ಕರ್ನಾಟಕ

ಯಡಿಯೂರಪ್ಪನವರ ವಿರುದ್ಧ ಕಾರ್ಯತಂತ್ರ ಹೆಣೆಯುವ ಕೆಲಸ ನಾವು ಎಂದಿಗೂ ಮಾಡುವುದಿಲ್ಲ: ಸಿ ಪಿ ಯೋಗೇಶ್ವರ್

Pinterest LinkedIn Tumblr

ಅಂಜನಾದ್ರಿ ಬೆಟ್ಟ(ಕೊಪ್ಪಳ): ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ ವಿರುದ್ಧ ಕಾರ್ಯತಂತ್ರ ಹೆಣೆಯುವ ಕೆಲಸ ನಾವು ಎಂದಿಗೂ ಮಾಡುವುದಿಲ್ಲ ಎಂದು ಪ್ರವಾಸೋದ್ಯಮ ಇಲಾಖೆ ಸಚಿವ ಸಿ ಪಿ ಯೋಗೇಶ್ವರ್ ಹೇಳಿದ್ದಾರೆ.

ಅವರು ಇಂದು ಬೆಳಗ್ಗೆ ಕುಟುಂಬ ಸಮೇತ ಪ್ರಸಿದ್ಧ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಆನೆಗೊಂದಿಯ ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.

ಉತ್ತರ ಕರ್ನಾಟಕ ಪ್ರವಾಸದಲ್ಲಿರುವ ಸಿ ಪಿ ಯೋಗೇಶ್ವರ್ ಇಂದು ಬೆಳಗ್ಗೆ 8 ಗಂಟೆ ಸುಮಾರಿಗೆ ಕುಟುಂಬ ಸಮೇತ ಅಂಜನಾದ್ರಿ ಬೆಟ್ಟ ಹತ್ತಿ ಆಂಜನೇಯನಿಗೆ ವಿಶೇಷ ಪೂಜೆ ಸಲ್ಲಿಸಿದರು.

ನಂತರ ಹೊರಬಂದ ಅವರನ್ನು ಸುದ್ದಿಗಾರರು ಮಾತನಾಡಿಸಿ ನಾಯಕತ್ವ ಬದಲಾವಣೆ ಬಗ್ಗೆ ಕೇಳಿದಾಗ, ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಪದಚ್ಯುತಿಗೊಳಿಸುವ ಕೆಲಸವನ್ನು ನಾವೆಂದಿಗೂ ಮಾಡಿಲ್ಲ, ಮಾಡುವುದೂ ಇಲ್ಲ. ನಾನು ದೆಹಲಿಗೆ ಹೋದಾಗಲೆಲ್ಲಾ ಈ ರೀತಿ ಸುದ್ದಿಯಾಗುತ್ತದೆ, ನಾವು ನಮ್ಮ ಕೆಲಸಕ್ಕೆ, ನಮ್ಮ ಆಂತರಿಕ ಸಮಸ್ಯೆಗಳನ್ನು ವರಿಷ್ಠರ ಬಳಿ ಹೇಳಿಕೊಳ್ಳಲು ಹೋಗುತ್ತೇವೆ, ಆದರೆ ಅದು ಬೇರೆ ರೀತಿಯಲ್ಲಿಯೇ ಸುದ್ದಿಯಾಗುತ್ತದೆ, ನನ್ನನ್ನು ಸುಮ್ಮನೆ ವಿಲನ್ ಮಾಡಬೇಡಿ ಎಂದರು.

ಯಡಿಯೂರಪ್ಪನವರು ನಮ್ಮ ನಾಯಕರು, ಅವರನ್ನು ಮುಟ್ಟಿದರೆ ಸುಟ್ಟುಹೋಗುತ್ತೇವೆ ಎಂದು ಸಿ.ಪಿ. ಯೋಗೇಶ್ವರ್ ಹೇಳಿದರು.

ಕೊರೋನಾ ನಿರ್ಬಂಧ ಉಲ್ಲಂಘನೆ ಆರೋಪ: ಇನ್ನು ರಾಜ್ಯದಲ್ಲಿ ಕೊರೋನಾ ಹಿನ್ನೆಲೆಯಲ್ಲಿ ದೇವಸ್ಥಾನಗಳಿಗೆ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧವಿದ್ದರೂ ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟಕ್ಕೆ ಸಚಿವ ಯೋಗೇಶ್ವರ್ ತಮ್ಮ ಕುಟುಂಬಸ್ಥರು ಮತ್ತು ಆಪ್ತರೊಂದಿಗೆ ಭೇಟಿ ನೀಡಿರುವುದು ಕೊರೋನಾ ನಿರ್ಬಂಧ ಉಲ್ಲಂಘನೆಯಾಗಿದೆ ಎಂಬ ಆರೋಪ ಕೇಳಿಬರುತ್ತಿದೆ.

Comments are closed.