ಕರ್ನಾಟಕ

ಬಲೂನ್‌ ಮಾರಾಟ ಸೋಗಿನಲ್ಲಿ ಮನೆಗಳಿಗೆ ಕನ್ನ ಹಾಕುತ್ತಿದ್ದ ಬಗಾರಿಯಾ ಗ್ಯಾಂಗ್‌ನ ಮೂವರ ಬಂಧನ

Pinterest LinkedIn Tumblr

ಬೆಂಗಳೂರು: ರಸ್ತೆಗಳಲ್ಲಿ, ಬೀದಿ ಬದಿಗಳಲ್ಲಿ ಬಲೂನ್‌ ಮಾರಾಟ ಮಾಡುತ್ತ ಬೀಗ ಹಾಕಿದ ಮನೆಗಳನ್ನು ಗುರುತಿಸಿ ರಾತ್ರಿ ವೇಳೆ ಆ ಮನೆಗಳ ನುಗ್ಗಿ ಕನ್ನ ಹಾಕುತ್ತಿದ್ದ ಬಗಾರಿಯಾ ಗ್ಯಾಂಗ್‌ನ ಮೂವರನ್ನು ಅಮೃತಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ರಾಜಸ್ಥಾನ ಮೂಲದ ಬಗಾರಿಯಾ ಗ್ಯಾಂಗ್‌ನ ಮುಖೇಶ್‌ (25), ಧರ್ಮ (26), ಲಕ್ಷ್ಮಣ್ (25) ಬಂಧಿತರು. ಆರೋಪಿಗಳಿಂದ 200 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.

ರಾಜಸ್ಥಾನದಿಂದ ರೈಲಿನಲ್ಲಿ ಬೆಂಗಳೂರಿಗೆ ಬಂದು ಬಲೂನು ಖರೀದಿಸುವ ಈ ಗ್ಯಾಂಗ್ ಸದಸ್ಯರು ಹಗಲಿನಲ್ಲಿ ನಗರದಲ್ಲೆಲ್ಲಾ ಸುತ್ತಾಡಿ ಬಲೂನ್‌ ಮಾರಾಟ ಮಾಡುತ್ತಿದ್ದರು. ಆ ವೇಳೆ ಬೀಗ ಹಾಕಿರುವ ಐಷಾರಾಮಿ ಮನೆಗಳನ್ನು ಗುರುತಿಸುತ್ತಿದ್ದರು. ಆ ಮನೆಗಳಿಗೆ ಹೋಗಿ ಬೆಲ್‌ ಮಾಡುತ್ತಿದ್ದರು. ಯಾರೂ ಮನೆಯಿಂದ ಹೊರಗೆ ಬಾರದಿದ್ದರೆ, ಒಂದೆರಡು ದಿನ ಆ ಮನೆಯ ಬಳಿ ಸುತ್ತಾಡಿ ಯಾರು ಇಲ್ಲದಿರುವುದನ್ನು ಖಚಿತ ಪಡಿಸಿಕೊಳ್ಳುತ್ತಿದ್ದರು. ರಾತ್ರಿ ಆ ಮನೆಗೆ ಕನ್ನ ಹಾಕಿ ಲಾಕರ್‌ ಒಡೆದು ಕೆಲವೇ ಕ್ಷಣಗಳಲ್ಲಿ ಚಿನ್ನಾಭರಣ ದೋಚುತ್ತಿದ್ದರು. ಕದ್ದ ಚಿನ್ನಾಭರಣವನ್ನು ರಾಜಸ್ಥಾನದ ಜುವೆಲ್ಲರಿ ಅಂಗಡಿಗೆ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದರು.

ಆ.10ರಂದು ಆರೋಪಿಗಳು ಅಮೃತಹಳ್ಳಿ ಠಾಣಾ ವ್ಯಾಪ್ತಿಯ ಮನೆಯ ಗ್ರಿಲ್‌ಗೇಟ್‌ ಹಾಗೂ ಮುಂಬಾಗಿಲು ಒಡೆದು ಒಳ ಪ್ರವೇಶಿಸಿ 200 ಗ್ರಾಂ ಚಿನ್ನಾಭರಣ ಕದ್ದೊಯ್ದಿದ್ದರು. ಕೆಲ ದಿನಗಳ ಬಳಿಕ ಮಾಲೀಕರು ಮನೆಗೆ ಬಂದು ನೋಡಿದಾಗ ಕೃತ್ಯ ಬೆಳಕಿಗೆ ಬಂದಿತ್ತು. ಈ ಬಗ್ಗೆ ಅಮೃತಹಳ್ಳಿ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡು ತನಿಖೆ ನಡೆಸಿದ್ದರು.

ರಾಜಸ್ಥಾನದ ಛಾಪನೇರಿ ಎಂಬ ಪ್ರದೇಶದ ಮೊಬೈಲ್‌ ನಂಬರ್‌ ವೊಂದರ ಸುಳಿವು ಸಿಕ್ಕಿತ್ತು. ಈ ಸುಳಿವು ಆಧರಿಸಿ ರಾಜಸ್ಥಾನದ ಅಜ್ಮೀರ್ ಎಂಬಲ್ಲಿಗೆ ತೆರಳಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Comments are closed.