ರಾಷ್ಟ್ರೀಯ

ಪ್ರಧಾನಿ ಅಮೆರಿಕಕ್ಕೆ

Pinterest LinkedIn Tumblr

modi12

ಹೊಸದಿಲ್ಲಿ, ಸೆ.25: ಅಮೆರಿಕವನ್ನು ಭಾರತದ ಪ್ರಬಲ ಭಾಗಿದಾರಿಯೆಂದು ಬಣ್ಣಿಸಿದ ಪ್ರಧಾನಿ ನರೇಂದ್ರ ಮೋದಿ, ಗುರುವಾರ ಚೊಚ್ಚಲ ಭೇಟಿಗಾಗಿ ಅಮೆರಿಕಕ್ಕೆ ಪ್ರಯಾಣ ಬೆಳೆಸಿದ್ದಾರೆ.ತನ್ನ ಐದು ದಿನಗಳ ಪ್ರವಾಸವು ದ್ವಿಪಕ್ಷೀಯ ವ್ಯೆಹಾತ್ಮಕ ಭಾಗಿದಾರಿಕೆಯ ‘ಹೊಸ ಅಧ್ಯಾಯ’ವೊಂದನ್ನು ಆರಂಭಿಸಲಿದೆಯೆಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.

ಭಾರತವು ವ್ಯವಹಾರಕ್ಕೆ ಮುಕ್ತವಾಗಿದೆಯೆಂಬುದನ್ನು ಪ್ರಚುರಪಡಿಸುವ ಹಾಗೂ ಕಳೆದ ವರ್ಷದ ರಾಜತಾಂತ್ರಿಕ ವಿವಾದದ ಬಳಿಕ ಹಳಸಿದ್ದ ಸಂಬಂಧವನ್ನು ಸರಿಪಡಿಸುವ ಉದ್ದೇಶ ಹೊಂದಿರುವ ಮೋದಿ, ತಾನು ಮುಂದಿನೆರಡು ದಿನಗಳಲ್ಲಿ ವಾಶಿಂಗ್ಟನ್‌ನಲ್ಲಿ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮರ ಭೇಟಿಯನ್ನು ಎದುರು ನೋಡುತ್ತಿದ್ದೇನೆ ಎಂದರು.

ಉಭಯ ದೇಶಗಳ ಹಾಗೂ ವಿಶ್ವದ ಹಿತಾಸಕ್ತಿಗಾಗಿ ಭಾರತ-ಅಮೆರಿಕ ಸಂಬಂಧವನ್ನು ಹೇಗೆ ಹೊಸ ಎತ್ತರಕ್ಕೆ ಕೊಂಡೊಯ್ಯಬಹುದೆಂಬ ಕುರಿತು ತಾನು ಒಬಾಮರೊಂದಿಗೆ ಚರ್ಚಿಸಲಿದ್ದೇನೆಂದು ಪ್ರಧಾನಿ ತಿಳಿಸಿದರು.ಮರುದಿನದ ಸಮಿತಿ ಮಾತುಕತೆಗಳ ಪೂರ್ವದಲ್ಲಿ ಭಾರತದ ನಾಯಕರೊಂದಿಗೆ ವೈಯಕ್ತಿಕ ಸಂಬಂಧವೊಂದನ್ನು ಸ್ಥಾಪಿಸುವುದಕ್ಕಾಗಿ ಒಬಾಮ ಸೆ.29ರಂದು ಶ್ವೇತಭವನದಲ್ಲಿ ಮೋದಿಯವರಿಗಾಗಿ ಅತ್ಯಪೂರ್ವ ಖಾಸಗಿ ಔತಣಕೂಟವೊಂದನ್ನು ಏರ್ಪಡಿಸಲಿದ್ದಾರೆ. ಉಭಯ ನಾಯಕರು ಮೊದಲ ಸಲ ಭೇಟಿಯಾಗುತ್ತಿದ್ದಾರೆ.

ಆದರೆ, ಮೋದಿ ನವರಾತ್ರಿಯ ಉಪವಾಸವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿರುವುದರಿಂದ ಔತಣಕೂಟದಲ್ಲಿ ಕೇವಲ ಚಹಾ ಅಥವಾ ಲಿಂಬೆ ಪಾನೀಯವಷ್ಟೇ ಸೇವಿಸುವ ಸಾಧ್ಯತೆಯಿದೆ.

Write A Comment