
ಹೊಸದಿಲ್ಲಿ, ಸೆ.25: ವಿಧಾನಸಭಾ ಸೀಟು ಹಂಚಿಕೆಯ ಕುರಿತ ಬಿಕ್ಕಟ್ಟಿನಿಂದಾಗಿ ಕಾಂಗ್ರೆಸ್ ಹಾಗೂ ಎನ್ಸಿಪಿ ಪಕ್ಷಗಳ ಚುನಾವಣಾ ಬಾಂಧವ್ಯವೂ ಗುರುವಾರ ಮುರಿದುಬಿದ್ದಿದೆ.
ಕಾಂಗ್ರೆಸ್ ಜೊತೆಗಿನ ತನ್ನ 15 ವರ್ಷಗಳ ಚುನಾವಣಾ ಮೈತ್ರಿಯನ್ನು ಕಡಿದುಕೊಳ್ಳುವುದಾಗಿ ಎನ್ಸಿಪಿ ಘೋಷಿಸಿದೆ. ಮುಂಬೈಯಲ್ಲಿ ಇಂದು ನಡೆದ ಪತ್ರಿಕಾಗೋಷ್ಟಿಯೊಂದರಲ್ಲಿ ಎನ್ಸಿಪಿ ನಾಯಕ ಪ್ರಫುಲ್ ಪಟೇಲ್ ಅವರು ಕಾಂಗ್ರೆಸ್ ನೇತೃತ್ವದ ಮಹಾರಾಷ್ಟ್ರ ಸರಕಾರಕ್ಕೆ ತನ್ನ ಪಕ್ಷವು ಬೆಂಬಲವನ್ನು ಹಿಂತೆಗೆದುಕೊಂಡಿರುವುದಾಗಿ ಘೋಷಿಸಿದರು. ಎನ್ಸಿಪಿ ನಾಯಕ, ಉಪಮುಖ್ಯಮಂತ್ರಿ ಅಜಿತ್ ಪವಾರ್ ರಾಜ್ಯಪಾಲರನ್ನು ಭೇಟಿಯಾಗಿ ತನ್ನ ರಾಜೀನಾಮೆ ಪತ್ರವನ್ನು ಸಲ್ಲಿಸಲಿದ್ದಾರೆಂದು ಅವರು ಹೇಳಿದರು. ಮಿತ್ರಪಕ್ಷವಾದ ಎನ್ಸಿಪಿಯ ಜೊತೆ ಸಮಾಲೋಚಿಸದೆಯೇ ಕಾಂಗ್ರೆಸ್ ಅಕ್ಟೋಬರ್ 15ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದೆಯೆಂದು ಅವರು ಆಪಾದಿಸಿದರು.
ತಾನು ಮೈತ್ರಿಕೂಟದ ಅಂಗಪಕ್ಷವಾಗಿದ್ದರೂ ಕಾಂಗ್ರೆಸ್ ಪಕ್ಷವು ತನ್ನನ್ನು ಕಡೆಗಣಿಸುತ್ತಲೇ ಬಂದಿದೆ ಎಂದು ಎನ್ಸಿಪಿ ಅಸಮಾಧಾನ ವ್ಯಕ್ತಪಡಿಸಿತ್ತು. ಕಳೆದ ಹದಿನೈದು ವರ್ಷಗಳಿಂದ ಮಹಾರಾಷ್ಟ್ರ ಮುಖ್ಯಮಂತ್ರಿ ಸ್ಥಾನವನ್ನು ಕಾಂಗ್ರೆಸ್ ಪಕ್ಷವು ಹಿಡಿದಿಟ್ಟುಕೊಂಡಿದೆ, ಈ ಬಾರಿ ಅದನ್ನು ತನಗೆ ನೀಡಬೇಕೆಂಬುದು ಎನ್ಸಿಪಿಯ ವಾದವಾಗಿದೆ. ಮುಖ್ಯಮಂತ್ರಿ ಹುದ್ದೆಯ ಅವಧಿಯನ್ನು ಎನ್ಸಿಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಸಮಾನವಾಗಿ ಹಂಚಿಕೊಳ್ಳಬೇಕೆಂಬ ಕೊಡುಗೆಯನ್ನು ತಾವು ಮುಂದಿಟ್ಟಿದ್ದಾಗಿ ಪ್ರಫುಲ್ ಪಟೇಲ್ ತಿಳಿಸಿದ್ದಾರೆ.