ಕರ್ನಾಟಕ

ಹೆಂಡತಿಯರು ಬೇಕು ಎಂದು ತೆಂಗಿನ ಮರ ಹತ್ತಿ ಪ್ರತಿಭಟಿಸಿದ!

Pinterest LinkedIn Tumblr


ಬಳ್ಳಾರಿ: ಹೆಂಡತಿಯರು ಬೇಕು ಎಂದು ತೆಂಗಿನ ಮರ ಹತ್ತಿ ಕುಳಿತ ವ್ಯಕ್ತಿಯೊಬ್ಬ ಪ್ರಥಮ ಪತ್ನಿ ನೋಡಿ ಮರದಿಂದ ಇಳಿದು ಬಂದ ಘಟನೆ ಬಳ್ಳಾರಿಯಲ್ಲಿ ನಡೆದಿದೆ.

2ನೇ ಹೆಂಡತಿ ತವರು ಮನೆ ಸೇರಿದ್ದಕ್ಕೆ ಮರವೇರಿ ಪ್ರತಿಭಟನೆ ನಡೆಸುತ್ತಿದ್ದ. ಕೂಡ್ಲಿಗಿ ತಾಲೂಕಿನ ಹೊಸಹಳ್ಳಿ ಸಮೀಪದ ದಾಸೋಬನಹಳ್ಳಿ ಗ್ರಾಮದ ಗೊಲ್ಲರಹಟ್ಟಿ ನಿವಾಸಿ ದೊಡ್ಡಪ್ಪ (40) ಬುಧವಾರ ತೆಂಗಿನ ಮರವೇರಿ ಕುಳಿತಿದ್ದ. ಇಬ್ಬರು ಪತ್ನಿಯರ ಪೈಕಿ ಒಬ್ಬರು ನನ್ನೊಂದಿಗೆ ಜೀವನ ಮಾಡುತ್ತಿಲ್ಲ ಆಕೆ ವಾಪಸ್ ಬರಬೇಕು ಎಂದು ಪ್ರತಿಭಟನೆ ನಡೆಸಿದ.

ದೊಡ್ಡಪ್ಪ ಮೊದಲು ಗ್ರಾಮದ ಸೋದರ ಸೊಸೆಯೊಂದಿಗೆ ಮೊದಲ ಮದುವೆಯಾಗಿದ್ದ. ಮಕ್ಕಳಾಗದ ಕಾರಣ ಅವಳು ತವರು ಮನೆ ಸೇರಿದ್ದಳು. ನಂತರ ಕೂಡ್ಲಿಗಿ ಸಮೀಪದ ಶಿವಪುರ ಗೊಲ್ಲರಹಟ್ಟಿಯ ಮಹಿಳೆಯೊಂದಿಗೆ 2ನೇ ಮದುವೆಯಾದ.

ಈಕೆಗೆ ಮೂರು ಗಂಡು ಮಕ್ಕಳಿದ್ದಾರೆ. ಆದರೆ, ಇಬ್ಬರ ನಡುವಿನ ಮನಸ್ತಾಪದಿಂದ 5 ವರ್ಷಗಳ ಹಿಂದೆ ಮನೆ, ಮಕ್ಕಳನ್ನು ಬಿಟ್ಟು ಅವಳು ತವರು ಮನೆ ಸೇರಿದ್ದಾಳೆ. ಇದಕ್ಕಾಗಿ ಪತ್ನಿಯರು ನನ್ನ ಜೊತೆ ಜೀವನ ಮಾಡಬೇಕು ಎಂದು ಮರವೇರಿ ಕುಳಿತಿದ್ದ.

ಹೆಂಡತಿ ದರ್ಶನ ಕೆಳಗಿಳಿದ ಪತಿ: ಗ್ರಾಮಸ್ಥರು ಪಂಚಾಯಿತಿ ಮಾಡಿಸಲು ಮುಂದೆ ಬಂದಿಲ್ಲ ಮತ್ತು ಮೂವರು ಮಕ್ಕಳ ಪೋಷಣೆಯಿಂದ ಬೇಸತ್ತು ದೊಡ್ಡಪ್ಪ ತೆಂಗಿನಮರವೇರಿ ಕುಳಿತಿದ್ದ. ಕೆಳಗಿಳಿಯುವಂತೆ ಗ್ರಾಮಸ್ಥರು, ಮಕ್ಕಳು ಹೇಳಿದರು ಯಾರ ಮಾತು ಕೇಳಲಿಲ್ಲ.

ಕೊನೆಗೆ ಗ್ರಾಮಸ್ಥರು ಖಾನಾ ಹೊಸಹಳ್ಳಿ ಠಾಣೆಗೆ ಮಾಹಿತಿ ನೀಡಿದರು. ಪೊಲೀಸರ ಮನವರಿಕೆಗೂ ಬಗ್ಗದ ಆತ ಸುಮಾರು 8 ತಾಸು ಮರದಲ್ಲಿಯೇ ಕುಳಿತಿದ್ದ. ಪಿಎಸ್‌ಐ ಎಚ್. ನಾಗರಾಜ ಸ್ಥಳಕ್ಕೆ ಆಗಮಿಸಿದರು. ಆಗ ಮೊದಲ ಹೆಂಡತಿಯನ್ನು ಕರೆಸಿ ಎಂದು ಪಟ್ಟು ಹಿಡಿದ.

ಬೇರೆ ದಾರಿ ಕಾಣದ ಪೊಲೀಸರು ಮೊದಲ ಹೆಂಡತಿಯನ್ನು ಸ್ಥಳಕ್ಕೆ ಕರೆಸಿದರು. ಅಂತಿಮವಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಸಹಕಾರ ದೊಂದಿಗೆ ದೊಡ್ಡಪ್ಪನನ್ನು ಮರದಿಂದ ಕೆಳಗಿಳಿಸಲಾಯಿತು. ಗ್ರಾಮ ಪಂಚಾಯಿತಿ ಚುನಾವಣೆ ನಂತರ ಇಬ್ಬರ ಪತ್ನಿಯರನ್ನು ಕರೆಸಿ ಸಮಸ್ಯೆ ಬಗೆಹರಿಸಲಾಗುತ್ತದೆ ಎಂದು ಪೊಲೀಸರ ಭರವಸೆ ಕೊಟ್ಟಿದ್ದಾರೆ.

Comments are closed.