ಮುಂಬೈ

ದೇಶದ ವಾಣಿಜ್ಯ ನಗರಿ ಮುಂಬೈ ಮಹಿಳೆಯರಿಗೆ ಸುರಕ್ಷಿತ ನಗರವಲ್ಲ …!

Pinterest LinkedIn Tumblr

ladies

ಮುಂಬೈ, ನ.26: ದೇಶದ ವಾಣಿಜ್ಯ ನಗರಿ, ಕಡಲ ತೀರದ ಹೆಬ್ಬಾಗಿಲು ಎಂಬೆಲ್ಲ ವಿಶೇಷತೆಗಳನ್ನು ಹೊಂದಿರುವ ಮುಂಬೈ ಮಹಾನಗರ ಮಹಿಳೆಯರಿಗೆ ದೇಶದಲ್ಲೇ ಅತ್ಯಂತ ಸುರಕ್ಷಿತ ನಗರವಲ್ಲ ಎಂಬುದು ಸಾಬೀತಾಗಿದೆ. ಏಕೆಂದರೆ, 2013-14ರಲ್ಲಿ ಮಹಿಳೆಯರ ಮೇಲೆ ನಡೆದಿರುವ ಅತ್ಯಾಚಾರ, ದೌರ್ಜನ್ಯ, ಅಪಹರಣ, ಕೊಲೆ ಯತ್ನ, ಚೈನು ಅಪಹರಣ ಸೇರಿದಂತೆ ಮತ್ತಿತರ ಪ್ರಕರಣಗಳನ್ನು ಅವಲೋಕಿಸಿದರೆ ಮಹಿಳೆಯರಿಗೆ ಈ ನಗರ ಒಂದಿಷ್ಟೂ ಸುರಕ್ಷಿತವಲ್ಲ ಎಂಬುದು ಅಂಕಿ-ಸಂಖ್ಯೆಗಳಿಂದ ಋಜುವಾತಾಗಿದೆ.

2012-13ರಲ್ಲಿ ಮಹಿಳೆಯರ ಮೇಲೆ 294 ಅತ್ಯಾಚಾರ ಪ್ರಕರಣಗಳು ನಡೆದಿದ್ದವು. ಇದೇ ರೀತಿ 2013-14ರಲ್ಲಿ 432 ಮಹಿಳೆಯರ ಮೇಲೆ ಅತ್ಯಾಚಾರ ಪ್ರಕರಣಗಳು ನಡೆದಿದ್ದು, ಇದು ಶೇ.47ರಷ್ಟು ಏರಿಕೆಯಾಗಿದೆ. ಇದೇ ರೀತಿ ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ ಪ್ರಕರಣ 2012-13ರಲ್ಲಿ 793 ಪ್ರಕರಣಗಳು ದಾಖಲಾಗಿದ್ದವು.

2013-14ರಲ್ಲಿ 1209 ಲೈಂಗಿಕ ಕಿರುಕುಳ ಪ್ರಕರಣಗಳು ವಿವಿಧ ಠಾಣೆಗಳಲ್ಲಿ ದಾಖಲಾಗಿ ಇದರ ಪ್ರಮಾಣ ಶೇ.52ರಷ್ಟು ಏರಿಕೆ ಕಂಡಿದೆ. ವಾಣಿಜ್ಯ ನಗರಿಯಲ್ಲಿ ಚೈನು ಅಪಹರಣಗಳ ಸಂಖ್ಯೆಯು 2012-13ರಲ್ಲಿ 1269ರಷ್ಟು ದಾಖಲಾಗಿದ್ದವು. 2013-14ರಲ್ಲಿ ಈ ಸಂಖ್ಯೆ 2110ಕ್ಕೆ ಏರಿಕೆಯಾಗಿ ಶೇ.66ರಷ್ಟು ಹೆಚ್ಚಳವಾಗಿದೆ ದೇಶದಲ್ಲೇ ಎರಡನೆ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಮುಂಬೈ ಮಹಾನಗರ ಮಹಿಳೆಯರಿಗೆ ಸುರಕ್ಷಿತ ನಗರವಲ್ಲ ಎಂಬುದು ಸಮೀಕ್ಷೆಯಿಂದ ಗೊತ್ತಾಗಿದೆ.

ಉತ್ತರ ಮುಂಬೈ ಪರ್ಲೆ, ಪುರ್ಲಾ, ಬಾಂದ್ರಾ ಸೇರಿದಂತೆ ಈ ಭಾಗದಲ್ಲಿ ಹೆಚ್ಚಿನ ಅಪರಾಧ ಚಟುವಟಿಕೆಗಳು ನಡೆಯುತ್ತಿವೆ. ಜನಸಂಖ್ಯೆಗನುಗುಣವಾಗಿ ಪೊಲೀಸರು ಭದ್ರತೆ ಒದಗಿಸಲು ಸಾಕಾಗುತ್ತಿಲ್ಲ. ಒಂದು ಕೋಟಿಗೂ ಅಧಿಕ ಜನಸಂಖ್ಯೆಯಿರುವ ಈ ಮಹಾನಗರದಲ್ಲಿ 41643 ಮಂದಿ ಪೊಲೀಸರಿದ್ದಾರೆ. ಇದು ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗಿದೆ.

Write A Comment