ಕರ್ನಾಟಕ

ಗ್ರಾ.ಪಂ. ಸದಸ್ಯರ ವೇತನ ಪರಿಷ್ಕರಣೆ ಎರಡು ವಾರಗಳಲ್ಲಿ ತೀರ್ಮಾನ: ಸಚಿವ ಕೋಟ ಶ್ರೀನಿವಾಸ ಪೂಜಾರಿ

Pinterest LinkedIn Tumblr

ಬೆಂಗಳೂರು: ಗ್ರಾಮ ಪಂಚಾಯತ್‌ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಸದಸ್ಯರ ವೇತನ ಪರಿಷ್ಕರಣೆಗೆ ಸಂಬಂಧಿಸಿ ಎರಡು ವಾರಗಳಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಭಾ ನಾಯಕ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಬುಧವಾರ ನಿಯಮ 330ರ ಅಡಿ ಕಾಂಗ್ರೆಸ್‌ ಸದಸ್ಯ ಸುನೀಲ್‌ ಗೌಡ ಪಾಟೀಲ್‌ ಅವರು ಪ್ರಸ್ತಾಪಿಸಿದ ವಿಷಯಕ್ಕೆ ಪ್ರತಿಕ್ರಿಯಿಸಿದ ಅವರು, ಪ್ರಸ್ತುತ ಗ್ರಾಮ ಪಂಚಾಯತ್‌ ಅಧ್ಯಕ್ಷರಿಗೆ 3 ಸಾವಿರ, ಉಪಾಧ್ಯಕ್ಷರಿಗೆ 2 ಸಾವಿರ ಮತ್ತು ಸದಸ್ಯರಿಗೆ ಒಂದು ಸಾವಿರ ರೂ. ಮಾಸಿಕ ಗೌರವಧನ ನೀಡಲಾಗುತ್ತಿದೆ. ಇದನ್ನು ಕನಿಷ್ಠ ದುಪ್ಪಟ್ಟುಗೊಳಿಸುವ ಪ್ರಸ್ತಾವ ಆರ್ಥಿಕ ಇಲಾಖೆ ಪರಿಶೀಲನ ಹಂತದಲ್ಲಿದ್ದು, ಅದು ಶೀಘ್ರ ಜಾರಿಗೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮುಂದಿನ ಎರಡು ವಾರಗಳಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೆ.ಎಸ್‌. ಈಶ್ವರಪ್ಪ ಅವರ ಅಧ್ಯಕ್ಷತೆಯಲ್ಲಿ ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾದ 25 ಮಂದಿ ಪರಿಷತ್ತಿನ ಸದಸ್ಯರ ಸಭೆ ಕರೆಯಲಾಗುವುದು. ಅಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು. ಜತೆಗೆ ಜಿಲ್ಲಾ ಅಥವಾ ತಾಲೂಕು ವ್ಯಾಪ್ತಿಯಲ್ಲಾದರೂ ಉಚಿತ ಪ್ರಯಾಣಕ್ಕೆ ಗ್ರಾ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರಿಗೆ ಬಸ್‌ ಪಾಸ್‌ ವ್ಯವಸ್ಥೆ ಕಲ್ಪಿಸುವ ಸಂಬಂಧ ಸಾರಿಗೆ ನಿಗಮಗಳೊಂದಿಗೆ ಚರ್ಚಿಸಲಾಗುವುದು ಎಂದವರು ತಿಳಿಸಿದರು.

Comments are closed.