ರಾಷ್ಟ್ರೀಯ

ಶಿವಸೇನೆಗೆ ಸುರೇಶ್ ಪ್ರಭು ರಾಜಿನಾಮೆ, ಬಿಜೆಪಿ ಸೇರ್ಪಡೆ: ಕೇಂದ್ರದಲ್ಲಿ ಮತ್ತೆ ರಾಜಕೀಯ ದಾಳ ಹೂಡಿದ ಪ್ರಧಾನಿ ಮೋದಿ

Pinterest LinkedIn Tumblr

ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಶಿವಸೇನೆಗೆ ರಾಜಿನಾಮೆ ನೀಡಿ ಬಿಜೆಪಿ ಸೇರ್ಪಡೆಗೊಂಡ ಕೇಂದ್ರ ಸಚಿವ ಸುರೇಶ್ ಪ್ರಭು.
prabhu

ನವದೆಹಲಿ: ಶಿವಸೇನೆಯ ಸುರೇಶ್ ಪ್ರಭು ಅವರು ತಮ್ಮ ಪಕ್ಷಕ್ಕೆ ರಾಜಿನಾಮೆ ನೀಡಿದ್ದು, ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಬಿಜೆಪಿ ಪಕ್ಷವನ್ನು ಸೇರ್ಪಡೆಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಮಹಾರಾಷ್ಟ್ರ ಸರ್ಕಾರದಲ್ಲಿ ಸಮಪಾಲು ಅಧಿಕಾರ ಮತ್ತು ಕೇಂದ್ರದಲ್ಲಿ 2 ಸಂಪುಟದರ್ಜೆ ಸ್ಥಾನಮಾನ ಕೇಳಿದ್ದ ಶಿವಸೇನೆಯ ಪ್ರಸ್ತಾಪವನ್ನು ಬಿಜೆಪಿ ಸಾರಾಸಗಟಾಗಿ ತಳ್ಳಿಹಾಕಿದ್ದು, ಸುರೇಶ್ ಪ್ರಭು ಅವರನ್ನು ಕೇಂದ್ರ ಸಚಿವರಾಗಿ ನೇಮಕ ಮಾಡಿಕೊಂಡಿದೆ. ಈ ಹಿಂದೆ ಮಹಾರಾಷ್ಟ್ರ ಸರ್ಕಾರಕ್ಕೆ ಬೆಂಬಲ ನೀಡುವ ವಿಚಾರಕ್ಕೆ ಕುರಿತಂತೆ ಭುಗಿಲೆದ್ದಿದ್ದ ಮನಸ್ತಾಪವನ್ನು ಕ್ಯಾಬಿನೆಟ್ ವಿಸ್ತರಣೆಯಲ್ಲಿಯೂ ಶಿವಸೇನೆ ಮುಂದುವರೆಸಿದ್ದು, ತನ್ನ ಸಂಸದರನ್ನು ವಾಪಸ್ ಕರೆಸಿಕೊಳ್ಳಲು ಯತ್ನಿಸಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿ ಅವರ ಚಾಣಕ್ಷ ನಡೆಯಿಂದಾಗಿ ಇಂದು ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿರುವ ಸುರೇಶ್ ಪ್ರಭು ಅವರು ಶಿವಸೇನೆಗೆ ಬೆಳಗ್ಗೆ ರಾಜಿನಾಮೆ ನೀಡಿದ್ದಾರೆ. ಬಳಿಕವಷ್ಟೇ ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

ಇದು ಶಿವಸೇನೆಗೆ ನುಂಗಲಾರದ ತುತ್ತಾಗಿ ಪರಿಣಮಿಸಿದ್ದು, ಕೇಂದ್ರ ಸರ್ಕಾರದಲ್ಲಿ ಭಾಗಿಯಾಗಿರಬೇಕೇ ಅಥವಾ ಬೇಡವೇ ಎಂಬ ವಿಚಾರವಾಗಿ ಶಿವಸೇನೆ ತನ್ನ ಮುಖಂಡರೊಂದಿಗೆ ಚರ್ಚೆ ನಡೆಸುತ್ತಿದೆ. ಅಂತೆಯೇ ಈಗಾಗಲೇ ಕೇಂದ್ರ ಸಚಿವರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಅನಂತ್ ಗೀತೆ ಅವರ ಭವಿಷ್ಯ ಕೂಡ ಇಂದೇ ನಿರ್ಧಾರವಾಗಲಿದ್ದು, ಶಿವಸೇನೆ ಇಂದು ಕೈಗೊಳ್ಳುವ ನಿರ್ಧಾರ ಮಹಾರಾಷ್ಟ್ರ ಸರ್ಕಾರದಲ್ಲಿ ಅವರ ಭವಿಷ್ಯವನ್ನು ನಿರ್ಧರಿಸಲಿದೆ.

ಇನ್ನು ಇಂದು ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿರುವ ಸುರೇಶ್ ಪ್ರಭು ಅವರಿಗೆ ರೇಲ್ವೇ ಖಾತೆ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ನೂತನ 21 ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

Write A Comment