ಕರ್ನಾಟಕ

ದೀಪಾವಳಿಗೆ ಪಟಾಕಿ ನಿಷೇಧಕ್ಕೆ ಚಿಂತನೆ: ಸಚಿವ ಕೆ.ಸುಧಾಕರ್

Pinterest LinkedIn Tumblr


ಬೆಂಗಳೂರು; ಕೊರೋನಾ ನಿಯಂತ್ರಣದ ಕುರಿತು ತಜ್ಞರೊಂದಿಗೆ ಇಂದು ಸಭೆ ನಡೆಸಲಾಗಿದೆ. ಚಳಿಗಾಲದಲ್ಲಿ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಪಟಾಕಿ ನಿಷೇಧಕ್ಕೆ ಚಿಂತನೆ ನಡೆಸಲಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ಚಳಿಗಾಲ ಮತ್ತು ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಕೋವಿಡ್ ನಿಯಂತ್ರಿಸುವ ಸಂಬಂಧ ತಾಂತ್ರಿಕ ಸಮಿತಿ ಹಾಗೂ ತಜ್ಞರ ಜೊತೆಗೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಇಂದು ವಿಧಾನಸೌಧದಲ್ಲಿ ಸಭೆ ನಡೆಸಿದರು. ಸಭೆಯ ಬಳಿಕ ಮಾತನಾಡಿದ ಅವರು, ಉಪಚುನಾವಣೆ ನಡೆದ ಎರಡು ಕ್ಷೇತ್ರದಲ್ಲಿ ಹೆಚ್ಚು ಪರೀಕ್ಷೆ ನಡೆಸಬೇಕು ಅಂತ ತಜ್ಞರ ಸಮಿತಿ ವರದಿ ನೀಡಿದೆ. ಅದೇ ರೀತಿ ಗ್ರಾಮ ಪಂಚಾಯತಿ ಚುನಾವಣೆ ಸಹ ಮುಂದೂಡಲು ವರದಿ ನೀಡಿದ್ದಾರೆ ಎಂದು ತಿಳಿಸಿದರು.

ಈ ದೀಪಾವಳಿ ಹಬ್ಬಕ್ಕೆ ಪಟಾಕಿ ನಿಷೇಧ ಮಾಡಲು ಚಿಂತನೆ ಮಾಡಲಾಗಿದೆ. ಸಿಎಂ ಯಡಿಯೂರಪ್ಪ ಅವರ ಜೊತೆ ಚರ್ಚಿಸಿ ಸರ್ಕಾರದ ನಿರ್ಧಾರ ಘೋಷಣೆ ಮಾಡಲಾಗುವುದು. ಈ ಬಾರಿ ಸರಳ ದೀಪಾವಳಿ ಆಚರಿಸಬೇಕಿದೆ. ದೀಪ ಹಚ್ಚುವ ಮೂಲಕ ಹಬ್ಬ ಆಚರಣೆ ಮಾಡಬೇಕು. ಪಟಾಕಿಯಿಂದ ಶ್ವಾಸಕೋಶದ ಸಮಸ್ಯೆ ಸೃಷ್ಟಿಯಾಗುತ್ತದೆ. ಈ ಕಾರಣದಿಂದ‌ ತಜ್ಞರು ಪಟಾಕಿ ಬೇಡ ಎಂದಿದ್ದಾರೆ. ಈ ಬಗ್ಗೆ ಸಿಎಂ‌ ಜೊತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು.

ಗ್ರಾಮ ಪಂಚಾಯತಿ ಚುನಾವಣೆ ಸದ್ಯಕ್ಕೆ ಬೇಡ ಎಂಬುದು ತಜ್ಞರ‌ ಅಭಿಪ್ರಾಯವಾಗಿದೆ. ಮನೆಮನೆಗೆ ಕೋವಿಡ್ ತಲುಪಿಸಿದಂತೆ ಆಗುತ್ತದೆ. ಫೆಬ್ರವರಿವರೆಗೆ ಚುನಾವಣೆ ಮುಂದೂಡುವುದು ಒಳಿತು ಎಂದು ತಜ್ಞರು ಅಭಿಪ್ರಾಯ ನೀಡಿದ್ದಾರೆ ಎಂದು ತಿಳಿಸಿದರು.

ಮೊದಲ ಬಾರಿಗೆ ಎ ಸಿಂಪ್ಟಮ್ಯಾಟಿಕ್ ಆಗಿದ್ದವರಿಗೆ ಎರಡನೇ ಬಾರಿಗೆ ಕೊರೋನಾ ಬಂದರೆ ಅವರಿಗೆ ಸೋಂಕಿನ ತೀವ್ರತೆ ಹೆಚ್ಚಿರುತ್ತದೆ. ಏಕೆಂದರೆ ಇವರಲ್ಲಿ ರೋಗ ನಿರೋಧಕ ಶಕ್ತಿ ಉತ್ಪತ್ತಿ ಆಗಿರುವುದಿಲ್ಲ. ಅದೇ ಮೊದಲ ಬಾರಿ ತೀವ್ರ ರೋಗ ಲಕ್ಷಣ ಕಂಡುಬಂದವರಿಗೆ ಎರಡನೇ ಬಾರಿಗೆ ಕೊರೋನಾ ಸೋಂಕು ತಗುಲಿದರೆ ಅದರ ತೀವ್ರತೆ ಹೆಚ್ಚು ಇರುವುದಿಲ್ಲ. ಇದು ಅಧ್ಯಯನದಿಂದ ತಿಳಿದು ಬಂದಿದೆ. ಶೇ.5 ರಷ್ಟು ಮಂದಿಗೆ ಕೊರೋನಾ ಮರುಕಳಿಸಿದೆ ಎಂಬ ಅಂಕಿ- ಅಂಶವೂ ಬೆಳಕಿಗೆ ಬಂದಿದೆ. ಹೀಗಾಗಿ ಒಮ್ಮೆ ಕೊರೋನಾ ಬಂದರೆ ಮತ್ತೊಮ್ಮೆ ಬರುವುದಿಲ್ಲ ಎಂಬ ತಪ್ಪು ಗ್ರಹಿಕೆ ಬೇಡ. ಲಸಿಕೆ ಬರುವ ತನಕ ಎಲ್ಲರೂ ಮುಂಜಾಗ್ರತೆ ವಹಿಸಲೇಬೇಕು ಎಂದು ಡಾ.ಸುಧಾಕರ್ ಕಿವಿಮಾತು ಹೇಳಿದರು.

Comments are closed.