ಮುಂಬೈ

ಅ.4 ರಿಂದ ಮಹಾರಾಷ್ಟ್ರದಲ್ಲಿ ಶುರುವಾಗಲಿದೆ ಮೋದಿ ಅಬ್ಬರ

Pinterest LinkedIn Tumblr

modi-abbara

ನವದೆಹಲಿ, ಅ.1: ಇದೇ ತಿಂಗಳ 15 ರಂದು ನಡೆಯಲಿರುವ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಶನಿವಾರದಿಂದ ಬಿಜೆಪಿ ಸ್ಟಾರ್ ಕ್ಯಾಂಪೇನರ್ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ತಮ್ಮ ಅಧಿಕೃತ ಪ್ರಚಾರವನ್ನು ಆರಂಭಿಸಲಿದ್ದಾರೆ. ಮಹಾರಾಷ್ಟ್ರ ರಾಜಧಾನಿ ಮುಂಬೈನಿಂದ ಪ್ರಚಾರವನ್ನು ಆರಂಭಿಸಲಿರುವ ಮೋದಿ ಪಕ್ಷದ ಅಭ್ಯರ್ಥಿಗಳ ಪರ ಮತಯಾಚನೆ ಮಾಡಲಿದ್ದಾರೆ. ಎರಡೂವರೆ ದಶಕಗಳ ನಂತರ ಬಿಜೆಪಿ-ಶಿವಸೇನೆ ಮೈತ್ರಿ ಮುರಿದು ಬಿದ್ದಿದೆ. ಹೀಗಾಗಿ ಬಹುವರ್ಷಗಳ ನಂತರ ಮಹಾರಾಷ್ಟ್ರದಲ್ಲಿ ಬಿಜೆಪಿ ಏಕಾಂಗಿಯಾಗಿ ಹೋರಾಟ ನಡೆಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ರಾಜ್ಯದ ಒಟ್ಟು 288 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವ ಬಿಜೆಪಿ ನರೇಂದ್ರ ಮೋದಿ ಮೂಲಕವೇ ಮತಯಾಚನೆ ಮಾಡಲು ಮುಂದಾಗಿದೆ.

ಮೋದಿ ಅಲೆಯನ್ನೇ ಪ್ರಬಲವಾಗಿ ನೆಚ್ಚಿಕೊಂಡಿರುವ ಬಿಜೆಪಿ ಇದಕ್ಕಾಗಿ ರಾಜ್ಯದ 24 ಕಡೆ ಸಾರ್ವಜನಿಕ ಸಭೆಯನ್ನು ಹಮ್ಮಿಕೊಂಡಿದೆ. ಮಹಾರಾಷ್ಟ್ರದಲ್ಲಿ ಸ್ವಂತ ಬಲದ ಮೇಲೆ ಅಧಿಕಾರ ಗದ್ದುಗೆ ಹಿಡಿಯಬೇಕೆಂದು ತೀರ್ಮಾನಿಸಿರುವ ಕಮಲ ಪಡೆ ಇದಕ್ಕಾಗಿ ತನ್ನದೇ ಆದ ರಣತಂತ್ರವನ್ನು ರೂಪಿಸಿದೆ.

ಲೋಕಸಭೆ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ್ದ ಬಿಜೆಪಿ ಮೋದಿ ಅಲೆಯ ಮೂಲಕವೇ ರಾಜ್ಯದಲ್ಲಿ ಅಧಿಕಾರ ಹಿಡಿಯಬಹುದೆಂಬ ಲೆಕ್ಕಾಚಾರದಲ್ಲಿದೆ. ಮುಂಬೈ, ಪುಣೆ, ಔರಂಗಬಾದ್, ಥಾಣೆ ಹಾಗೂ ವಿದರ್ಭ ಭಾಗಗಳಲ್ಲಿ ಮೋದಿಯನ್ನು ಹೆಚ್ಚು ಹೆಚ್ಚು ಬಿಂಬಿಸಿ ಮತಯಾಚನೆ ಮಾಡುವುದು ಬಿಜೆಪಿ ಕಾರ್ಯತಂತ್ರದಲ್ಲೊಂದಾಗಿದೆ. ಸಾರ್ವಜನಿಕ ಸಮಾರಂಭಗಳಿಗೆ ಸಾವಿರಾರು ಸಂಖ್ಯೆಯಲ್ಲಿ ಜನರನ್ನು ಒಂದೆಡೆ ಸೇರಿಸಿ ಮತಗಳನ್ನಾಗಿ ಪರಿವರ್ತಿಸುವ ಯೋಜನೆಯಲ್ಲಿದೆ. ಅಮೆರಿಕ ಪ್ರವಾಸ ಮುಗಿಸಿ ಇಂದು ಸ್ವದೇಶಕ್ಕೆ ಹಿಂತಿರುಗುತ್ತಿರುವ ಮೋದಿ ನಾಳೆ ಮಹತ್ವಾಕಾಂಕ್ಷೆಯ ಭಾರತ್ ಸ್ವಚ್ಛ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ.

ಬಳಿಕ ಅ.4 ರಿಂದ 13ರವರೆಗೂ ಮಹಾರಾಷ್ಟ್ರದ ವಿವಿಧೆಡೆ 24 ಕಡೆ ಬಹಿರಂಗ ಪ್ರಚಾರ ನಡೆಸಲಿದ್ದಾರೆ. ಮೋದಿ ಭಾಗವಹಿಸುವ ಕಾರ್ಯಕ್ರಮಕ್ಕೆ ಬೃಹತ್ ಸಂಖ್ಯೆಯಲ್ಲಿ ಕಾರ್ಯಕರ್ತರನ್ನು ಸೇರಿಸಲು ಈಗಾಗಲೇ ಬಿಜೆಪಿ ತೀರ್ಮಾನಿಸಿದೆ. ಇದಕ್ಕಾಗಿ ಚುನಾವಣಾ ಆಯೋಗದಿಂದ ಪೂರ್ವಾನುಮತಿ ಪಡೆಯಲಾಗಿದ್ದು, ಮೋದಿ ಭಾಷಣವನ್ನು ವೀಕ್ಷಿಸಲು ಹೆಚ್ಚು ಸಂಖ್ಯೆಯಲ್ಲಿ ಎಲ್‍ಸಿಡಿ ವ್ಯವಸ್ಥೆ ಕಲ್ಪಿಸಲಾಗಿದೆ.

Write A Comment