ಕರ್ನಾಟಕ

ಹಾಸನದಲ್ಲಿ ಪಾನಮತ್ತ ಲಾರಿ ಚಾಲಕನ ಅತೀ ವೇಗದ ಚಾಲನೆಗೆ ಅವಳಿ ಕಂದಮ್ಮಗಳು ಬಲಿ, ಪೋಷಕರು ಗಂಭೀರ

Pinterest LinkedIn Tumblr

ಹಾಸನ: ಬೈಕ್​ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಅವಳಿ ಮಕ್ಕಳು ದಾರುಣವಾಗಿ ಮೃತಪಟ್ಟ ಘಟನೆ ಹಾಸನ ಹೊರವಲಯದಲ್ಲಿ ಸಂಭವಿಸಿದ್ದು ಅಪಘಾತದ ರಭಸಕ್ಕೆ ಕಂದಮ್ಮಗಳ ದೇಹಗಳು ಛಿದ್ರ ಛಿದ್ರಗೊಂಡಿದ್ದು, ತಂದೆ-ತಾಯಿ ಕೂಡ ಗಂಭೀರವಾಗಿ ಗಾಯಗೊಂಡಿದ್ದಾರೆ.

ಪ್ರಣತಿ (3) ಹಾಗೂ ಪ್ರಣವ್(3) ಮೃತಪಟ್ಟ ಅವಳಿ ಮಕ್ಕಳಾಗಿದ್ದು, ಶಿವಾನಂದ್ ಹಾಗೂ ಪತ್ನಿ ಜ್ಯೋತಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ದಂಪತಿಯು ದ್ವಿಚಕ್ರವಾಹನದಲ್ಲಿ ಹಾಸನದ ಕಡೆಗೆ ಹೊರಟಿದ್ದ ವೇಳೆ ಹಿಂದಿನಿಂದ ಬಂದ ಲಾರಿ ಏಕಾಏಕಿ ಡಿಕ್ಕಿ ಹೊಡೆದಿದೆ. ಪರಿಣಾಮ ಮಕ್ಕಳು ಸ್ಥಳದಲ್ಲೇ ಅಸುನೀಗಿದ್ದಾರೆ. ಡಿಕ್ಕಿ ರಭಸಕ್ಕೆ ಮಕ್ಕಳ ಮೃತದೇಹಗಳು ಛಿದ್ರವಾಗಿದೆ. ಶಿವಾನಂದ್ ಹಾಗೂ ಜ್ಯೋತಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ.

ಅಪಘಾತವೆಸಗಿದ ಲಾರಿ ಚಾಲಕ ಪರಾರಿಯಾಗಲು ಯತ್ನಿಸಿದ್ದು, ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ. ಲಾರಿ ಚಾಲಕನು ಮದ್ಯಪಾನ ಮಾಡಿ ಅಜಾಗರೂಕತೆಯಿಂದ ಚಾಲನೆ ಮಾಡಿರುವುದೇ ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದೆ.

ಪೊಲೀಸರು ಲಾರಿಯನ್ನು ವಶಪಡಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Comments are closed.