಸಾಧ್ಯತೆಯಲ್ಲಿ ಭಾರತವು ಚೀನಾವನ್ನು ಹಿಂದಿಕ್ಕಿದೆ.

‘2013ರಿಂದಲೂ ಚೀನಾವೇ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಪಾರುಪತ್ಯ ಹೊಂದಿದ್ದು, 2014ರಲ್ಲಿ ಶೇ.95ರಷ್ಟು ಬಳಕೆದಾರರನ್ನು ಸ್ಮಾರ್ಟ್‌ಫೋನ್‌ಗಳು ತಲುಪಿವೆ. ಅಲ್ಲಿ ಮತ್ತಷ್ಟು ಪ್ರಗತಿಯ ಸಾಧ್ಯತೆ ಕ್ಷೀಣವಾಗಿದೆ. ಹೀಗಾಗಿ ಸ್ಮಾರ್ಟ್‌ಫೋನ್‌ಗಳಿಗೆ ಅವಕಾಶವಿರುವ ಇತರ ರಾಷ್ಟ್ರಗಳಲ್ಲಿ ಅವುಗಳ ಮಾರಾಟದ ವೇಗ ಹೆಚ್ಚಲಿದೆ,’ ಎಂದು ಎಚ್ಎಸ್‌ಬಿಸಿ ವರದಿ ಹೇಳಿದೆ.

ಭಾರತದಲ್ಲಿ ಶೇ.30ರಷ್ಟು ಬಳಕೆದಾರರನ್ನಷ್ಟೇ ಸ್ಮಾರ್ಟ್‌ಫೋನ್‌ಗಳು ತಲುಪಿರುವುದರಿಂದ, ಮಾರಾಟ ಪ್ರಗತಿಯ ವೇಗವು ಏರುವ ಸಾಧ್ಯತೆಯೂ ಅಧಿಕವಾಗಿದೆ.

‘ಭಾರತದಲ್ಲಿ 2014-19ರ ಅವಧಿಯಲ್ಲಿ ಸ್ಮಾರ್ಟ್ ಫೋನ್ ಮಾರಾಟದ ವಾರ್ಷಿಕ ಪ್ರಗತಿ ದರವು ಶೇ.26ರಷ್ಟು ವೃದ್ಧಿಯಾಗಲಿದ್ದರೆ, ಮಧ್ಯ ಏಷ್ಯಾದಲ್ಲಿ ಶೇ.19ರಷ್ಟು ಹೆಚ್ಚಾಗಲಿದೆ. ಚೀನಾದಲ್ಲಿ ಈ ಪ್ರಗತಿ ಕೇವಲ ಶೇ.5ರಷ್ಟು ಇರಲಿದೆ. ಭಾರತದಲ್ಲಿ 2014ರಲ್ಲಿ 27.5 ಕೋಟಿ ಮೊಬೈಲ್ ಫೋನ್‌ಗಳು ಮಾರುಕಟ್ಟೆಗೆ ಬಂದಿದ್ದರೆ, ಭಾರತವು ಜಾಗತಿಕವಾಗಿ ಎರಡನೇ ಸ್ಥಾನದಲ್ಲಿದೆ. ಅಂತೆಯೇ ವಿಶ್ವ ಮಾರುಕಟ್ಟೆಯಲ್ಲಿ ಶೇ.14ರಷ್ಟು ಪಾಲು ಹೊಂದಿತ್ತು. 8.1 ಕೋಟಿ ಅತ್ಯಾಧುನಿಕ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಬಂದಿರುವುದರೊಂದಿಗೆ ಭಾರತ ಜಾಗತಿಕವಾಗಿ ಮೂರನೇ ಸ್ಥಾನದಲ್ಲಿತ್ತು ಮತ್ತು ಜಾಗತಿಕ ಮಾರುಕಟ್ಟೆಯ ಶೇ.6ರಷ್ಟು ಪಾಲು ಹೊಂದಿತ್ತು,’ ಎಂದು ವರದಿ ಹೇಳಿದೆ.

‘4ಜಿ ಪ್ರವೇಶಿಸುತ್ತಿದ್ದರೂ, ಇನ್ನೂ 3ಜಿ ತರಂಗಾಂತರಕ್ಕೆ ಬೇಡಿಕೆ ಇದೆ. ಇನ್ನೂ ಒಂದು-ಒಂದೂವರೆ ವರ್ಷ ಸ್ಮಾರ್ಟ್‌ ಫೋನ್‌ಗಳ ಬೇಡಿಕೆ ಮುಂದುವರಿಯಲಿದೆ. ಆನ್‌ಲೈನ್ ಮೂಲಕ ಚೀನಾ ಶೇ.20 ಸ್ಮಾರ್ಟ್‌ಫೋನ್ ಮಾರಿದರೆ, ಭಾರತದಲ್ಲಿ ಶೇ.10ರಷ್ಟು ಮಾರಾಟವಾಗುತ್ತಿದೆ,’ ಎಂದಿದೆ.

ಭಾರತದಲ್ಲಿ ಪ್ರಸ್ತುತ 7 ಕೋಟಿ 3ಜಿ ಬಳಕೆದಾರರಿದ್ದು, ಒಟ್ಟು 24 ಕೋಟಿ ಮಂದಿ 2ಜಿ, 3ಜಿ, 4ಜಿ ಸೇರಿದಂತೆ ಮೊಬೈಲ್ ಪೋನ್‌ನಲ್ಲಿ ಇಂಟರ್ನೆಟ್ ಬಳಸುತ್ತಿದ್ದಾರೆ.

Write A Comment