ರಾಷ್ಟ್ರೀಯ

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ 96ನೇ ಜನ್ಮ ವಾರ್ಷಿಕೋತ್ಸವ: ಗಣ್ಯರ ಗೌರವ ಸಮರ್ಪಣೆ

Pinterest LinkedIn Tumblr


ನವದೆಹಲಿ: ಮಾಜಿ ಪ್ರಧಾನಿ ಮತ್ತು ಬಿಜೆಪಿ ನಾಯಕ ಅಟಲ್ ಬಿಹಾರಿ ವಾಜಪೇಯಿ ಅವರ 96ನೇ ಜನ್ಮ ವಾರ್ಷಿಕೋತ್ಸವದಂದು ಶುಕ್ರವಾರ ಪ್ರಧಾನಿ ನರೇಂದ್ರ ಮೋದಿಯವರು ಗೌರವ ಸಲ್ಲಿಸಿದರು.

ಈ ಕುರಿತು ಟ್ವೀಟ್ ಮಾಡಿರುವ ಅವರು, ವಾಜಪೇಯಿ ಅವರ ದೂರದೃಷ್ಟಿಯ ನಾಯಕತ್ವದಿಂದ ದೇಶವನ್ನು ಅಭೂತಪೂರ್ವ ಅಭಿವೃದ್ಧಿಯತ್ತ ಕೊಂಡೊಯ್ದಿದ್ದರು. ಬಲಿಷ್ಠ ಮತ್ತು ಸಮೃದ್ಧ ಭಾರತವನ್ನು ನಿರ್ಮಿಸಲು ಅವರು ಮಾಡಿದ ಪ್ರಯತ್ನಗಳು ಶಾಶ್ವತವಾಗಿ ನೆನಪಿನಲ್ಲಿ ಉಳಿಯುತ್ತವೆ ಎಂದು ತಿಳಿಸಿದ್ದಾರೆ.

ದೆಹಲಿಯ ಸದೈವ್ ಅಟಲ್‌ನಲ್ಲಿರುವ ವಾಜಪೇಯಿ ಸಮಾಧಿಗೆ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ ಕೋವಿಂದ್‌, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಪಿಯೂಶ್ ಗೋಯಲ್ ಸೇರಿದಂತೆ ಅನೇಕರು ಪುಷ್ಪನಮನ ಸಲ್ಲಿಸಿದ್ದಾರೆ.

ಅಮಿತ್ ಶಾ ಟ್ವೀಟ್ ಮಾಡಿ, ತಮ್ಮ ವಿಚಾರಧಾರೆ ಮತ್ತು ಸಿದ್ಧಾಂತ ಆಧಾರಿತ ಆಡಳಿತದ ಮೂಲಕ ರಾಷ್ಟ್ರಕ್ಕಾಗಿ ತಮ್ಮ ಜೀವನವನ್ನೇ ಸಮರ್ಪಿಸಿ ಭಾರತದ ವಿಕಾಸ, ಬಡವರ ಕಲ್ಯಾಣ ಮತ್ತು ಉತ್ತಮ ಆಡಳಿತದ ಯುಗವನ್ನು ಪ್ರಾರಂಭಿಸಿದರು. ಅವರ ಜನ್ಮದಿನದಂದು ಅವರಿಗೆ ಗೌರವ ಅರ್ಪಿಸುತ್ತೇನೆ. ಅಟಲ್ ಜಿ ಅವರ ಕರ್ತವ್ಯ ಮತ್ತು ರಾಷ್ಟ್ರೀಯ ಸೇವೆ ಯಾವಾಗಲೂ ನಮಗೆ ಸ್ಫೂರ್ತಿಯಾಗಿರುತ್ತದೆ ಎಂದು ಹೇಳಿದ್ದಾರೆ.

ವಾಜಪೇಯಿ ಜನ್ಮದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಂದು 6 ರಾಜ್ಯಗಳ ರೈತರ ಜತೆ ಸಂವಾದ ನಡೆಸಲಿದ್ದಾರೆ. ಇದೇ ವೇಳೆ ಅವರು ನೂತನ ಕೃಷಿ ಕಾಯ್ದೆಯ ನೀತಿಗಳ ಬಗ್ಗೆ ರೈತರಿಗೆ ವಿವರಣೆ ನೀಡಲಿದ್ದಾರೆ.

Comments are closed.