ಕರ್ನಾಟಕ

ರಾಜೀನಾಮೆ ನೀಡಿದ ಸುದ್ದಿ ಕೇಳಿ ಆತ್ಮಹತ್ಯೆ; ಅಭಿಮಾನಿ ಕುಟುಂಬಕ್ಕೆ ಆರ್ಥಿಕ ನೆರವು ನೀಡಿದ ಯಡಿಯೂರಪ್ಪ

Pinterest LinkedIn Tumblr

ಚಾಮರಾಜನಗರ: ಬಿ ಎಸ್ ಯಡಿಯೂರಪ್ಪನವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಸುದ್ದಿ ಕೇಳಿ ನೊಂದು ಆತ್ಮಹತ್ಯೆ ಮಾಡಿಕೊಂಡ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯ ಬೊಮ್ಮಲಾಪುರದ ಯುವಕ ಅಭಿಮಾನಿ ರವಿ ನಿವಾಸಕ್ಕೆ ಶುಕ್ರವಾರ ಭೇಟಿ ನೀಡಿದ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಸಾಂತ್ವನ ಹೇಳಿದ್ದಾರೆ.

ಕುಟುಂಬಕ್ಕೆ ಆರ್ಥಿಕ ನೆರವು: ಆತ್ಮಹತ್ಯೆ ಮಾಡಿಕೊಂಡ ರವಿಯವರ ತಾಯಿಯನ್ನು ಭೇಟಿ ಮಾಡಿ ಅವರ ಕಾಲಿಗೆರಗಿ ಸಾಂತ್ವನ ಹೇಳಿದ ಯಡಿಯೂರಪ್ಪನವರು ಸ್ಥಳದಲ್ಲಿ 5 ಲಕ್ಷ ರೂಪಾಯಿ ಪರಿಹಾರ ಪ್ರಕಟಿಸಿ ಇನ್ನೂ 5 ಲಕ್ಷ ರೂಪಾಯಿ ನೆರವು ನೀಡುವುದಾಗಿ ಘೋಷಿಸಿದ್ದಾರೆ. ಈ ವೇಳೆ ಮೃತ ರವಿಯ ತಾಯಿ ಯಡಿಯೂರಪ್ಪನವರ ಕಾಲಿಗೆ ನಮಸ್ಕರಿಸಿದರು.

ನನ್ನ ಅಭಿಮಾನಿಯಾಗಿದ್ದ ರವಿ ನಾನು ರಾಜೀನಾಮೆ ನೀಡಿದ್ದೇನೆಂದು ಆತ್ಮಹತ್ಯೆ ಮಾಡಿಕೊಂಡಿರುವುದು ಕೇಳಿ ಮನಸ್ಸಿಗೆ ತುಂಬಾ ಬೇಸರವಾಗಿದೆ. ಈಗ ನಾವು ರವಿ ಕುಟುಂಬಕ್ಕೆ ಆಸರೆಯಾಗಬೇಕು. ಮೃತ ರವಿ ಕುಟುಂಬಕ್ಕೆ 5 ಲಕ್ಷ ರೂಪಾಯಿ ನೀಡಿದ್ದೇನೆ. ಇನ್ನೂ 5 ಲಕ್ಷ ರೂಪಾಯಿ ಬ್ಯಾಂಕ್ ಖಾತೆಗೆ ಹಾಕುತ್ತೇವೆ ಎಂದರು.

ಅದಕ್ಕೂ ಮುನ್ನ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಯಡಿಯೂರಪ್ಪ, ಪಕ್ಷವನ್ನು ಬಲಪಡಿಸಲು ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡುತ್ತೇನೆ. ಮುಂದಿನ ಚುನಾವಣೆಯಲ್ಲಿ 130ರಿಂದ 135 ಸೀಟುಗಳನ್ನು ಗೆಲ್ಲಿಸುವುದು ನನ್ನ ಉದ್ದೇಶವಾಗಿದೆ. ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕೆಂದು. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಬಿಜೆಪಿ ಅಧ್ಯಕ್ಷ ನಡ್ಡಾರಿಗೆ ಇದು ನಾನು ನೀಡಿರುವ ಭರವಸೆಯಾಗಿದೆ ಎಂದರು.

ಮುಂದಿನ ಗಣೇಶ ಚತುರ್ಥಿ ಬಳಿಕ ಪ್ರತಿ ವಾರ ಒಂದು ಜಿಲ್ಲೆಗೆ ಹೋಗಿ ಕಾರ್ಯಕರ್ತರ ಸಭೆಗಳನ್ನು ನಡೆಸಿ ಸಂಘಟನೆ ಬಲಪಡಿಸುವ ತೀರ್ಮಾನ ಮಾಡಿದ್ದೇನೆ. ನನಗೆ ಇಂದು ಅಧಿಕಾರ ಇಲ್ಲದಿದ್ದರೂ ಜನ ಪ್ರೀತಿ,ವಿಶ್ವಾಸ ತೋರಿಸುತ್ತಿದ್ದಾರೆ ಎಂದರು. ಅಧಿಕಾರ ಶಾಶ್ವತವಲ್ಲ, ನನ್ನ ಕಣ್ಣ ಮುಂದೆಯೇ ಯೋಗ್ಯ ವ್ಯಕ್ತಿಯನ್ನು ಪಕ್ಷದಲ್ಲಿ ಪ್ರಬಲ ನಾಯಕನಾಗಿ ಬೆಳೆಸಬೇಕೆಂದು ಸಂಕಲ್ಪ ಮಾಡಿದ್ದೇನೆ. ಬಸವರಾಜ ಬೊಮ್ಮಾಯಿಯವರಂತಹ ಯೋಗ್ಯ ವ್ಯಕ್ತಿ ಈ ನಾಡಿನ ಮುಖ್ಯಮಂತ್ರಿಯಾಗಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಿದ್ದು ಸಂತಸದ ವಿಚಾರ. ಅವರ ನೇತೃತ್ವದಲ್ಲಿ ಒಳ್ಳೆಯ ಕೆಲಸ ಆಗುತ್ತದೆಂಬ ವಿಶ್ವಾಸ ನನಗಿದೆ ಎಂದರು.

ಸಿದ್ದರಾಮಯ್ಯನವರು ಗಾಂಧೀಜಿ ಮಗ ಕುಡುಕನಾದಂತೆ ಎಸ್ ಆರ್ ಬೊಮ್ಮಾಯಿಯವರ ಮಗ ಬಸವರಾಜ ಬೊಮ್ಮಾಯಿಯವರು ಉತ್ತಮ ಆಡಳಿತ ನೀಡುತ್ತಾರೆ ಎಂದು ಏನು ಭರವಸೆ ಎಂದು ಕೇಳಿದ್ದಕ್ಕೆ ಪ್ರತಿಕ್ರಿಯಿಸಿದ ಬಿ ಎಸ್ ಯಡಿಯೂರಪ್ಪ, ಸಿದ್ದರಾಮಯ್ಯನವರು ಇತ್ತೀಚೆಗೆ ಸಂಯಮ ಕಳೆದುಕೊಂಡು ಹಗುರವಾಗಿ ಮಾತನಾಡುವುದನ್ನು ಅಭ್ಯಾಸ ಮಾಡುತ್ತಿದ್ದಾರೆ. ವಿರೋಧ ಪಕ್ಷದ ನಾಯಕರಾಗಿ ಇಂತಹ ಹೇಳಿಕೆಗಳನ್ನು ನೀಡುವುದು ಶೋಭೆ ತರುವಂಥದಲ್ಲ ಎಂದರು.

ಬೊಮ್ಮಾಯಿಯವರಿಗೆ ಪೂರ್ಣ ಸ್ವಾತಂತ್ರ್ಯವಿದೆ: ಸಿಎಂ ಬೊಮ್ಮಾಯಿಯವರು ದೆಹಲಿಯಿಂದ ಬಂದ ನಂತರ ಸಟಿವ ಸಂಪುಟ ಸದಸ್ಯರ ರಚನೆ ಬಗ್ಗೆ ಚರ್ಚಿಸಿ ದೆಹಲಿ ವರಿಷ್ಠರ ತೀರ್ಮಾನ ಮತ್ತು ಒಪ್ಪಿಗೆ ಪಡೆದು ಶೀಘ್ರವೇ ರಚನೆ ಮಾಡುತ್ತಾರೆ, ವಲಸಿಗ ಶಾಸಕರನ್ನು ಸಂಪುಟಕ್ಕೆ ಸೇರ್ಪಡೆ ಮಾಡುವ ಕುರಿತು ಸಹ ಅವರೇ ತೀರ್ಮಾನ ತೆಗೆದುಕೊಳ್ಳುತ್ತಾರೆ. ಸಚಿವ ಸಂಪುಟ ರಚನೆಯಲ್ಲಿ ನಾನು ಮಧ್ಯೆ ಪ್ರವೇಶಿಸುವುದಿಲ್ಲ. ಉತ್ತಮ ಆಡಳಿತ ನಿರ್ವಹಿಸುವ ಬಗ್ಗೆ ಸಲಹೆ ಕೊಡುತ್ತೇನಷ್ಟೆ ಹೊರತು ಆಡಳಿತದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದರು.

Comments are closed.