ರಾಷ್ಟ್ರೀಯ

ಭಾರತದಲ್ಲಿ ಕೊರೋನಾ ಏರಿಕೆ; 24 ತಾಸುಗಳ ಅವಧಿಯಲ್ಲಿ ಬರೋಬ್ಬರಿ 72,330 ಮಂದಿಯಲ್ಲಿ ಸೋಂಕು ಪತ್ತೆ; 459 ಮಂದಿ ಸಾವು

Pinterest LinkedIn Tumblr

ನವದೆಹಲಿ: ಭಾರತದಲ್ಲಿ ಕಳೆದ 2 ವಾರಗಳಿಂದ ಸತತ ಕೊರೋನಾ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಲೇ ಇದ್ದು, ಗುರುವಾರ ಬೆಳಿಗ್ಗೆ 8ರವರೆಗಿನ 24 ತಾಸುಗಳ ಅವಧಿಯಲ್ಲಿ ಬರೋಬ್ಬರಿ 72,330 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. 159 ದಿನಗಳ ಬಳಿಕ ಅಂದರೆ ಕಳೆದ 5 ತಿಂಗಳ ಅವಧಿಯಲ್ಲೇ ಒಂದೇ ದಿನ ಇಷ್ಟೊಂದು ಮಂದಿಯಲ್ಲಿ ಸೋಂಕು ಕಾಣಸಿಕೊಳ್ಳುತ್ತಿರುವುದು ಇದೇ ಮೊದಲಾಗಿದೆ.

ಮತ್ತೊಂದೆಡೆ ಕೊರೋನಾ ಸೋಂಕಿಗೆ 459 ಮಂದಿ ಬಲಿಯಾಗಿದ್ದಾರೆ. ಇದರೊಂದಿಗೆ ಈ ವರೆಗೆ ಮಾರಕ ವೈರಾಣು ದಾಳಿಯಿಂದ ಪ್ರಾಣ ಕಳೆದುಕೊಂಡವರ ಸಂಖ್ಯೆ 1,62,927ಕ್ಕೆ ಏರಿಕೆಯಾಗಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 1,22,21,665ಕ್ಕೆ ತಲುಪಿದೆ.

ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 5,84,055ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

1,22,21,665 ಮಂದಿ ಒಟ್ಟಾರೆ ಸೋಂಕಿತರ ಪೈಕಿ ನಿನ್ನೆ ಒಂದೇ ದಿನ 40,382 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಇದರೊಂದಿಗೆ ಚೇತರಿಸಿಕೊಂಡವರ ಸಂಖ್ಯೆ 1,14,74,683ಕ್ಕೆ ತಲುಪಿದೆ.

ಇನ್ನು ಭಾರತದಲ್ಲಿ ಒಂದೇ ದಿನ 11,25,681 ಮಂದಿಯನ್ನು ಕೊರೋನಾ ಪರೀಕ್ಷೆಗೊಳಪಡಿಸಲಾಗಿದ್ದು, ಈವರೆಗೂ ದೇಶದಲ್ಲಿ 24,47,98,621 ಮಂದಿಯನ್ನು ಪರೀಕ್ಷೆಗೊಳಪಡಿಸಲಾಗಿದೆ ಎಂದು ಐಸಿಎಂಆರ್ ಮಾಹಿತಿ ನೀಡಿದೆ.

ಭಾರತದಲ್ಲಿ ಜನವರಿ 16 ರಂದು ಸ್ವದೇಶಿ ನಿರ್ಮಿತ ಕೋವಿಶೀಲ್ಟ್ ಮತ್ತು ಕೋವ್ಯಾಕ್ಸಿನ್ ಕೊರೋನಾ ಲಸಿಕೆಗೆ ಪ್ರಧಾನಿ ಮೋದಿಯವರು ಚಾಲನೆ ನೀಡಿದ್ದು, ತಮ್ಮ ಜೀವವನ್ನೇ ಪಣಕ್ಕಿಟ್ಟು ಕೊರೋನಾ ವಿರುದ್ಧ ಹೋರಾಟ ಮಾಡುತ್ತಿರುವ ಕೊರೋನಾ ವಾರಿಯರ್ಸ್’ಗೆ ಲಸಿಕೆಯ ಮೊದಲ ಆದ್ಯತೆಯನ್ನು ನೀಡಲಾಗಿತ್ತು. ಇದೀಗ ಹಿರಿಯ ನಾಗರೀಕರಿಗೆ ಹಾಗೂ ದೀರ್ಘಕಾಲಿಕ ರೋಗದಿಂದ ಬಳಲುತ್ತಿರುವವರಿಗೂ ಲಸಿಕೆ ನೀಡಲಾಗುತ್ತಿದೆ.

ಇದರಂತೆ ಲಸಿಕೆ ಅಭಿಯಾನ ಆರಂಭವಾಗಿ ಇಲ್ಲಿಯವರೆಗೂ ಒಟ್ಟಾರೆ 6,51,17,896 ಮಂದಿಗೆ ಲಸಿಕೆಯನ್ನು ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

Comments are closed.