ಕರ್ನಾಟಕ

ಚಿತ್ರದುರ್ಗ: 17  ಪದವಿ ವಿದ್ಯಾರ್ಥಿಗಳಿಗೆ ಕೊರೋನಾ

Pinterest LinkedIn Tumblr

ಚಿತ್ರದುರ್ಗ: ಸರ್ಕಾರ ಅಂತಿಮ ಪದವಿ ವಿದ್ಯಾರ್ಥಿಗಳಿಗೆ ಕಾಲೇಜು ಪ್ರಾರಂಭ ಮಾಡಿದೆ. ಅದ್ಯಾವ ಗ್ರಹಚಾರವೋ ಏನೋ ಕಾಲೇಜು ಪ್ರಾರಂಭದ ಬೆನ್ನಲ್ಲೆ ಚಿತ್ರದುರ್ಗ ಜಿಲ್ಲೆಯ 17 ಜನ ವಿದ್ಯಾರ್ಥಿಗಳಿಗೆ ಕೊರೋನಾ ಮಹಾಮಾರಿ ಅಂಟಿಕೊಂಡಿದೆ.

ಇದೀಗ ಜಿಲ್ಲೆಯ ವಿದ್ಯಾರ್ಥಿಗಳು, ಪೋಷಕರ ಮನಸಲ್ಲಿ ಆತಂಕ ಮನೆ ಮಾಡಿದೆ. ಇಡೀ ದೇಶವನ್ನೇ ತಲ್ಲಣಗೊಳಿಸಿರುವ ಕೊರೋನಾ ಮಹಾ ಮಾರಿ ದೇಶದ ನೌಕರರು, ರೈತರು, ಕಾರ್ಮಿಕರು, ಸೇರಿದಂತೆ ಅನೇಕ ವರ್ಗದ ಜನರನ್ನ ಮತ್ತು ಅವರ ಬದುಕನ್ನ ಛಿದ್ರಗೊಳಿಸಿದೆ. ಅಷ್ಟೆ ಅಲ್ಲದೇ ದೇಶದ ಭವಿಷ್ಯದ ಕುಡಿಗಳು ಕನಸನ್ನ ಹೊತ್ತು ವಿದ್ಯೆ ಕಲಿಯೋಕು ಅಡ್ಡಿಯಾಗಿತ್ತು. ದೇಶದ ಜನರ ಪ್ರಾಣ ರಕ್ಷಣೆಗಾಗಿ ಮಾಡಿದ ಕೊರೋನಾ ಲಾಕ್ ಡೌನ್ ನಿಂದ ಶಾಲಾ ಕಾಲೇಜುಗಳು ಕೂಡಾ ಬಂದ್ ಆಗಿದ್ದವು. ಆದರೆ ವಿದ್ಯಾರ್ಥಿಗಳ ಭವಿಷ್ಯದ ಬೆಳಕು ವಿದ್ಯೆ ಕಲಿಯೋಕೆ ಲಾಕ್​ಡೌನ್ ಅಡ್ಡಿ ಆಗಬಾರದು ಅಂತ ಪರ್ಯಾಯವಾಗಿ ಆನ್ ಲೈನ್ ಕ್ಲಾಸ್ ಪ್ರಾರಂಭ ಮಾಡಿದ್ರು. ಆದ್ರೆ ಶಾಲಾ ಕಾಲೇಜುಗಳಿಗೆ ತೆರಳಿ ವಿದ್ಯೆ ಕಲಿಯುವ ವಿದ್ಯಾರ್ಥಿಗಳು ಆನ್ ಲೈನ್ ಕ್ಲಾಸ್ ಕೇಳೋಕೆ ಅನೇಕ ಆರ್ಥಿಕ ಸಂಕಷ್ಟ ಎದುರಿಸಬೇಕಾಯ್ತು.

ಇವೆಲ್ಲ ಬೆಳವಣಿಗೆಗಳ ನಡುವೆ ರಾಜ್ಯದಲ್ಲಿ ಕೊರೋನಾ ಸೋಂಕು ಕಡಿಮೆ ಆಗುತ್ತಿದೆ ಅನ್ಬೋದು ತಿಳಿದು ಜನರು ಸ್ವಲ್ಪ ನಿರಾಳರಾಗಿದ್ರು. ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆ ಆಗಬಾರದು ಅಂತ ಹಂತ ಹಂತವಾಗಿ ಶಾಲಾ ಕಾಲೇಜುಗಳನ್ನ ತೆರೆಯೋಕೆ ಸರ್ಕಾರಗಳು ಚಿಂತಿಸಿ ಅದಕ್ಕೆ ಬೇಕಾದ ಪೂರ್ವ ತಯಾರಿ ಮಾಡಿಕೊಂಡಿದ್ದವು. ಅದರಂತೆ ರಾಜ್ಯಾದ್ಯಂತ ಕಳೆದ ಎಂಟು ತಿಂಗಳಿಂದ ಮುಚ್ಚಿದ್ದ ಪದವಿ ಕಾಲೇಜುಗಳನ್ನ ಪ್ರಾರಂಭಿಸಲು ಸರ್ಕಾರ ಮಾರ್ಗಸೂಚಿ ಹೊರಡಿಸಿ ಅಂತಿಮ ವಿದ್ಯಾರ್ಥಿಗಳಿಗೆ ಕಾಲೇಜು ಪ್ರಾರಂಭ ಮಾಡಿದೆ.

ಸರ್ಕಾರದ ಮಾರ್ಗಸೂಚಿ ಅನ್ವಯ ಪ್ರತಿಯೊಬ್ಬ ವಿದ್ಯಾರ್ಥಿ ಕೊರೋನಾ ಪರೀಕ್ಷೆಯ ವರದಿ ಪಡೆದು, ಪೋಷಕರ ಒಪ್ಪಿಗೆ ಪತ್ರವನ್ನು ತರಬೇಕಿತ್ತು. ಅದರಂತೆ ಏಳೆಂಟು ತಿಂಗಳು ಕಾಲೇಜು ಪಾಠ ಇಲ್ಲದೆ ಇದ್ದ ವಿದ್ಯಾರ್ಥಿಗಳು ಪ್ರಾರಂಭದ ದಿನವೇ ಕಾಲೇಜಿಗೆ ಬಂದಿದ್ರು. ಆದರೆ ಕೊರೋನಾ ಮಹಾಮಾರಿ ರೋಗ ನಮ್ಮನ್ನ ಎಲ್ಲಿ ಬಲಿ ಪಡೆಯುತ್ತದೋ ಅನ್ನೋ ಭಯ ಅವರ ಮನಸಲ್ಲಿ ಕಾಡತೊಡಗಿತ್ತು. ಅಷ್ಟೆ ಅಲ್ಲದೇ ಪೋಷಕರು ಕೂಡಾ ಅತಂಕದಿಂದಲೇ ಮಕ್ಕಳನ್ನ ಕಾಲೇಜಿಗೆ ಕಳುಹಿಸಿದ್ರು.ಅದರಲ್ಲಿ ಅನೇಕ ವಿದ್ಯಾರ್ಥಿಗಳು ಕೊರೋನಾ ಪರೀಕ್ಷೆ ವರದಿ ತಂದಿರಲಿಲ್ಲ.

ಬರೀ ಆನ್ಲೈನ್ ಪಾಠ ಕೇಳಿ ಬೇಸತ್ತಿದ್ದ ವಿದ್ಯಾರ್ಥಿಳು ಕಾಲೇಜಲ್ಲಿ ಆಫ್ ಲೈನ್ ಪಾಠ ಕೇಳೋಕೆ ತುದಿಗಾಲಲ್ಲಿ ನಿಂತಿದ್ರು. ಅಷ್ಟೆ ಅಲ್ಲದೇ ಕೊರೋನಾ ವರದಿ ನೀಡಲು ತಡವಾಗುತ್ತದೆ, ವಿದ್ಯಾರ್ಥಿಗಳಿಗೆ ಕಾಲೇಜುಗಳಲ್ಲಿಯೇ ಪರಿಕ್ಷಾ ಕೇಂದ್ರ ಪ್ರಾರಂಭ ಮಾಡಿ ಆ ದಿನವೇ ವರದಿ ನೀಡಿ ಅಂತ ಸರ್ಕಾರಗಳಿಗೆ ಮನವಿ ಮಾಡಿದ್ರು.

ಬಳಿಕ ಸರ್ಕಾರದ ಮಾರ್ಗಸೂಚಿ ಅನ್ವಯ ಚಿತ್ರದುರ್ಗ ಜಿಲ್ಲೆಯಲ್ಲಿ ಎಲ್ಲಾ ಪದವಿ, ಇಂಜಿನಿಯರಿಂಗ್ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಕೊರೋನಾ ಪರೀಕ್ಷೆ ಮಾಡಲಾಗಿತ್ತು.‌ ಹೀಗೆ ಕೊರೋನಾ ಪರಿಕ್ಷೆಗೆ ಮಾಡಿಸಿಕೊಂಡ 1265 ವಿದ್ಯಾರ್ಥಿಳಲ್ಲಿ 17 ಜನರಿಗೆ ಕೊರೋನಾ ಪಾಸೀಟೀವ್ ಆಗಿದೆ. ಇದ್ರಿಂದ ಕಾಲೇಜುಗಳಿಗೆ ಬರುತ್ತಿದ್ದ ವಿದ್ಯಾರ್ಥಿಗಳಲ್ಲಿ ಮತ್ತಷ್ಟು ಭಯ ಶುರುವಾಗಿದೆ.
ಕೊರೋನಾ ಸೋಂಕು ಕಾಣಿಸಿಕೊಂಡ ವಿದ್ಯಾರ್ಥಿಗಳಿಗೆ ಆರೋಗ್ಯ ಇಲಾಖೆ ಅಧಿಕಾರಿಗಳು ನಿಗಾ ವಹಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಇಷ್ಟೆಲ್ಲಾ ಬೆಳವಣಿಗೆಗಳ ನಡುವೆ ಕಾಲೇಜಿಗೆ ತೆರಳೋ ಆಸೆಯಿಂದ ದಿನಗಟ್ಟಲೆ ಕೊರೋನಾ ಪರೀಕ್ಷೆ ಮಾಡಿಸಿಕೊಳ್ಳೋಕೆ ಕಾಯುತ್ತಿದ್ದ ವಿದ್ಯಾರ್ಥಿಗಳು ಇದೀಗ ಕಾಲೇಜಿಗೆ ಹೋಗುವುದಾ ಬೇಡವಾ ಎಂಬುದಾಗಿ ಯೋಚಿಸುವಂತಾಗಿದೆ.

Comments are closed.