ಮುಂಬೈ

ಮೊಂಡುತನದಿಂದಾಗಿ ಅಧಿಕಾರದಿಂದ ದೂರ ಉಳಿಯುತ್ತಿರುವ ಸೇನೆ

Pinterest LinkedIn Tumblr

uddhav-modi

ಮುಂಬೈ: ಅಧಿಕಾರದ ವಿಚಾರವಾಗಿ ಶಿವಸೇನೆ ತೋರುತ್ತಿರುವ ಹಠಮಾರಿ ಧೋರಣೆ ಆ ಪಕ್ಷಕ್ಕೇ ವ್ಯತಿರಿಕ್ತವಾಗುವ ಸಾಧ್ಯತೆ ಇದೆ.

ಮಹಾರಾಷ್ಟ್ರ ಸರ್ಕಾರದಲ್ಲಿ ಸಮಪಾಲು ಅಧಿಕಾರಕ್ಕೆ ಒತ್ತಡ ಹೇರಿದ್ದ ಶಿವಸೇನೆ, ಇಂದು ಕೇಂದ್ರ ಸಚಿವ ಸಂಪುಟ ವಿಸ್ತರಣೆಯಲ್ಲಿಯೂ ತಮ್ಮ ಪಕ್ಷದ ಇಬ್ಬರು ಸಂಸದರಿಗೆ ಕ್ಯಾಬಿನೆಟ್ ದರ್ಜೆಯ ಸ್ಥಾನಮಾನ ನೀಡಬೇಕು ಎಂದು ಒತ್ತಾಯಿಸಿದ್ದರು. ಆದರೆ ಶಿವಸೇನೆಯ ಒತ್ತಾಯಕ್ಕೆ ಮಣಿಯದ ಬಿಜೆಪಿ ಶಿವಸೇನೆಯ ಯಾವೊಬ್ಬ ನಾಯಕನಿಗೂ ಕ್ಯಾಬಿನೆಟ್ ದರ್ಜೆಯ ಸ್ಥಾನಮಾನ ನೀಡಲಿಲ್ಲ. ಇದಿಷ್ಟೇ ಅಲ್ಲದೇ ಈ ಹಿಂದೆ ಸುರೇಶ್ ಪ್ರಭು ಅವರಿಗೆ ಕ್ಯಾಬಿನೆಟ್ ದರ್ಜೆಯ ಸ್ಥಾನ ನೀಡಬಾರದು ಎಂದು ಶಿವಸೇನೆ ಒತ್ತಾಯಿಸಿತ್ತು. ಆದರೆ ಸುರೇಶ್ ಪ್ರಭು ಅವರು ಇಂದು ಬೆಳಗ್ಗೆ ಶಿವಸೇನೆಯನ್ನು ತೊರೆದಿದ್ದರು. ಬಿಜೆಪಿ ಅವರಿಗೆ ಕ್ಯಾಬಿನೆಟ್ ದರ್ಜೆಯ ಸ್ಥಾನ ಮಾನ ನೀಡಿದ್ದೇ ಅಲ್ಲದೇ ಪ್ರಮುಖ ರೇಲ್ವೆ ಖಾತೆಯ ಜವಾಬ್ದಾರಿ ನೀಡಲು ಸಜ್ಜಾಗಿದೆ.

ಅಂತೆಯೇ ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಶಿವಸೇನೆ ಬೆಂಬಲ ನೀಡಿದರೆ ಸರ್ಕಾರದಲ್ಲಿ ಅರ್ಧದಷ್ಟು ಅಧಿಕಾರ ನೀಡಲು ಬಿಜೆಪಿ ಸುತಾರಂ ಸಿದ್ಧವಿಲ್ಲ. ಬದಲಿಗೆ ಶಿವಸೇನೆಯನ್ನು ತನ್ನ ಪುಟ್ಟ ಮೈತ್ರಿ ಪಕ್ಷವಾಗಿ ಪರಿಗಣಿಸುವುದಾಗಿ ಪರೋಕ್ಷವಾಗಿ ಬಿಜೆಪಿ ಹೇಳಿದೆ. ಇಂತಹ ನಡವಳಿಕೆಯೇ ಉದ್ಧವ್ ಠಾಕ್ರೆಗೆ ಇರುಸು-ಮುರುಸು ಮಾಡಿದೆ.

ಇನ್ನು ಅಲ್ಪಮತ ಹೊಂದಿರುವ ಮಹಾರಾಷ್ಟ್ರ ಸರ್ಕಾರ ಇದೇ ನವೆಂಬರ್ 12 ಬುಧವಾರದಂದು ವಿಶ್ವಾಸ ಮತ ಯಾಚನೆ ಮಾಡಲಿದ್ದು, ಬಹುಮತಕ್ಕಾಗಿ ಬಿಜೆಪಿ ಶಿವಸೇನೆಯನ್ನು ಬೆಂಬಲ ಕೇಳಿತ್ತು. ಆದರೆ ಈ ಬಗ್ಗೆ ತಕರಾರು ಎತ್ತಿದ್ದ ಶಿವಸೇನೆ ಮೊದಲು ಸರ್ಕಾರದಲ್ಲಿ ತಮಗೆ ಸಮಪಾಲು ಅಧಿಕಾರ ಮತ್ತು ಉಪಮುಖ್ಯಮಂತ್ರಿ ಸ್ಥಾನ ನೀಡಿ ಬಳಿಕವಷ್ಟೇ ತಾವು ವಿಶ್ವಾಸಮತದಲ್ಲಿ ಬೆಂಬಲ ನೀಡುವುದಾಗಿ ಹೇಳಿತ್ತು. ಆದರೆ ಇದಕ್ಕೆ ತಿರುಗೇಟು ನೀಡಿದ್ದ ಬಿಜೆಪಿ ವಿಶ್ವಾಸ ಮತ ಯಾಚನೆ ಬಳಿಕವಷ್ಟೇ ಸರ್ಕಾರದಲ್ಲಿ ಅಧಿಕಾರ ಹಂಚಿಕೆ ಮಾಡುತ್ತೇವೆ ಎಂದು ಹೇಳಿತ್ತು.

ಬಿಜೆಪಿ ನಿಲುವಿನಿಂದಾಗಿ ತೀವ್ರ ಅಸಮಾಧಾನಗೊಂಡಿದ್ದ ಶಿವಸೇನೆ ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯಿಂದಲೂ ದೂರ ಉಳಿದಿತ್ತು. ಅಲ್ಲದೇ ಇಂದು ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಬೇಕಿದ್ದ ಶಿವಸೇನೆಯ ಅನಿಲ್ ದೇಸಾಯಿ ಅವರನ್ನು ಕೂಡ ದೆಹಲಿ ವಿಮಾನ ನಿಲ್ದಾಣದಿಂದಲೇ ವಾಪಸ್ ಕರೆಸಿಕೊಂಡಿತ್ತು. ಹೀಗಾಗಿಯೇ ಇಂದು 22 ಮಂದಿಯ ಪೈಕಿ 21 ಮಂದಿ ಮಾತ್ರ ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಅಧಿಕಾರದ ವಿಚಾರವಾಗಿ ಶಿವಸೇನೆ ತೋರುತ್ತಿರುವ ಹಠಮಾರಿ ಧೋರಣೆ ಆ ಪಕ್ಷಕ್ಕೇ ವ್ಯತಿರಿಕ್ತವಾಗುವ ಸಾಧ್ಯತೆ ಇದೆ. ಶಿವಸೇನೆ ಕಳೆದ 15 ವರ್ಷಗಳಿಂದ ಮಹಾರಾಷ್ಟ್ರದಲ್ಲಿ ಅಧಿಕಾರವಿಲ್ಲದೇ ಕಳೆದಿದೆ. ಹೀಗಿದ್ದೂ ಕೂಡ ಅಧಿಕಾರ ತನ್ನ ಬಳಿಗೇ ಬಂದರೂ ಅದನ್ನು ತನ್ನ ಹಠದಿಂದಾಗಿ ಅದು ದೂರ ತಳ್ಳುತ್ತಿದೆ. ಈಗಾಗಲೇ ಮಹಾರಾಷ್ಟ್ರದಲ್ಲಿ ಶಿವಸೇನೆ ಪಕ್ಷ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದು, ಈಗೇನಾದರೂ ಅದು ಸರ್ಕಾರದಿಂದ ದೂರ ಉಳಿದರೆ ಮತ್ತಷ್ಟು ಸ್ಥಾನಗಳನ್ನು ಕಳೆದುಕೊಳ್ಳುವ ಸಾಧ್ಯತೆಯೇ ಹೆಚ್ಚು.

ಸರ್ಕಾರದಲ್ಲಿ ಪಾಲ್ಗೊಂಡು ಆ ಮೂಲಕ ಪಕ್ಷವನ್ನು ಸಮರ್ಥವಾಗಿ ಸಂಘಟಿಸುವ ಅವಕಾಶ ಈಗಲೂ ಶಿವಸೇನೆ ಮುಂದಿದ್ದು, ಅದನ್ನು ಸಮರ್ಥವಾಗಿ ಬಳಸಿಕೊಳ್ಳದಿದ್ದರೆ ಮತ್ತಷ್ಟು ಕಾಲ ಅಧಿಕಾರದಿಂದ ದೂರ ಉಳಿಯಬೇಕಾಗುತ್ತದೆ.

Write A Comment