ಮುಂಬೈ: 2006 ರ ಮುಂಬೈ ಸರಣಿ ಸ್ಪೋಟದಲ್ಲಿ ಗಂಭೀರವಾಗಿ ಗಾಯಗೊಂಡು ಅಂದಿನಿಂದಲೂ ಕೋಮಾದಲ್ಲಿದ್ದ ಮಹಾರಾಷ್ಟ್ರದ ಥಾಣೆ ನಿವಾಸಿ ಪರಾಗ್ ಸಾವಂತ್ ಇಂದು ಸಾವನ್ನಪ್ಪಿದ್ದಾರೆ.
11 ಜುಲೈ 2006 ರಂದು ಪರಾಗ್ ಸಾವಂತ್ ಮುಂಬೈ ಲೋಕಲ್ ಟ್ರೈನಿನ ಫರ್ಸ್ಟ್ ಕ್ಲಾಸ್ ಕಂಪಾರ್ಟ್ಮೆಂಟ್ ನಲ್ಲಿ ಹೋಗುತ್ತಿದ್ದ ವೇಳೆ ಮೀರಾ ರೋಡ್ ಸ್ಟೇಶನ್ ಬಳಿ ಭಯೋತ್ಪಾದಕರು ಬೋಗಿಯಲ್ಲಿ ಇರಿಸಿದ್ದ ಬಾಂಬ್ ಸ್ಪೋಟಗೊಂಡಿತ್ತು. ಇದರಲ್ಲಿ ಹಲವು ಪ್ರಯಾಣಿಕರು ಸಾವನ್ನಪ್ಪಿದ್ದು, ತೀವ್ರವಾಗಿ ಗಾಯಗೊಂಡಿದ್ದ ಪರಾಗ್ ಸಾವಂತ್ ಕೋಮಾಕ್ಕೆ ಜಾರಿದ್ದರು.
ಘಟನೆ ನಡೆದ ವೇಳೆ ಪರಾಗ್ ಸಾವಂತ್ ಅವರ ಪತ್ನಿ ಪ್ರೀತಿ ಸಾವಂತ್ ಗರ್ಭಿಣಿಯಾಗಿದ್ದು, ಬಳಿಕ ರೈಲ್ವೇ ಇಲಾಖೆ ಅವರಿಗೆ ಹುದ್ದೆ ನೀಡಿತ್ತು. 9 ವರ್ಷಗಳಿಂದಲೂ ಕೋಮಾದಲ್ಲಿದ್ದ ಪರಾಗ್ ಸಾವಂತ್ ಅವರಿಗೆ ಮುಂಬೈನ ಹಿಂದುಜಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಅವರು ಇಂದು ಸಾವನ್ನಪ್ಪಿದ್ದು, ಅಂತಿಮ ವಿಧಿ ವಿಧಾನಗಳು ಬುಧವಾರ ನೆರವೇರಲಿವೆ ಎನ್ನಲಾಗಿದೆ.