ಮುಂಬೈ

ವಡಾಲದಲ್ಲಿ ನಡೆಸಲ್ಪಟ್ಟ ಬಿಎಸ್‌ಕೆಬಿಎ ಸಂಸ್ಥೆಯ ವಾರ್ಷಿಕ ಕ್ರೀಡಾಕೂಟ; ಕ್ರೀಡೆಯಿಂದ ಪ್ರತಿಭೆಗಳ ಗುರುತುಸುವಿಕೆ ಸಾಧ್ಯ : ವಿಕ್ರಾಂತ್ ಉರ್ವಾಲ್

Pinterest LinkedIn Tumblr

BSKB Assn. Sports Meet-1

ಮುಂಬಯಿ, ಜ.17: ಬಿಎಸ್‌ಕೆಬಿ ಎಸೋಸಿಯೇಶನ್ (ಗೋಕುಲ) ಸಯಾನ್ ಇದರ ವಾರ್ಷಿಕ ಕ್ರೀಡಾಕೂಟ ಮತ್ತು ಆಟೋಟ ಸ್ಪರ್ಧೆಯು ಕಳೆದ ರವಿವಾರ ವಡಾಲ ಅಲ್ಲಿನ ಎನ್‌ಕೆಇಎಸ್ ಕ್ರೀಡಾಂಗಣದಲ್ಲಿ ಜರಗಿತು.

ಬೆಳಿಗ್ಗೆ ಎಸೋಸಿಯೇಶನ್‌ನ ಅಧ್ಯಕ್ಷ ಡಾ ಸುರೇಶ್ ಎಸ್ ರಾವ್ ಕಟೀಲು ಅಧ್ಯಕ್ಷತೆಯಲ್ಲಿ ಜರುಗಿದ ಸ್ಪರ್ಧೆಯ ಉದ್ಘಾಟನಾ ಸಮಾರಂಭದಲ್ಲಿ ಕಾರ್ಯದರ್ಶಿ ಪಿ.ಸಿ.ಎನ್ ರಾವ್ ಹಾಗೂ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ವಿಶೇಷ ಅತಿಥಿಯಾಗಿ ಉಪಸ್ಥಿತ ಎಸೋಸಿಯೇಶನ್‌ನ ಸದಸ್ಯರೂ, ಇಂಟರ್‌ನ್ಯಾಶನಲ್ ಇನ್‌ಸ್ಟಿಟ್ಯೂಟ್ ಟ್ರೇನಿಂಗ್ ಸೆಂಟರ್ (ಐಐಟಿಸಿ) ಸಂಸ್ಥೆಯ ನಿರ್ದೇಶಕ ವಿಕ್ರಾಂತ್ ಉರ್ವಾಲ್ ಉಪಸ್ಥಿತರಿದ್ದು ದೀಪ ಪ್ರಜ್ವಲನೆಗೈದು ಕ್ರೀಡಾಕೂಟಕ್ಕೆ ಚಾಲನೆಯನ್ನಿತ್ತರು.

BSKB Assn. Sports Meet-3

BSKB Assn. Sports Meet-2

ಉರ್ವಾಲ್ ಕ್ರೀಡಾಕೂಟಕ್ಕೆ ಕ್ಕೆ ಶುಭವನ್ನು ಕೋರುತ್ತಾ, ನಮ್ಮ ದೈನಂದಿನ ಜೀವನದಲ್ಲಿ ಆಟೋಟಗಳು ಒಂದು ಅವಿಭಾಜ್ಯ ಅಂಗವಾಗಿರಬೇಕು. ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ಇದು ಅತ್ಯಂತ ಅವಶ್ಯಕವಾದ ವ್ಯಾಯಾಮವಾಗಿದೆ. ಕ್ರೀಡೆಯು ಬರೇ ಸ್ಪರ್ಧೆಯಾಗದೆ ಅದು ಮಾನವನ ಬುದ್ಧಿ ಮತ್ತು ದೈಹಿಕ ವಿಕಾಸನಕ್ಕೆ ಶಕ್ತಿ ತುಂಬುತ್ತದೆ. ಕ್ರೀಡೆ ಎಲ್ಲಾ ಜೀವಿ ಸಂಕುಲಗಳಲ್ಲೂ ಕಾಣುವಂತಿದ್ದರೂ ಮನುಷ್ಯರಲ್ಲಿ ಸ್ಪರ್ಧೆಯಾಗಿ ಏರ್ಪಾಟ್ಟು ಪ್ರತಿಭಾನ್ವಿತರನಾಗಿಸಿ ಗುರುತಿಸುವ ಪಾತ್ರವಹಿಸುತ್ತದೆ. ಆದುದರಿಂದ ಕ್ರೀಡೆಯನ್ನು ದೈನಂದಿನವಾಗಿಸಿಕೊಂಡು ನೆಮ್ಮದಿಯ ಬಾಳ್ವೆಗೆ ಪ್ರಯತ್ನಿಸೋಣ ಎಂದು ಕರೆಯಿತ್ತರು.

ಡಾ ಸುರೇಶ್ ರಾವ್ ಅವರು ಉರ್ವಾಲ್ ಅವರಿಗೆ ಶಾಲು ಹೊದಿಸಿ ಹೂಗುಚ್ಚವನ್ನಿತ್ತು ಗೌರವಿಸಿದರು. ಅಂತೆಯೇ ನೆರೆದ ನೂರಾರು ಸದಸ್ಯ ಸ್ಪರ್ಧಾಳುಗಳಿಗೆ ಶುಭ ಹಾರೈಸಿದರು.

ಸಂಘದ ಯುವ ವಿಭಾಗದ ಮುಖ್ಯಸ್ಥ ಅನುಪ್ ಕುಕ್ಕೆಮನೆ ಹಾಗೂ ದೀಪಕ್ ಶಿವತ್ತಾಯ ಅವರ ನೇತೃತ್ವದಲ್ಲಿ ಆಯೋಜಿಸಿಸಲಾಗಿದ್ದ ಕ್ರೀಡಾಕೂಟ, ಆಟೋಟ ಸ್ಪರ್ಧೆಗಳಲ್ಲಿ ಮೂರು ವರ್ಷದ ಬಾಲಕ, ಬಾಲಕಿಯರಿಂದ ಹಿಡಿದು ಅರುವತ್ತು ವರ್ಷದ ಮೇಲಿನ ಹಿರಿಯ ನಾಗರೀಕರ ವರೆಗಿನ ಎಲ್ಲಾ ವರ್ಗದ ಪುರುಷರು ಹಾಗೂ ಸ್ತ್ರೀಯರಿಗಾಗಿ ಓಟ ಸ್ಪರ್ಧೆ, ರಿಲೇ ರೇಸ್, ಭಾರದ ಚೆಂಡು ಎಸೆತ, ಕ್ರಿಕೆಟ್ ಮುಂತಾದ ವಿವಿಧ ಸ್ಪರ್ಧೆಗಳನ್ನು
ಆಯೋಜಿಸಲಾಗಿತ್ತು. ಆಫೀಸ್ ರೇಸ್ ಎಂಬ ವಿನೂತನ ಸ್ಪರ್ಧೆಯಲ್ಲಿ ಮಹಿಳೆಯರು ಲುಂಗಿ,ಬೆಲ್ಟು, ಟೈ, ಟೋಪಿ ಹಾಗೂ ಪುರುಷರು ಸೀರೆ, ಬಿಂದಿ, ಪರ್ಸು ಇತ್ಯಾದಿಗಳನ್ನು ಧರಿಸಿಕೊಂಡು ಓಡುವ ಸ್ಪರ್ಧೆ ಅತ್ಯಂತ ಮನೋಹರವಾಗಿತ್ತು. ದಿನಪೂರ್ತಿ ನಡೆಸಲ್ಪಟ್ಟ ಕ್ರೀಡೋತ್ಸವದಲ್ಲಿ ಸ್ಪರ್ಧಾಳುಗಳು ಅತ್ಯಂತ ಸ್ಫೂರ್ತಿಯಿಂದ ಭಾಗವಹಿಸಿದ್ದು, ಕೋಶಾಧಿಕಾರಿ ಹರಿದಾಸ್ ಭಟ್ ಕಾರ್ಯಕ್ರಮದ ನಿರೂಪಣೆ ಗೈದರು.

ಸಂಜೆ ನಡೆಸಲ್ಪಟ್ಟ ಸಮಾರೋಪ ಸಮಾರಂಭದಲ್ಲಿ ಉಪಾಧ್ಯಕ್ಷ ವಾಮನ್ ಹೊಳ್ಳ ಅವರು ಸ್ಪರ್ಧಾ ವಿಜೇತರು ಹಾಗೂ ಭಾಗವಹಿಸಿದ ಎಲ್ಲಾ ಸದಸ್ಯರನ್ನು ಅಭಿನಂದಿಸುತ್ತಾ ಮುಂದಿನ ವರ್ಷದಿಂದ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರು ಕ್ರೀಡಾಕೂಟದಲ್ಲಿ ಭಾಗವಹಿಸುವಂತಾಗಲಿ ಎಂದು ಆಶಿಸಿದರು.

ವಿಜೇತಗೆ ವಾಮನ್ ಹೊಳ್ಳ, ಉಮೇಶ್ ರಾವ್, ಗುರುರಾಜ್ ಭಟ್ ಹಾಗೂ ಕೋಶಾಧಿಕಾರಿ ಹರಿದಾಸ್ ಭಟ್ ಬಹುಮಾನಗಳನ್ನು ವಿತರಿಸಿ ಅಭಿನಂದಿಸಿದರು. ಕಾರ್ಯದರ್ಶಿ ಪಿ.ಸಿ.ಎನ್ ರಾವ್ ಧನ್ಯವಾದ ಸಮರ್ಪಿಸಿದರು.

Write A Comment