ಕರ್ನಾಟಕ

ರಾಜ್ಯದಲ್ಲಿ ಇಂದಿನಿಂದ 45 ವರ್ಷ ವಯಸ್ಸು ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆ; ಒಟ್ಟು 5 ಸಾವಿರ ಕೇಂದ್ರಗಳಲ್ಲಿ ಲಸಿಕೆಗೆ ವ್ಯವಸ್ಥೆ

Pinterest LinkedIn Tumblr

ಬೆಂಗಳೂರು: ರಾಜ್ಯದಲ್ಲಿ ಕೊರೋನಾ 2ನೇ ಅಲೆ ಭೀತಿ ಆರಂಭವಾಗಿರುವಾಗಲೇ, ಕೋವಿಡ್ ವಿರುದ್ಧದ ಹೋರಾಟದಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲು ಇಡಲು ರಾಜ್ಯ ಸಜ್ಜಾಗಿದೆ. ಏಪ್ರಿಲ್ 1 ರಿಂದ 45 ವರ್ಷ ವಯಸ್ಸು ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆ ನೀಡಲಿದ್ದು, ಒಟ್ಟು 5 ಸಾವಿರ ಕೇಂದ್ರಗಳಲ್ಲಿ ಲಸಿಕೆಗೆ ವ್ಯವಸ್ಥೆ ಮಾಡಲಾಗಿದೆ.

ಈ ಕುರಿತು ರಾಜ್ಯ ಆರೋಗ್ಯ ಇಲಾಖೆ ಪ್ರಕಟಣೆ ಬಿಡುಗಡೆ ಮಾಡಿದ್ದು, ಏಪ್ರಿಲ್ 1 ರಿಂದ 45 ವರ್ಷ ವಯಸ್ಸು ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆ ನೀಡಲಾಗುತ್ತಿದ್ದು, 5 ಸಾವಿರ ಕೇಂದ್ರಗಳಲ್ಲಿ ಲಸಿಕೆ ನೀಡಲಾಗುತ್ತದೆ. ಒಟ್ಟು 1.66 ಕೋಟಿ ಜನರಿಗೆ ಲಸಿಕೆ ನೀಡುವ ಗುರಿಯನ್ನು ಹೊಂದಲಾಗಿದೆ ಎಂದು ತಿಳಿಸಿದೆ.

45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಸಚಿವ ಸುಧಾಕರ್ ಅವರು, ಈಗಾಗಲೇ 3 ಸಾವಿರ ಕೇಂದ್ರಗಳಲ್ಲಿ ಲಸಿಕೆ ನೀಡಲಾಗುತ್ತಿದೆ. ಹೊಸದಾಗಿ 2 ಸಾವಿರ ಕೇಂದ್ರಗಳಲ್ಲಿ ಲಸಿಕೆ ನೀಡಲಾಗುವುದು. ಇದು ಸೇರಿ ಒಟ್ಟು 5 ಸಾವಿರ ಕೇಂದ್ರಗಳಲ್ಲಿ ಲಸಿಕೆ ಸಿಗಲಿದೆ. ಒಂದು ಕೇಂದ್ರದಲ್ಲಿ 100 ಮಂದಿ ಲಸಿಕೆ ಪಡೆದರೆ 5 ಲಕ್ಷ ಹಾಗೂ 50 ಮಂದಿ ಲಸಿಕೆ ಪಡೆದರೆ, ಎರಡೂವರೆ ಲಕ್ಷ ಜನರಿಗೆ ಲಸಿಕೆ ನೀಡಬಹುದು. ಜನರು ಸ್ವಯಂಪ್ರೇರಿತರಾಗಿ ಬರಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

ಕೇರಳಕ್ಕೂ ದಕ್ಷಿಣ ಕನ್ನಡಕ್ಕೂ ಅವಿನಾಭಾವ ಸಂಬಂಧ. ಈ ಎರಡು ಪ್ರದೇಶಗಳ ನಡುವೆ ಹೆಚ್ಚು ಜನರು ಸಂಚರಿಸುತ್ತಾರೆ. ಆರ್ ಟಿಪಿಸಿಆರ್ ನೆಗೆಟಿವ್ ವರದಿ ಪರೀಕ್ಷಿಸಬೇಕು ಎಂಬ ಮಾರ್ಗಸೂಚಿ ನಿಯಮವೂ ಇದೆ. ಬಿಗಿಯಾದ ಕ್ರಮ ಕೈಗೊಳ್ಳಲು ಜಿಲ್ಲಾಡಳಿತಕ್ಕೆ ಸೂಚನೆ ನೀಡುತ್ತೇನೆ ಎಂದು ಹೇಳಿದ್ದಾರೆ.

ಜಿಲ್ಲೆಯಲ್ಲಿ ಪ್ರತಿ ದಿನ 40-50 ಸಕ್ರಿಯ ಕೊರೊನಾ ಪ್ರಕರಣಗಳಿವೆ. ಹೆಚ್ಚು ಸೋಂಕಿತ ಪ್ರಕರಣಗಳು ಕಂಡುಬರುತ್ತಿಲ್ಲ. ಆದರೂ ಕೋವಿಡ್ ನಡವಳಿಕೆಯನ್ನು ಕಡ್ಡಾಯವಾಗಿ ಪಾಲಿಸಬೇಕು. ಗಡಿಭಾಗ ಆಗಿರುವುದರಿಂದ ಎಚ್ಚರಕೆಯಿಂದಿರಬೇಕು. ಕೋವಿಡ್ ಲಸಿಕೆ ನೀಡುವ ಪ್ರಮಾಣ ಹೆಚ್ಚಿಸಬೇಕು. ಜಿಲ್ಲೆಯ ಆರೋಗ್ಯ ಸಿಬ್ಬಂದಿ ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್ ಲಸಿಕೆ ಪಡೆದು ಬೇರೆಯವರಿಗೆ ಸ್ಪೂರ್ತಿ ನೀಡಬೇಕು ಎಂದು ತಿಳಿಸಿದ್ದಾರೆ.

ದಕ್ಷಿಣ ಕನ್ನಡದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಉತ್ತಮ ಕೆಲಸ ನಡೆಯುತ್ತಿದೆ. ಇನ್ನಷ್ಟು ಕಾರ್ಯ ಚುರುಕು ಆಗಬೇಕಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಇನ್ನಷ್ಟು ಉತ್ತಮ ರೀತಿಯಲ್ಲಿ ಜನಸಾಮಾನ್ಯರಿಗೆ ಸೇವೆ ದೊರೆಯುವಂತೆ ಮಾಡಬೇಕಿದೆ. ತಜ್ಞವೈದ್ಯರು ತಮ್ಮ ಕ್ಷೇತ್ರದಲ್ಲಿ ಶಸ್ತ್ರಚಿಕಿತ್ಸೆಗಳನ್ನು ಹೆಚ್ಚಿಸಬೇಕೆಂದು ಸೂಚಿಸಲಾಗಿದೆ. ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ಶೇ.40 ರಷ್ಟು ಪ್ರಗತಿಯಾಗಿದೆ. ಇನ್ನೂ ಶೇ. 60ರಷ್ಟು ಗುರಿಯನ್ನು ತಲುಪಬೇಕಿದೆ. ಜಿಲ್ಲೆಯ ಎಲ್ಲ ಪಿಎಚ್ ಸಿಗಳಲ್ಲಿ ಕಾಂಪೌಂಡ್, ಕೈತೋಟವನ್ನು ಗ್ರಾಮ ಪಂಚಾಯಿತಿ ಯೋಜನೆಗಳಡಿ ಕೈಗೊಳ್ಳಬೇಕೆಂದು ಸೂಚನೆ ನೀಡಲಾಗಿದೆ ಎಂದರು.

Comments are closed.