ಆಲಿಭಾಗ್: ಇತ್ತೀಚೆಗಷ್ಟೇ ನಡೆದ ಮಹಾರಾಷ್ಟ್ರದ ವಿದಾನಸಭಾ ಚುನಾವಣೆಯ ನಂತರದ ಮಹಾರಾಷ್ಟ್ರ ರಾಜಕೀಯ ಸನ್ನಿವೇಶದ ಹಿನ್ನಲೆಯಲ್ಲಿ, ಮತ್ತೆ ಬರಬಹುದಾದ ಚುನಾವಣೆಯನ್ನು ಎದುರಿಸಲು ಸಿದ್ಧರಿರುವಂತೆ ಪಕ್ಷದ ಕಾರ್ಯಕರ್ತರಿಗೆ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಶರದ್ ಪವಾರ್ ಕರೆ ಕೊಟ್ಟಿದ್ದಾರೆ.
“ಮಹಾರಾಷ್ಟ್ರದ ಹಠಾತ್ ಚುನಾವಣೆಗೆ ನಾವು ಸಿದ್ಧರಿರಬೇಕು” ಎಂದು ಮಹಾರಾಷ್ಟ್ರದ ರಾಯಘಡ ಜಿಲ್ಲೆಯ ಆಲಿಭಾಗ್ ನಲ್ಲಿ ನಡೆಯುತ್ತಿರುವ ೨ ದಿನ ಪಕ್ಷದ ಸಭೆಯಲ್ಲಿ ಮಂಗಳವಾರ ಪವಾರ್ ಹೇಳಿದ್ದಾರೆ.
ಚುನಾವಣೆಯ ನಂತರ ಷರತ್ತು ರಹಿತ ಬಾಹ್ಯ ಬೆಂಬಲವನ್ನು ಬಿಜೆಪಿ ಸರ್ಕಾರಕ್ಕೆ ನೀಡಿದ್ದ ಎನ್ ಸಿ ಪಿ ಪಕ್ಷದ ರಾಷ್ಟ್ರಾಧ್ಯಕ್ಷ ಪವಾರ್ “ಮಹಾರಾಷ್ಟ್ರದಲ್ಲಿ ಸ್ಥಿರ ಸರ್ಕಾರ ಉಳಿಸುವುದು ಎನ್ ಸಿ ಪಿ ಪಕ್ಷದ ಕೆಲಸವಲ್ಲ.” ಎಂದಿದ್ದಾರೆ.
ರಾಜ್ಯದ ಚುನಾವಣೆಗಳಲ್ಲಿ ಎರಡು ಸ್ಥಾನ ಗೆದ್ದ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಂ ಐ ಎಂ) ಪಕ್ಷದ ಬೆಳವಣಿಗೆಯ ಹಿಂದೆಯೂ ಬಿಜೆಪಿ ಪಕ್ಷದ ಕೆಲವು ಶಕ್ತಿಗಳಿವೆ ಎಂದಿದ್ದಾರೆ ಪವಾರ್.
೨೮೮ ಸದಸ್ಯರ ರಾಜ್ಯ ವಿಧಾನಸಭೆಯಲ್ಲಿ ಬಿಜೆಪಿ ೧೨೧, ಶಿವಸೇನೆ ೬೩ ಕಾಂಗ್ರೆಸ್ ೪೨ ಮತ್ತು ಎನ್ ಸಿ ಪಿ ೪೧ ಸದಸ್ಯರ ಬಲಾಬಲ ಹೊಂದಿದೆ.
ಎನ್ ಸಿ ಪಿ ಬಾಹ್ಯ ಬೆಂಬಲ ಘೋಷಿಸಿದ ನಂತರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ವಿವಾದಾತ್ಮ ರೀತಿಯಲ್ಲಿ ಬಹುಮತ ಸಾಬೀತುಪಡಿಸಿದ್ದರು.