ರಾಯಚೂರು: ಮಸ್ಕಿ ಉಪಚುನಾವಣೆ ಘೋಷಣೆಗೂ ಮುನ್ನವೇ ಬಿಜೆಪಿ ರಣಕಹಳೆ ಮೊಳಗಿಸಿದೆ. ವಸತಿ ಸಚಿವ ವಿ ಸೋಮಣ್ಣ ನೇತೃತ್ವದಲ್ಲಿ ನಡೆದ ಸಮಾವೇಶದಲ್ಲಿ ಭರವಸೆಗಳ ಮಹಾಪೂರವೇ ಹರಿದು ಬಂದಿದ್ದು, ಸಚಿವರಾಗುವ ಪ್ರತಾಪ್ ಗೌಡ ಪಾಟೀಲರ ನ್ನ ಗೆಲ್ಲಿಸುವಂತೆ ಬಿಜೆಪಿ ನಾಯಕರು ಒಕ್ಕೊರಲಿನಿಂದ ಕಾರ್ಯಕರ್ತರಿಗೆ ಕರೆಕೊಟ್ಟರು.
ಮಸ್ಕಿಯಲ್ಲಿ ಇಂದು ಉಪಚುನಾವಣೆಗೂ ಮುನ್ನವೇ ಬಿಜೆಪಿ ಚುನಾವಣಾ ರಣತಂತ್ರಕ್ಕೆ ಮುಂದಾಗಿದೆ. ವಸತಿ ಸಚಿವ ವಿ ಸೋಮಣ್ಣ ನೇತೃತ್ವದಲ್ಲಿ ನಡೆದ ಚುನಾವಣಾ ಪೂರ್ವದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರನ್ನ ಸೇರಿಸಿ ಬೃಹತ್ ಸಮಾವೇಶ ನಡೆಸಿದರು. ಸಮಾವೇಶದಲ್ಲಿ ಮಾತನಾಡಿದ ಸಚಿವರು ಮಸ್ಕಿಯಲ್ಲಿ ಪ್ರತಾಪ್ ಗೌಡ ಪಾಟೀಲರನ್ನ ಗೆಲ್ಲಿಸುವಂತೆ ಜನರಿಗೆ ಮನವಿ ಮಾಡಿದರು. ಅಷ್ಟೇ ಅಲ್ಲದೇ ಅವರು ಸಚಿವರಾಗುವವರು. ಅವರಿಗೆ ಗೆಲ್ಲಿಸಿದರೆ ಕ್ಷೇತ್ರದ ಅಭಿವೃದ್ಧಿಗೆ ಸಹಾಯವಾಗಲಿದೆ ಎಂದರು.
ಭ್ರಷ್ಟ ಸರ್ಕಾರವನ್ನ ಕಿತ್ತೊಗೆದು ಯಡಿಯೂರಪ್ಪನವರ ಸರ್ಕಾರ ರಚನೆಯಲ್ಲಿ ಪ್ರತಾಪ್ ಗೌಡ ಪಟೀಲ್ ಪ್ರಮುಖ ಪಾತ್ರ ವಹಿಸಿದ್ದಾರೆ. ಕ್ಷೇತ್ರಕ್ಕೆ ಬೇಕಾಗುವ ಎಲ್ಲಾ ಸೌಕರ್ಯಗಳನ್ನ ಮಾಡಿಕೊಡಲಾಗುವುದು. ಮಸ್ಕಿ ತಾಲೂಕನ್ನು ಗುಡಿಸಲು ರಹಿತ ತಾಲೂಕು ಮಾಡಲಾಗುವುದು. ಅಲ್ಲದೇ ಕ್ಷೇತ್ರಕ್ಕೆ ಐದು ಸಾವಿರ ಮನೆಗಳನ್ನು ನೀಡಲಾಗುವುದು ಎಂದು ಭರಪೂರ ಭರವಸೆಗಳ ಮಹಾಪೂರ ಹರಿಸಿದರು.
ಅಲ್ಲದೇ 5ಎ ಕೆನಾಲ್ ತಾಂತ್ರಿಕ ತೊಂದರೆಗಳನ್ನು ನಿವಾರಿಸಿ ಶೀಘ್ರವೇ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದ ಅವರು 30 ತಿಂಗಳ ಅಧಿಕಾರಾವಧಿ ಇದೆ. 30 ವರ್ಷಕ್ಕೆ ಆಗುವಷ್ಟು ಕೆಲಸ ಪ್ರತಾಪ್ ಗೌಡ ಮಾಡಲಿದ್ದಾರೆ. ಬಸನಗೌಡ ತುರುವಿಹಾಳ ಅವರನ್ನು ಕಾಡಾ ಅಧ್ಯಕ್ಷ ಮಾಡಿದ್ದೇವು, ಆದರೆ ಅವರು ಒಡೆದ ಮನೆಗೆ ಸೇರಿದ್ದಾರೆ. ಅಲ್ಲಿ ಅವರವರ ಕಾಲು ಅವರೇ ಎಳೆಯುತ್ತಿದ್ದಾರೆ ಎಂದು ಕಾಂಗ್ರೇಸ್ ಕಿಟುಕಿದ ವಿ ಸೋಮಣ್ಣ, ಬಸನಗೌಡ ತುರವಿಹಾಳ ಮತ್ತೇ ಪಕ್ಷಕ್ಕೆ ಬನ್ನಿ ಎಂದು ಪರೋಕ್ಷವಾಗಿ ಸೂಚನೆಯನ್ನೂ ನೀಡಿದರು.
ಇನ್ನೂ ಇದೇ ಸಮಾವೇಶದಲ್ಲಿ ಭಾಗಿಯಾಗಿದ್ದ ಸುರಪುರ ಶಾಸಕ ರಾಜೂಗೌಡ ಕೂಡಾ ಸಚಿವರಾಗಲಿರುವ ಪ್ರತಾಪ್ ಗೌಡ ಪಾಟೀಲ್ ರನ್ನು ಗೆಲ್ಲಿಸುವಂತೆ ಕೋರಿದರು. ತಮ್ಮ ಮಾತಿನುದ್ದಕ್ಕೂ ಕಾಂಗ್ರೆಸ್ ನಾಯಕರ ಕಾಲೆಳೆದು ರಾಜೂಗೌಡ, ಡಿಕೆ ಶಿವಕುಮಾರ್ ಅವರ ಜೈ ಶ್ರೀರಾಮ್ ಹೇಳಿಕೆ ಭರ್ಜರಿ ಕೌಂಟರ್ ಕೊಟ್ಟರು. ಕೇವಲ ಚುನಾವಣೆ ಬಂದಾಗ ಮಾತ್ರ ಕಾಂಗ್ರೆಸ್ ನವರಿಗೆ ಶ್ರೀ ರಾಮನ ನೆನಪಾಗುತ್ತದೆ. ಸೋಮಣ್ಣನವರ ಹೊಡೆತಕ್ಕೆ ಹೆದರಿ ಡಿಕೆ ಶಿವಕುಮಾರ್ ಜೈ ಶ್ರೀರಾಮ ಎಂದಿದ್ದಾರೆ. ಕೇವಲ ಬಾಯಿಮಾತಿಗೆ ಜೈ ಶ್ರೀರಾಮ ಎಂದ ನಿಮ್ಮ ಡಾಂಭಿಕತೆಗೆ ಹಿಂದೂಗಳು ಒಪ್ಪಲ್ಲವೆಂದ ಟಾಂಗ್ ನೀಡಿದರು.
ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗಿಯಾಗಿದ್ದ ಸಮಾವೇಶದಲ್ಲಿ ಕರೋನಾ ನಿಯಮಗಳನ್ನ ಸಂಪೂರ್ಣವಾಗಿ ಗಾಳಿಗೆ ತೂರಲಾಗಿತ್ತು. ಒಟ್ಟಿನಲ್ಲಿ ಚುನಾವಣೆಗೂ ಘೋಷಣೆಗೂ ಮುನ್ನವೇ ಬಿಜೆಪಿ ಅಭ್ಯರ್ಥಿಯಾಗಲಿರುವ ಪ್ರತಾಪ್ ಗೌಡ ಪಾಟೀಲ್ ಗೆಲುವಿಗೆ ಬಿಜೆಪಿ ನಾಯಕರು ಭರ್ಜರಿ ಕ್ಯಾಂಪೇನ್ ಶುರು ಮಾಡಿದ್ದು, ಭರವೆಸಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.