ಕರ್ನಾಟಕ

ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ಆತ್ಮಹತ್ಯೆಗೆ ಯತ್ನ; ಡಿಕೆ ಶಿವಕುಮಾರ್ ಒತ್ತಾಯಿಸಿದ್ದೇನು…?

Pinterest LinkedIn Tumblr

ಕಾರವಾರ: ಮುಖ್ಯಮಂತ್ರಿ ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿ ಎನ್.ಆರ್. ಸಂತೋಷ್ ಅವರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಕುರಿತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು, ಪ್ರಕರಣದ ಕುರಿತು ಸರ್ಕಾರ ತನಿಖೆ ಮಾಡಿದರೆ ಅರ್ಥವಿಲ್ಲ. ಇದರಲ್ಲಿ ಗೌಪ್ಯ ವಿಚಾರ ಅಡಗಿದೆ. ಸತ್ಯಾಂಶ ಹೊರಬರಬೇಕಿದೆ ಬೇರೆ ರೀತಿಯಲ್ಲಿ ತನಿಖೆ ನಡೆಸಬೇಕು ಎಂದು ಸರ್ಕಾರಕ್ಕೆ ಒತ್ತಾಯ ಮಾಡಿದ್ದಾರೆ.

ಕಾರವಾರದಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು, ಸಂತೋಷ್‍ರವರು ಯಾವುದೋ ವೀಡಿಯೋ ಮಾಡಿ ಎಂಎಲ್‍ಸಿಗೆ ಮತ್ತು ಮಿನಿಸ್ಟರ್ ಕೈಗೆ ಕೊಟ್ಟಿದ್ದಾರೆ ಎನ್ನುವ ಮಾಹಿತಿ ಇತ್ತು. ಅದನ್ನು ಮಿನಿಸ್ಟರ್ ಮತ್ತು ಎಂಎಲ್‍ಸಿಗೆ ಸೇರಿ ದೆಹಲಿ ನಾಯಕರಿಗೆ ತಲುಪಿಸಿದ್ದಾರೆ ಎನ್ನುವುದು ಮಾಹಿತಿ ಇದೆ ಎಂದರು.

ದೆಹಲಿ ನಾಯಕರಿಗೆ 2-3 ದಿನದ ಹಿಂದೆ ಅವರ ಪರ್ಸನಲ್ ವೀಡಿಯೊ ತೋರಿಸಿದ್ದಾರೆ. ಹೀಗಾಗಿ ಬೇಸರದಿಂದ ಆತ್ಮಹತ್ಯೆಗೆ ಯತ್ನಿಸಿರಬಹುದು. ಈ ಬಗ್ಗೆ ಸರ್ಕಾರ ತನಿಖೆ ಮಾಡಿದರೆ ಅರ್ಥವಿಲ್ಲ. ಇದರಲ್ಲಿ ಗೌಪ್ಯ ವಿಚಾರ ಅಡಗಿದೆ. ಹೀಗಾಗಿ ಬೇರೆ ತನಿಖೆ ಆಗಬೇಕು. ಸತ್ಯಾಂಶ ಏನಿದೆ ಎಂಬುದರ ಬಗ್ಗೆ ತನಿಖೆಯಾಗಬೇಕು ಎಂದು ಸರ್ಕಾರಕ್ಕೆ ಒತ್ತಾಯ ಮಾಡಿದರು.

ಸಿದ್ದರಾಮಯ್ಯ ಮಾದಕ ದ್ರವ್ಯದಿಂದ ಸರ್ಕಾರ ನಡೆಸಿದ್ದರು ಎಂಬ ಕಟೀಲ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಏನೋ ಹೆಚ್ಚುಕಮ್ಮಿ ಆಗಿದೆ. ಜವಾಬ್ದಾರಿಯುತ ವ್ಯಕ್ತಿ, ಗೌರವ ಸ್ಥಾನದಲ್ಲಿ ನಡೆದುಕೊಳ್ಳಬೇಕು ಅವರಿಗೆ ಅಲ್ಪಸ್ವಲ್ಪ ಜ್ಞಾನ ಇದೆ ಅಂತಾ ತಿಳಿದಿದ್ದೆ. ಆದರೆ ಆ ಸ್ಥಾನಕ್ಕೆ ಕಳಂಕವಾಗುವ ರೀತಿ ಮಾತನಾಡಿದ್ದಾರೆ ಎಂದು ಕಿಡಿಕಾರಿದರು.

Comments are closed.