ಕರ್ನಾಟಕ

‘ಪುನೀತ್ ಅಂತಿಮ ದರ್ಶನ ಪಡೆದೆನೋ, ಇಲ್ಲವೋ ಎಂಬುದು ಅವರ ಕುಟುಂಬಕ್ಕೆ ತಿಳಿದಿದೆ’: ರಾಧಿಕಾ ಪಂಡಿತ್

Pinterest LinkedIn Tumblr

ಬೆಂಗಳೂರು: ಇತ್ತೀಚೆಗೆ ಹೃದಯಾಘಾತದಿಂದ ಮೃತಪಟ್ಟ ಪುನೀತ್​ ರಾಜ್​ಕುಮಾರ್​ ಅವರನ್ನು ಸ್ಯಾಂಡಲ್​ವುಡ್​ನ ಬಹುತೇಕ ಸೆಲೆಬ್ರಿಟಿಗಳು, ರಾಜಕಾರಣಿಗಳು ಅವರ ಅಂತಿಮ ದರ್ಶನ ಪಡೆದಿದ್ದರು. ಆದರೆ, ಪುನೀತ್ ಜೊತೆ ನಟಿಸಿದ್ದ ನಟಿ ರಾಧಿಕಾ ಪಂಡಿತ್ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ ಎಂದು ಅಭಿಮಾನಿಗಳು ಹೇಳಿದ್ದರು. ಈ ಬಗ್ಗೆ ಅವರು ಯಾವುದೇ ಪೋಸ್ಟ್​ ಕೂಡ ಹಾಕಿರಲಿಲ್ಲ. ಪುನೀತ್​ ನಿಧನ ಹೊಂದಿ 13 ದಿನಗಳಾದ ನಂತರ ಅವರ​ ಜತೆ ಇರುವ ಫೋಟೋವನ್ನು ರಾಧಿಕಾ ಹಂಚಿಕೊಳ್ಳುವ ಮೂಲಕ ಅವರನ್ನು ನೆನಪಿಸಿಕೊಂಡಿದ್ದಾರೆ. ಈ ಪೋಸ್ಟ್​ಗೆ ಸಾಕಷ್ಟು ಜನರು ‘ನೀವು ಅಪ್ಪು ಸರ್​​ಅನ್ನು ಕೊನೆಯ ಬಾರಿಗೆ ನೋಡೋಕೆ ಬರಲಿಲ್ಲ. ತುಂಬಾ ಬೇಸರ ಆಯಿತು ’ ಎಂಬಿತ್ಯಾದಿ ಕಮೆಂಟ್​ ಹಾಕಿದ್ದರು. ಇದಕ್ಕೆ ರಾಧಿಕಾ ಪಂಡಿತ್ ಉತ್ತರವನ್ನು ನೀಡಿದ್ದಾರೆ.

ಪುನೀತ್​ ರಾಜ್​ಕುಮಾರ್​ ನಿಧನದ ನೋವಿನ ಬಗ್ಗೆ ರಾಧಿಕಾ ಅವರು ನಿನ್ನೆ ಬರೆದುಕೊಂಡಿದ್ದಾರೆ. ‘ನೀವಿಲ್ಲ ಎಂಬುದನ್ನು ಒಪ್ಪಿಕೊಳ್ಳೋಕೆ ಆಗುತ್ತಿಲ್ಲ. ನಿಮ್ಮ ಜಾಗವನ್ನು ಕನ್ನಡ ಚಿತ್ರರಂಗದಲ್ಲಿ ತುಂಬಲು ಬೇರೆ ಯಾರಿಂದಲು ಸಾಧ್ಯವಿಲ್ಲ. ನೀವಿಲ್ಲದೆ ಚಿತ್ರರಂಗ ಎಂದಿನಂತೆ ಇರುವುದಿಲ್ಲ. ನಿಮ್ಮ ಜತೆ ಕೆಲಸ ಮಾಡಲು ಸಿಕ್ಕಿದ್ದು ನಮ್ಮ ಅದೃಷ್ಟ. ನಮಗೆಲ್ಲ ನೆನಪಿನಲ್ಲಿ ನೀವೀಗ ಎಂದಿಗಿಂತ ಸನಿಹ’ ಎಂದು ಬರೆದುಕೊಂಡಿದ್ದರು.

ಇದಕ್ಕೆ, ಸಾಕಷ್ಟು ಜನರು ಬೇಸರ ಹೊರ ಹಾಕಿದ್ದರು. ಅವರ ಬಗ್ಗೆ ಪೋಸ್ಟ್​ ಮಾಡೋಕೆ ಇಷ್ಟು ದಿನ ಬೇಕಾಯಿತೇ ಎಂದು ಪ್ರಶ್ನೆ ಕೇಳಿದ್ದರು. ಅಂತಿಮ ದರ್ಶನ ಏಕೆ ಪಡೆದಿಲ್ಲ ಎಂದು ಪ್ರಶ್ನೆ ಮಾಡಿದ್ದರು. ಇದಕ್ಕೆ ರಾಧಿಕಾ ಉತ್ತರಿಸಿದ್ದಾರೆ. ‘ಜೀವನದಲ್ಲಿ ಒಬ್ಬರ ಮೇಲೆ ಕೋಪ ಇದ್ದರೂ ಪ್ರೀತಿ ಹಂಚಿ, ತಾಳ್ಮೆಯಿರಲಿ. ನಾನು ಅಂತಿಮ ದರ್ಶನ ಪಡೆದೆನೋ, ಇಲ್ಲವೋ ಎಂಬುದು ಅವರ ಕುಟುಂಬಕ್ಕೆ ತಿಳಿದಿದೆ, ನಮಗೆ ತಿಳಿದಿದೆ. ಕ್ಯಾಮೆರಾ ಮುಂದೆ ಬಂದು ಮಾತನಾಡುವ ಶಕ್ತಿ ನನಗಿರಲಿಲ್ಲ. ಕ್ಯಾಮೆರಾ ಮುಂದೆ ಬಂದು ಮಾತನಾಡದೆ ಇರುವುದು ದೊಡ್ಡ ತಪ್ಪು ಎಂದು ನಾನು ಭಾವಿಸಲಿರಲಿಲ್ಲ. ಅವರ ಮೇಲಿರುವ ಪ್ರೀತಿಗೆ ನೀವು ಹೀಗೆ ಮಾತನಾಡುತ್ತಿರುವುದು ಸಹಜ. ಅಪ್ಪು ಸರ್ ಅಗಲಿಕೆ ಅವರ ಕುಟುಂಬಕ್ಕೆ ಮತ್ತು ಅಭಿಮಾನಿಗಳಾದ ನಿಮಗೆ ಎಷ್ಟು ನೋವು ನೀಡುತ್ತಿದೆಯೋ, ಅಷ್ಟೇ ನೋವು ನನಗೂ ನಮ್ಮ ಕುಟುಂಬಕ್ಕೂ ಆಗಿದೆ. ನಮ್ಮೆಲ್ಲರ ನೆಚ್ಚಿನ ಅಪ್ಪು ಸರ್ ಅಗಲಿಕೆ ಎಂದೆಂದಿಗೂ ನಮ್ನನ್ನು ಕಾಡುತ್ತಲೇ ಇರುತ್ತದೆ’ ಎಂದು ಅವರು ಬರೆದುಕೊಂಡಿದ್ದಾರೆ.

Comments are closed.