ಬೆಂಗಳೂರು: ಸಚಿವ ಸ್ಥಾನ ಹಾಗೂ ಖಾತೆ ಹಂಚಿಕೆ ಬಳಿಕ ಬಿಜೆಪಿ ಪಾಳಯದಲ್ಲಿ ಅಸಮಾಧಾನ ದಿನೇದಿನೇ ಹೆಚ್ಚುತ್ತಿದೆ. ಪಕ್ಷದ ಶಾಸಕರ ಅಸಮಾಧಾನ ಹೋಗಲಾಡಿಸಿ ಅವರ ವಿಶ್ವಾಸ ಗಳಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮಂಗಳವಾರ ರಾತ್ರಿ ತಮ್ಮ ನಿವಾಸದಲ್ಲಿ ದುಂಡು ಮೇಜಿನ ಭೋಜನ ಕೂಟ ಆಯೋಜಿಸಿದ್ದರು. ಈ ಔತಣಕೂಟದಲ್ಲಿ ಕೆಲ ಅಸಮಾಧಾನಿತ ಶಾಸಕರ ಹೊರತುಪಡಿಸಿ ಬಹುತೇಕ ಎಲ್ಲಾ ಶಾಸಕರೂ ಆಗಮಿಸಿ ಭೋಜನ ಸ್ವೀಕರಿಸಿದ್ದಲ್ಲದೆ, ಸಿಎಂ ಜೊತೆ ಚರ್ಚೆ ನಡೆಸಿದರು.

ನಿಗಮ-ಮಂಡಳಿಗಳ ನೇಮಕದ ಬಳಿಕ ಪಕ್ಷದ ಅನೇಕ ಶಾಸಕರು ಅಸಮಾಧಾನಗೊಂಡಿದ್ದರು. ಅಲ್ಲದೆ, ಸಚಿವ ಸ್ಥಾನದ ಆಕಾಂಕ್ಷಿ ಶಾಸಕರೂ ಅಲ್ಲಲ್ಲಿ ಸಭೆ ಸೇರಿ ಚರ್ಚೆ ನಡೆಸುವ ಮೂಲಕ ಅತೃಪ್ತಿ ಹೊರಹಾಕಿದ್ದರು. ಕೆಲವರಂತೂ ಬಹಿರಂಗ ಹೇಳಿಕೆಗಳನ್ನು ನೀಡಿ ಯಡಿಯೂರಪ್ಪ ತಲೆನೋವಿಗೆ ಕಾರಣರಾಗಿದ್ದರು. ಈ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರು ವಿಭಾಗವಾರು ಪಕ್ಷದ ಶಾಸಕರೊಂದಿಗೆ ಸತತ ಸಭೆ ನಡೆಸಿ ಅವರ ಅಹವಾಲು ಆಲಿಸುವ ಪ್ರಯತ್ನ ಮಾಡಿದ್ದರು. ಆದರೆ, ಅದಾವುದೂ ಫಲ ಕೊಡದ ಹಿನ್ನೆಲೆಯಲ್ಲಿ ಈ ಯತ್ನ ಮಾಡಿದ್ದು ಮುಖ್ಯಮಂತ್ರಿಗಳು ಕರೆದಿದ್ದ ಈ ಔತಣಕೂಟದಲ್ಲಿ ಸುಮಾರು 25 ಮಂದಿ ಶಾಸಕರು ಗೈರು ಹಾಜರಾಗಿದ್ದರು ಎನ್ನಲಾಗಿದೆ.

ವಿಧಾನಸಭೆಯ ಸರ್ಕಾರದ ಮುಖ್ಯ ಸಚೇತಕ ವಿ.ಸುನೀಲ್ ಕುಮಾರ್, ಜೆ.ಸಿ ಮಾಧುಸ್ವಾಮೀ, ಆನಂದ ಸಿಂಗ್, ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ಜಿಹೆಚ್ ತಿಪ್ಪಾರೆಡ್ಡಿ, ಅಪ್ಪಚ್ಚು ರಂಜನ್, ಅರವಿಂದ ಬೆಲ್ಲದ್, ಎಸ್.ಎ.ರಾಮದಾಸ್ ಸೇರಿದಂತೆ 25 ಶಾಸಕರು ಗೈರಾಗಿದ್ದರು ಎಂದು ವರದಿಗಳು ತಿಳಿಸಿವೆ. ಈ ನಡುವೆ ಮುಖ್ಯಮಂತ್ರಿಗಳ ವಿರುದ್ಧ ಬಹಿರಂಗವಾಗಿಯೇ ಮಾತನಾಡಿದ್ದ ಹೆಚ್.ವಿಶ್ವನಾಥ್ ಭೋಜನಕೂಟದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ಒಟ್ಟಿನಲ್ಲಿ ಮುಖ್ಯಮಂತ್ರಿಗಳ ಭೋಜನ ಕೂಟ ಶಾಸಕರು ಹಾಗೂ ಸಚಿವ ಆಕಾಂಕ್ಷಿಗಳ ಅಸಮಾಧಾನ ನಿವಾರಣೆಯಲ್ಲಿ ಎಷ್ಟು ಸಹಕಾರಿಯಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.
Comments are closed.