ಕರ್ನಾಟಕ

ಬ್ಯಾಂಕಿನಿಂದ 3 ಲಕ್ಷ ಡ್ರಾ ಮಾಡಿ ಡೆತ್‌ನೋಟ್ ಬರೆದಿಟ್ಟು ನಾಪತ್ತೆಯಾದ ದಂಪತಿ

Pinterest LinkedIn Tumblr

ರಾಣೆಬೆನ್ನೂರ: ಪ್ರೀತಿಸಿ ಮದುವೆಯಾಗಿದ್ದ ದಂಪತಿ ಡೆತ್‌ನೋಟ್ ಬರೆದಿಟ್ಟು ನಾಪತ್ತೆಯಾದ ಘಟನೆ ನಗರದಲ್ಲಿ ನಡೆದಿದ್ದು, ಮಗಳು ಹಾಗೂ ಅಳಿಯನನ್ನು ಹುಡುಕಿಕೊಡಿ ಎಂದು ಯುವತಿಯ ಕುಟುಂಬದವರು ಪೊಲೀಸರ ಮೊರೆ ಹೋಗಿದ್ದಾರೆ.

ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದ ಆನಂದ ದೀಪಕ ಪೂಜಾರ (31) ಹಾಗೂ ಪತ್ನಿ ಅಪೂರ್ವ ಆನಂದ ಪೂಜಾರ (23) ನಾಪತ್ತೆಯಾದವರು.

ನಗರದ ಖಾಸಗಿ ಬ್ಯಾಂಕ್‌ವೊಂದರಲ್ಲಿ ಆನಂದ ಕಾರ್ಯ ನಿರ್ವಹಿಸುತ್ತಿದ್ದರು. ಪುತ್ರಿ ಮನೆ ಕೆಲಸ ಮಾಡಿಕೊಂಡಿದ್ದಳು. ಆದರೆ, ಡಿ. 12ರ ಮಧ್ಯರಾತ್ರಿಯಿಂದ ಇಬ್ಬರೂ ನಾಪತ್ತೆಯಾಗಿದ್ದಾರೆ ಎಂದು ಶಹರ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಚಿಕ್ಕಮಗಳೂರು ಜಿಲ್ಲೆ ಕಡೂರ ತಾಲೂಕಿನ ಅಪೂರ್ವ ಐದು ವರ್ಷದ ಹಿಂದೆ ಅಕ್ಕನ ಮದುವೆಗಾಗಿ ಬಟ್ಟೆ ಖರೀದಿಸಲು ದಾವಣಗೆರೆಗೆ ಬಂದಿದ್ದಳು. ಈ ಸಮಯದಲ್ಲಿ ಆನಂದನ ಪರಿಚಯವಾಗಿತ್ತು. ಪರಿಚಯ ಸ್ನೇಹವಾಗಿ ನಂತರ ಪ್ರೀತಿಗೆ ತಿರುಗಿತ್ತು. ಇಬ್ಬರ ಕುಟುಂಬದವರು ಒಪ್ಪಿ ಮದುವೆ ಮಾಡಿದ್ದರು. ಇದಾದ ನಂತರ ಇಬ್ಬರೂ ನಗರದಲ್ಲಿ ಬಾಡಿಗೆ ಮನೆಯೊಂದರಲ್ಲಿ ಜೀವನ ನಡೆಸುತ್ತಿದ್ದರು. ಆದರೀಗ ಏಕಾಏಕಿ ನಾಪತ್ತೆಯಾಗಿದ್ದು, ಆತಂಕ ಮೂಡಿಸಿದೆ ಎಂದು ಕುಟುಂಬದವರು ತಿಳಿಸಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ.

ದಂಪತಿ ನಾಪತ್ತೆಯಾಗುವ ಮುನ್ನಾ ದಿನ ಬ್ಯಾಂಕ್‌ನಿಂದ 3 ಲಕ್ಷ ರೂ. ಡ್ರಾ ಮಾಡಿಕೊಳ್ಳಲಾಗಿದೆ. ಅಲ್ಲದೆ ಡಿ. 16ರವರೆಗೆ ಬ್ಯಾಂಕ್‌ಗೆ ಆನಂದ ರಜೆ ಹಾಕಿದ್ದಾಗಿ ವ್ಯವಸ್ಥಾಪಕರು ತಿಳಿಸಿದ್ದಾರೆ ಎಂದು ಯುವತಿ ತಂದೆ ಹೇಳಿದ್ದು, ಪ್ರಕರಣ ಕುತೂಹಲ ಮೂಡಿಸಿದೆ.

ಆತಂಕ ಮೂಡಿಸಿದ ಚೀಟಿ: ಮದುವೆಯಾದ ಬಳಿಕ ಇಬ್ಬರೂ ಚೆನ್ನಾಗಿಯೇ ಇದ್ದರು. ಆದರೆ, ಅವರು ನಾಪತ್ತೆಯಾದ ಬಳಿಕ ಅವರ ಮನೆಯಲ್ಲಿ ಅಪೂರ್ವ ಬರೆದಿದ್ದಾಳೆ ಎನ್ನಲಾದ ಡೆತ್‌ನೋಟ್ ದೊರೆತಿದೆ. ‘ಅದರಲ್ಲಿ ಹುಬ್ಬಳ್ಳಿಯ ಸಾಯಿಗಣೇಶ ಎಂಬ ಹುಡುಗನೊಬ್ಬ ಫೋನ್ ಮಾಡಿ ನನಗೆ ಕಿರುಕುಳ ಕೊಡುತ್ತಿದ್ದ. ಅವನಿಂದ ಬೇಸತ್ತು ಹೋಗಿದ್ದೇನೆ. ಆದ್ದರಿಂದ ನಾನು ಹಾಗೂ ನನ್ನ ಪತಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ’ ಎಂದು ಬರೆದಿರುವುದಾಗಿ ಅಪೂರ್ವಳ ತಂದೆ ನಾಗರಾಜ ವಿವರಿಸಿದರು.

Comments are closed.