ಮುಂಬೈ

ಸಿಆರ್‌ಪಿಫ್‌ ಸಿಬ್ಬಂದಿಗೆ ನಕ್ಸಲರಿಗಿಂತ ಹಾರ್ಟ್‌ ಅಟ್ಯಾಕ್‌ ಅಪಾಯ ಹೆಚ್ಚು

Pinterest LinkedIn Tumblr

naxal2

ಮುಂಬಯಿ: ನಕ್ಸಲ್‌ ಪೀಡಿತ ಪ್ರದೇಶಗಳಲ್ಲಿ ಸೇವೆ ಸಲ್ಲಿಸುತ್ತಿರುವ ಕೇಂದ್ರ ಮೀಸಲು ಪೊಲೀಸ್‌ ಪಡೆ ಸಿಬ್ಬಂದಿ ಪೈಕಿ ಹೆಚ್ಚಿನವರು ಹೃದಯಾಘಾತದಿಂದ ಅಸುನೀಗುತ್ತಿದ್ದಾರೆ ಎಂಬ ಆತಂಕದ ವಿಷಯ ಬಯಲಾಗಿದೆ.

ಕಳೆದ ಐದು ವರ್ಷಗಳಲ್ಲಿ ನಕ್ಸಲ್‌ ದಾಳಿಗೆ 323 ಮಂದಿ ಪೊಲೀಸರು ಬಲಿಯಾಗಿದ್ದರೆ, ಹೃದಯಾಘಾತದಿಂದ 642 ಮಂದಿ ಮೃತಪಟ್ಟಿದ್ದಾರೆ. 228 ಮಂದಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ನಕ್ಸಲ್‌ ಪೀಡಿತ ಪ್ರದೇಶಗಳಲ್ಲಿ 2009 ಜನವರಿಯಿಂದ 2014 ಡಿಸೆಂಬರ್‌ವರೆಗೆ ಮೃತಪಟ್ಟಿರುವ ಸಿಆರ್‌ಪಿಎಫ್‌ ಸಿಬ್ಬಂದಿಯ ಸಂಖ್ಯೆ ಹಾಗೂ ಅಂಥ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸುವ ಪೊಲೀಸರ ಮಾನಸಿಕ ಸ್ಥೈರ್ಯ ಹೆಚ್ಚಿಸಲು ಸರಕಾರ ಕೈಗೊಂಡಿರುವ ಕ್ರಮದ ಬಗ್ಗೆ ಕಾಂಗ್ರೆಸ್‌ ನಾಯಕ ಮೋತಿಲಾಲ್‌ ವೋರಾ ಮಾಹಿತಿ ಕೋರಿದ್ದರು.

ನಾನಾ ನಕ್ಸಲ್‌ ದಾಳಿಗೆ 323 ಪೊಲೀಸರು ಬಲಿಯಾಗಿದ್ದರೆ, ಮಲೇರಿಯಾದಿಂದ 108, ಹೃದಯಾಘಾತದಿಂದ 642, ಖಿನ್ನತೆಗೊಳಗಾಗಿ 228 ಮಂದಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಗೃಹ ಸಚಿವಾಲಯದ ಸಹಾಯಕ ಸಚಿವ ಹರಿಭಾಯ್‌ ಚೌಧರಿ ಮಾಹಿತಿ ನೀಡಿದ್ದಾರೆ. ಜತೆಗೆ, ಭದ್ರತಾ ಸಿಬ್ಬಂದಿಯ ಆತ್ಮ ವಿಶ್ವಾಸ ಹೆಚ್ಚಿಸುವ ನಿಟ್ಟಿನಲ್ಲಿ ಕೈಗೊಂಡಿರುವ ನಾನಾ ಕ್ರಮಗಳನ್ನು ಅವರು ವಿವರಿಸಿದ್ದಾರೆ.

‘ನಿಗದಿತ ಅವಧಿಯಲ್ಲಿ ಸಿಬ್ಬಂದಿಯ ರಜೆ ಅರ್ಜಿಯನ್ನು ಇತ್ಯರ್ಥಗೊಳಿಸಲಾಗುವುದು. ಮೂಲ ಸೌಕರ್ಯ ಸೇರಿದಂತೆ ಇನ್ನಿತರ ಸಮಸ್ಯೆಗಳನ್ನು ಹಂಚಿಕೊಳ್ಳಲು ಸಿಬ್ಬಂದಿಯನ್ನು ಉತ್ತೇಜಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಕ್ಷೇಮಾಭಿವೃದ್ಧಿ ಹಾಗೂ ಪುನರ್ವಸತಿ ಮಂಡಳಿ ರಚಿಸಲಾಗಿದೆ. ಹುತಾತ್ಮ ಯೋಧರ ಕುಟುಂಬಗಳಿಗೆ ಹೆಚ್ಚಿನ ಅನುದಾನ, ಸಿಬ್ಬಂದಿಯ ಮಕ್ಕಳಿಗೆ ಪ್ರತಿ ತಿಂಗಳು 2000-2250 ರೂ. ಶಿಷ್ಯವೇತನ ನೀಡಲಾಗುತ್ತಿದೆ,’ ಎಂದು ಚೌಧರಿ ತಿಳಿಸಿದ್ದಾರೆ.

Write A Comment