ಬೆಳಗಾವಿ: ಶಿವಸೇನೆ ಮತ್ತೆ ಪುಂಡಾಟಿಕೆ ತೋರುತ್ತಿದ್ದು, ಮಹಾನಗರ ಪಾಲಿಕೆ ಮುಂಭಾಗದಲ್ಲಿ ಸ್ಥಾಪಿಸಿರುವ ಕನ್ನಡ ಧ್ವಜಸ್ತಂಭವನ್ನು ತೆರವುಗೊಳಿಸುವಂತೆ ಉದ್ಧತಟತನ ತೋರುತ್ತಿದೆ. ಧ್ವಜ ತೆರವುಗೊಳಿಸಿ ಇಲ್ಲವೇ ಭಗವಾ ಧ್ವಜ ಸ್ಥಾಪಿಸಲು ಅವಕಾಶ ಕೊಡಿ ಎಂದು ಶಿವಸೇನೆ ಪುಂಡಾಟಿಕೆ ಮೆರೆಯುತ್ತಿದೆ.
ಶಿವಸೇನೆ ಪುಂಡರು ಕೊಲ್ಲಾಪುರದಿಂದ ಆಗಮಿಸುತ್ತಿದ್ದು, ಬೆಳಗಾವಿಯ ಗಡಿ ಭಾಗದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಬೆಳಗಾವಿ ಶಿನ್ನೋಳ್ಳಿ ಚೆಕ್ ಪೋಸ್ಟ್, ಕೊಗನೊಳ್ಳಿ ಚೆಕ್ ಪೋಸ್ಟ್ ನಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಎರಡೂ ಚೆಕ್ ಪೋಸ್ಟ್ ನಲ್ಲಿ ಇನ್ನೂರಕ್ಕೂ ಅಧಿಕ ಪೊಲೀಸರ ನಿಯೋಜನೆ ಮಾಡಲಾಗಿದೆ. ಬೆಳಗಾವಿ ಪೊಲೀಸರು ಬ್ಯಾರಿಕೆಡ್ ಹಾಕಿ, ಪ್ರತಿ ವಾಹನ ತಪಾಸಣೆ ಮಾಡುತ್ತಿದ್ದಾರೆ. ಹೀಗಾಗಿ ಬೆಳಗಾವಿ ಗಡಿ ಪ್ರದೇಶ ಬೂದಿ ಮುಚ್ಚಿದ ಕೆಂಡದಂತಿದೆ.
ಶಿವಸೇನೆ ಪುಂಡರು ಭಗವಾ ಧ್ವಜ ಸಮೇತ ಶಿನ್ನೋಳ್ಳಿ ಚೆಕ್ ಪೋಸ್ಟ್ ಗೆ ಆಗಮಿಸುತ್ತಿದ್ದು, ಭಗವಾ ಧ್ವಜ ಹಿಡಿದುಕೊಂಡು ರಾಜ್ಯದ ಗಡಿ ಪ್ರವೇಶ ಮಾಡುತ್ತಿದ್ದಾರೆ. ನಾಡದ್ರೋಹಿ ಘೋಷಣೆ ಕೂಗುತ್ತಾ ಮಹಾರಾಷ್ಟ್ರ-ಕರ್ನಾಟಕ ಗಡಿ ಮಧ್ಯೆ ಆಗಮಿಸಿದ್ದಾರೆ. ಬೆಳಗಾವಿ, ಕಾರವಾರ, ನಿಪ್ಪಾಣಿ ಮಹಾರಾಷ್ಟ್ರಕ್ಕೆ ಸೇರಬೇಕು ಎಂದು ನಾಡದ್ರೋಹಿ ಘೋಷಣೆ ಕೂಗುತ್ತಿದ್ದಾರೆ. ಬಾಜಾ ಭಜಂತ್ರಿ ಸಮೇತ ಆಗಮಿಸುತ್ತಿದ್ದು, ಬಿಗುವಿನ ವಾತಾವರಣ ನಿರ್ಮಾಣವಾಗಿದೆ.