
ಬರೋಡಾ, ಜ.04: ಗುಜರಾತ್ ಬಿಲ್ಲವ ಸಂಘ ಮತ್ತು ತುಳು ಸಂಘ ಬರೋಡಾ ಇವುಗಳ ಸಂಯುಕ್ತ ಆಶ್ರಯದಲ್ಲಿ ಇಂದಿಲ್ಲಿ ಗುಜರಾತ್ ರಾಜ್ಯದ ಬರೋಡಾ ಅಲ್ಕಾಪುರಾ ಇಲ್ಲಿನ ಗುಜರಾತ್ ಬಿಲ್ಲವರ ಸಂಘದ ಸಭಾಗೃಹದಲ್ಲಿ ಶ್ರೀ ಬ್ರಹ್ಮಬೈದರ್ಕಳ ಸಭಾಗೃಹದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲ ಮೂಲ್ಕಿ ಅಧ್ಯಕ್ಷ ಜಯ ಸಿ.ಸುವರ್ಣ ಅವರಿಗೆ ಸಾರ್ವಜನಿಕ ಸನ್ಮಾನವನ್ನಿತ್ತು ಗೌರವಿಸಲಾಯಿತು.
ತುಳು ಸಂಘ ಬರೋಡಾ ಇದರ ಗೌರವಾಧ್ಯಕ್ಷರೂ ಗುಜರಾತ್ ಬಿಲ್ಲವ ಸಂಘ ಇದರ ಸ್ಥಾಪಕ ಅಧ್ಯಕ್ಷ ದಯಾನಂದ ಬೋಂಟ್ರಾ ಅವರ ಅಧ್ಯಕ್ಷತೆಯಲ್ಲಿ ನೆರವೇರಿಸಲ್ಪಟ್ಟ ಅದ್ದೂರಿ ಸಮಾರಂಭದಲ್ಲಿ ಮೋಹನ್ ಸಿ. ಪೂಜಾರಿ ಅಹ್ಮದಾಬಾದ್, ಕೆ.ಎಸ್ ಅಂಚನ್ ಸೂರತ್, ತುಳು ಸಂಘ ಬರೋಡಾ ಮಾಜಿ ಅಧ್ಯಕ್ಷ ಜಯರಾಮ ಎಸ್.ಶೆಟ್ಟಿ ಮತ್ತು ಎಸ್ಕೆ ಹಳೆಯಂಗಡಿ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್, ತುಳು ಸಂಘ ಬರೋಡಾ ಇದರ ಅಧ್ಯಕ್ಷ ಶಶಿಧರ್ ಬಿ.ಶೆಟ್ಟಿ ಮತ್ತಿತರ ಗಣ್ಯರು ಉಪಸ್ಥಿತರಿದ್ದು, ಜಯ ಸುವರ್ಣ ಅವರನ್ನು ಸನ್ಮಾನಿಸಿ ಅಭಿನಂದಿಸಿದರು.





ಜಯ ಸುವರ್ಣರು ಸನ್ಮಾನಕ್ಕೆ ಉತ್ತರಿಸುತ್ತಾ ಹೊರನಾಡ ದೂರದ ಗುಜರಾತ್‌ನಾದಾದ್ಯಂತ ನೆಲೆಯಾದ ತುಳುಕನ್ನಡಿಗರ ಸೇವೆಯಲ್ಲಿ ಕಾರ್ಯನಿರತ ಗುಜರಾತ್ ಬಿಲ್ಲವ ಸಂಘ ಮತ್ತು ತುಳು ಸಂಘ ಬರೋಡಾ ಸಂಸ್ಥೆಗಳು ಇಲ್ಲಿಗೆ ವಲಸೆಬಂದ ಕರ್ನಾಟಕದ ಜನತೆಯ ಪಾಲಿನ ಎರಡು ಕಣ್ಣುಗಳಿದ್ದಂತೆ. ಇಂತಹ ಅವಳಿ ಸಂಸ್ಥೆಗಳ ಸನ್ಮಾನದಿಂದ ನಾನು ಪುನೀತನಾಗಿದ್ದೇನೆ ಎಂದರು.
ದಯಾನಂದ ಬೋಂಟ್ರಾರು ಅಧ್ಯಕ್ಷೀಯ ನುಡಿಗಳನ್ನಾಡಿ ಜಯಣ್ಣರ ಸಮಾಜ ಸೇವೆಗೆ ಯಾವುದೇ ಸನ್ಮಾನ, ಪುರಸ್ಕಾರಗಳು ಕಡಿಮೆಯೇ ಆಗುತ್ತವೆ. ಅವರಲ್ಲಿನ ದೂರದೃಷ್ಠಿತ್ವ, ಸರ್ವರನ್ನೂ ಓಲೈಸಿ ಮುನ್ನಡೆಸುವ ಸದ್ಗುಣ ಕೋಟಿಗೊಬ್ಬರಂತಿದೆ. ಸದಾ ಸರಳತಾಭಾವನೆಯನ್ನು ಮೈಗೂಡಿ ಸಮುದಾಯದೊಂದಿಗೆ ಅಖಂಡ ಸಮಾಜಕ್ಕೆ ಮಾರ್ಗರ್ಶಕರಾಗಿರುವ ಜಯಣ್ಣರು ಶತಾಯುಷ್ಯವಾಗಿ ಬಾಳಿ ರಾಷ್ಟ್ರದ ಆಸ್ತಿಯಾಗಲಿ ಎಂದರು.
ಶಶಿಧರ್ ಬಿ.ಶೆಟ್ಟಿ ಸ್ವಾಗತಿಸಿ ಮಾತನಾಡಿ ಜಯ ಸುವರ್ಣರಂತಹ ಅಪರೂಪದ ಸಮಾಜ ಸೇವಾಕರ್ತರನ್ನು ಸನ್ಮಾನಿಸುವ ಸೌಭಾಗ್ಯ ನಮಗೆ ದೊರೆತದ್ದು ನಮ್ಮಲ್ಲಿ ಧನ್ಯತಾಭಾವ ಮೂಡಿಸಿದೆ ಎಂದರು.
ಎಸ್ಕೆ ಹಳೆಯಂಗಡಿ ಅವರು ಆಶಯ ಭಾಷಣಗೈದು ಜಯ ಸುವರ್ಣ ಅವರು ತುಳುನಾಡಿನ ಬಹುದೊಡ್ದ ಆಸ್ತಿ ಅವರ ದಕ್ಷ ಸೇವೆಗೆ ಪದ್ಮಶ್ರೀ ಪ್ರಶಸ್ತಿಯೂ ಅವರಿಗೆ ಹರಸಿ ಬರಲಿ ಎಂದರು.
ಕಾರ್ಯಕ್ರಮದ ಆರಂಭದಲ್ಲಿ ಗಣ್ಯರು ಸಂಘದ ಮಂದಿರದಲ್ಲಿನ ಮಾತೆ ಗಾಯತ್ರಿದೇವಿ, ಕೋಟಿ-ಚೆನ್ನಯರು ಮತ್ತು ಬ್ರಹ್ಮಶ್ರೀ ನಾರಾಯಣ ಗುರುಗಳ ಪ್ರತಿಮೆಗಳಿಗೆ ಆರತಿಗೈದರು. ಉಭಯ ಸಂಸ್ಥೆಗಳ ಅನೇಕ ಪದಾಧಿಕಾರಿಗಳು, ಮಹಿಳಾ ವಿಭಾಗದ ಮುಖ್ಯಸ್ಥೆಯರು, ಸದಸ್ಯರನೇಕರು ಹಾಜರಿದ್ದು, ದಯಾನಂದ ಸಾಲ್ಯಾನ್ ಮತ್ತು ಬಳಗ ಪ್ರಾರ್ಥನೆಯನ್ನಾಡಿದರು. ಶ್ರೀಮತಿ ಸುಜತಾ ಕೆ.ಶೆಟ್ಟಿ ಸನ್ಮಾನಪತ್ರ ವಾಚಿಸಿದರು. ಸರಳಾ ದಿನೇಶ್ ಶೆಟ್ಟಿ ಸಾಂಸ್ಕೃತಿಕ ಕಾರ್ಯಕ್ರಮವನ್ನೂ, ಬಾಲಕೃಷ್ಣ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ತುಳು ಸಂಘ ಬರೋಡಾದ ಕೋಶಾಧಿಕಾರಿ ವಾಸು ಪಿ.ಪೂಜಾರಿ ಅಭಾರ ಮನ್ನಿಸಿದರು. ಅಹ್ಮದಬಾದ್, ವಾಪಿ, ಸೂರತ್ ನಗರಗಳಿಂದ ಸೇರಿದಂತೆ ಗುಜರಾತ್ ರಾಜ್ಯದಾದ್ಯಂತ ನೂರಾರು ಬಿಲ್ಲವರೂ, ತುಳು-ಕನ್ನಡಿಗರು ಆಗಮಿಸಿ ಜಯ ಸುವರ್ಣರನ್ನು ಪುಷ್ಪಗುಪ್ಚಗಳನ್ನೀಡಿ ಗೌರವಿಸಿ ಅಭಿನಂಸಿದರು.
(ಚಿತ್ರ / ವರದಿ: ರೋನ್ಸ್ ಬಂಟ್ವಾಳ್)