ಕರ್ನಾಟಕ

ಸಾರ್ವಜನಿಕ ಶೌಚಾಲಯದಲ್ಲಿ ಮಹಿಳಾ ಕಾನ್ಸ್‌ಟೇಬಲ್‌ ಫೋನ್‌ ನಂಬರ್‌ ಬರೆದ ಶಿಕ್ಷಕ..!

Pinterest LinkedIn Tumblr


ಬೆಂಗಳೂರು: ವೈಯಕ್ತಿಕ ಹಾಗೂ ಕ್ಷುಲ್ಲಕ ಕಾರಣಕ್ಕೆ ಚಿಕ್ಕಮಗಳೂರಿನ ಕಡೂರು ಬಸ್‌ ನಿಲ್ದಾಣದ ಸಾರ್ವಜನಿಕ ಶೌಚಗೃಹದ ಗೋಡೆ ಮೇಲೆ ಮಹಿಳಾ ಪೊಲೀಸ್‌ ಸಿಬ್ಬಂದಿಯ ಫೋನ್‌ ನಂಬರ್‌ ಜತೆಗೆ ‘ಸೆಕ್ಸ್‌ ವರ್ಕರ್‌’ ಎಂದು ಬರೆದು ಅವಮಾನಿಸಿದ ಆರೋಪದ ಮೇರೆಗೆ ಶಿಕ್ಷಕನೊಬ್ಬನ ವಿರುದ್ಧ ಯಲಹಂಕ ಉಪನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಡೂರು ನಿವಾಸಿ ಸಿ.ಎಂ. ಸತೀಶ್‌ (33) ಎಂಬಾತನ ವಿರುದ್ಧ ಸೋಮವಾರ ಪ್ರಕರಣ ದಾಖಲಾಗಿದ್ದು, ಈ ಕುರಿತು ನಗರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 32 ವರ್ಷದ ಮಹಿಳಾ ಕಾನ್ಸ್‌ಟೇಬಲ್‌ ದೂರು ನೀಡಿದ್ದಾರೆ. ಇತ್ತೀಚೆಗೆ ರಾತ್ರಿ ಹೊತ್ತಿನಲ್ಲಿ ಮಹಿಳಾ ಪೊಲೀಸ್‌ ಸಿಬ್ಬಂದಿಗೆ ಲೈಂಗಿಕತೆಗೆ ಬೇಡಿಕೆಯಿಟ್ಟು ಕರೆಗಳು ಬರುತ್ತಿದ್ದವು. ಆತಂಕಗೊಂಡ ಅವರು ಈ ಕುರಿತು ವಿಚಾರಿಸಿದಾಗ ಕಡೂರು ಬಸ್‌ ನಿಲ್ದಾಣದ ಪುರುಷರ ಶೌಚಗೃಹದ ಗೋಡೆ ಮೇಲೆ ತಮ್ಮ ನಂಬರ್‌ ಬರೆಯಲಾಗಿದೆ ಎಂಬುದು ತಿಳಿಯಿತು.

ಈ ಹಿನ್ನೆಲೆಯಲ್ಲಿ ಪತಿ ಜತೆಗೆ ಕಡೂರು ಬಸ್‌ ನಿಲ್ದಾಣಕ್ಕೆ ಮಹಿಳಾ ಪೊಲೀಸ್‌ ಸಿಬ್ಬಂದಿ ತೆರಳಿದಾಗ ಫೋನ್‌ ನಂಬರ್‌ ಜತೆಗೆ ಅವರನ್ನು ಸೆಕ್ಸ್‌ ವರ್ಕರ್‌ ಎನ್ನುವಂತೆ ಬರೆದಿರುವುದು ಕಾಣಿಸಿದೆ. ಅಕ್ಷರಗಳನ್ನು ಗಮನಿಸಿದಾಗ ಅವು ಶಿಕ್ಷಕರ ತರಬೇತಿ ಕಾಲೇಜಿನ ಕ್ಲಾಸ್‌ಮೇಟ್‌ ಆಗಿದ್ದ ಸತೀಶ್‌ ಎಂಬಾತನದ್ದು ಎಂಬುದು ತಿಳಿದು ಬಂದಿದೆ. 2017ರಲ್ಲಿ ಕ್ಲಾಸ್‌ಮೇಟ್‌ ಆಗಿದ್ದ ಸತೀಶ್‌, ಕಾನ್ಸ್‌ಟೇಬಲ್‌ ಸದಸ್ಯೆಯಾಗಿರುವ ವಾಟ್ಸ್‌ಆ್ಯಪ್‌ ಗ್ರೂಪ್‌ವೊಂದರ ಸದಸ್ಯನಾಗಿದ್ದ. ಆ ಗ್ರೂಪ್‌ನಲ್ಲಿದ್ದ ಕಾನ್ಸ್‌ಟೇಬಲ್‌ ಉದ್ದೇಶಿಸಿ ಅನಗತ್ಯ ಸಂದೇಶಗಳನ್ನು ಹಾಕುತ್ತಿದ್ದ ಹಾಗೂ ಕರೆ ಮಾಡಿ ಕಿರಿಕಿರಿ ಮಾಡುತ್ತಿದ್ದ.

ಇದರಿಂದ ಬೇಸತ್ತು ಆತನ ಕರೆ, ಸಂದೇಶಗಳನ್ನು ತಿರಸ್ಕರಿಸಿದಾಗ ಗ್ರೂಪ್‌ನಿಂದ ರಿಮೂವ್‌ ಮಾಡಿದ್ದ. ಆದರೆ, ಅವರನ್ನು ಬೇರೆ ಸದಸ್ಯರು ಆ್ಯಡ್‌ ಮಾಡಿದಾಗ ಸತೀಶ್‌, ಮತ್ತೆ ರಿಮೂವ್‌ ಮಾಡಿದ್ದ. ಕೆಲವು ತಿಂಗಳ ಹಿಂದೆ ಇದೇ ವಿಚಾರವಾಗಿ ಕರೆ ಮಾಡಿ ಮಾತನಾಡುವ ವೇಳೆ ಇಬ್ಬರ ನಡುವೆ ಜೋರು ಮಾತಿನ ಚಕಮಕಿ ನಡೆದಿತ್ತು ಎಂದು ತಿಳಿದು ಬಂದಿದೆ. ‘ಸಾರ್ವಜನಿಕ ಶೌಚಗೃಹದ ಗೋಡೆ ಮೇಲೆ ಸತೀಶ್‌ ನನ್ನ ಮೊಬೈಲ್‌ ನಂಬರ್‌ ಬರೆಯುವುದರ ಮೂಲಕ ಮಾನಹಾನಿ ಮಾಡಿದ್ದಾರೆ. ಜತೆಗೆ, ಮಾನಸಿಕ ಕಿರುಕುಳ ನೀಡುತ್ತಿದ್ದಾನೆ’ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಮಹಿಳಾ ಕಾನ್ಸ್‌ಟೇಬಲ್‌ ಆರೋಪಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿ ಬಂಧನಕ್ಕೆ ಬಲೆ ಬೀಸಿದ್ದಾರೆ.

Comments are closed.