ಕರ್ನಾಟಕ

ಬೆತ್ತಲಾಗಿ, ಎಣ್ಣೆ ಹಚ್ಚಿಕೊಂಡು ಮನೆಯೊಳಕ್ಕೆ ನುಗ್ಗಿ ಕಳ್ಳತನ ಮಾಡುವ ಗಂಡನಿಗೆ ಹೊರನಿಂತ ಮಡದಿಯೇ ಕಾವಲು..!

Pinterest LinkedIn Tumblr

ಬಾಗಲಕೋಟೆ: ಮಹಾರಾಷ್ಟ್ರ ಹಾಗೂ ಕರ್ನಾಟಕದ ಬಹುತೇಕ ಭಾಗಗಳಲ್ಲಿ ಕಳ್ಳತನ ಮಾಡುತ್ತಿದ್ದ ಅಂತರಾಜ್ಯ ಕಳ್ಳ ದಂಪತಿಯನ್ನು ಬಾದಾಮಿ ಪೊಲೀಸರು ಬಂಧಿಸಿದ್ದಾರೆ.

ಕೆಲ ದಿನಗಳ ಹಿಂದೆ, ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕೆಲ ಭಾಗಗಳಲ್ಲಿ ಭಾರೀ ಪ್ರಮಾಣದ ಕಳ್ಳತನವಾದ ಪ್ರಕರಣಗಳು ನಡೆದಿದ್ದವು. ಕಳ್ಳತನ ಮಾಡಿದ ಆರೋಪಿಗಳ ಪತ್ತೆಗಾಗಿ ಬಾದಾಮಿ ಪೊಲೀಸರು ಜಾಲ ಬೀಸಿದ್ದರು. ದಂಪತಿಯಿಂದ ಕಳ್ಳತನ ನಡೆದಿದೆ ಎಂಬ ಮಾಹಿತಿ ಆಧಾರದ ಮೇಲೆ, ಬಾದಾಮಿ ಪೊಲೀಸರು ಅವರ ಮೇಲೆ ಕಳೆದ ಗುರುವಾರವೇ ಬಂಧಿಸಲು ಬಲೆ ಬೀಸಿದ್ದರು. ಇಂದು ಬಾದಾಮಿ ಪೊಲೀಸ್ ಸಿಪಿಐ ರಮೇಶ್ ಹಾನಾಪೂರ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ಕಳ್ಳತನ ಮಾಡುತ್ತಿದ್ದ ದಂಪತಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಗಳಾದ ಸುರೇಶ್ ಶಿವಪೂರೆ ಮತ್ತು ಬಸಮ್ಮ ಸುರೇಶ್ ಶಿವಪೂರೆ ದಂಪತಿಯಿಂದ 10,50,000 ಮೌಲ್ಯದ ಚಿನ್ನಾಭರಣ, 15,000 ಮೌಲ್ಯದ ಬೆಳ್ಳಿ ಆಭರಣ, ಕಳ್ಳತನಕ್ಕೆ ಬಳಸಿದ ಮೋಟಾರ್ ಸೈಕಲನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿಗಳು ಮಹಾರಾಷ್ಟ್ರ ಹಾಗೂ ಕರ್ನಾಟಕದ ಬಹುತೇಕ ಭಾಗದಲ್ಲಿ ಕಳ್ಳತನ ಮಾಡಿದ್ದಾರೆ. ಈ ಆಧಾರದ ಮೇಲೆ ದಂಪತಿ ಮೇಲೆ ಒಟ್ಟು 46 ಪ್ರಕರಣಗಳು ದಾಖಲಾಗಿವೆ.

ಬೆತ್ತಲಾಗಿ ಫೀಲ್ಡಿಗೆ ಇಳಿಯುತ್ತಿದ್ದ….
ಸುರೇಶ್ ಕಳ್ಳತನ ಮಾಡುತ್ತಿದ್ದುದು ಬಹಳ ವಿಚಿತ್ರವಾಗಿದೆ. ಬಟ್ಟೆ ಬಿಚ್ಚಿ ಬೆತ್ತಲಾಗಿ ಕಳ್ಳತನ ಮಾಡುತ್ತಿದ್ದ. ಮನೆಯಲ್ಲಿ ಯಾರೂ ಇಲ್ಲದ್ದನ್ನ ನೋಡಿ, ಬೆತ್ತಲಾಗಿ ದೇಹಕ್ಕೆ ಎಣ್ಣೆ ಬಳಿದುಕೊಂಡು ಕೀಲಿ ಹಾಕಿದ ಮನೆಗೆ ಒಂಟಿಯಾಗಿ ನುಗ್ಗಿ ಕಳ್ಳತನ ಮಾಡುತ್ತಿದ್ದನು. ಹೊರ ನಿಲ್ಲುವ ಬಸಮ್ಮ ಸುರೇಶ್ ಕಳ್ಳತನಕ್ಕೆ ಸಹಾಯ ಮಾಡುತ್ತಿದ್ದಳು. ಇವರು ಹಿಂಬಾಗಿಲಿನಿಂದ ಕಳ್ಳತನ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಬಾದಾಮಿ ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್ ಜಗಲಾಸರ್, ಡಿಎಸ್ಪಿ ಚಂದ್ರಕಾಂತ್ ನಂದರೆಡ್ಡಿ ಅವರು ಮಾರ್ಗದರ್ಶನ ಮಾಡಿದ್ದರು.

 

Comments are closed.