ಕರ್ನಾಟಕ

ಪತ್ನಿಯ ಅಕ್ರಮ ಸಂಬಂಧ: ಡಬಲ್ ಮರ್ಡರ್ ಮಾಡಿದ ಶಿಕ್ಷಕ

Pinterest LinkedIn Tumblr


ದಾವಣಗೆರೆ: ದಾವಣಗೆರೆಯಲ್ಲಿ ನಡೆದ ಡಬಲ್‌ ಮರ್ಡರ್‌ ಪ್ರಕರಣ ಇಡೀ ಜಿಲ್ಲೆಯನ್ನು ಬೆಚ್ಚಿಬೀಳಿಸಿತ್ತು. ಒಂದೇ ದಿನ ದಾವಣಗೆರೆಯ ಬೇರೆ ಬೇರೆ ತಾಲೂಕಿನಲ್ಲಿ ಎರಡು ಕೊಲೆಗಳು ನಡೆದಿದ್ದವು. ಆ ಕೊಲೆಯ ಪ್ರಕರಣವನ್ನು ಭೇದಿಸಿರುವ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಎರಡೂ ಕೊಲೆಗಳಿಗೆ ಅಕ್ರಮ ಸಂಬಂಧವೇ ಕಾರಣ ಎನ್ನಲಾಗಿದೆ. ಅಕ್ರಮ ಸಂಬಂಧವಿಟ್ಟುಕೊಂಡಿದ್ದ ತನ್ನ ಹೆಂಡತಿ ಮತ್ತು ಆಕೆಯ ಪ್ರಿಯಕರನನ್ನು ಕೊಲೆ ಮಾಡಿದ್ದ ವ್ಯಕ್ತಿಯನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.

ಆರೋಪಿ ಹೊಳಲ್ಕೆರೆ ಮೂಲದ ಶಿವಕುಮಾರ್‌ ಕಾರಿಗನೂರಿನ ಖಾಸಗಿ ಶಾಲೆ ಶಿಕ್ಷಕರಾಗಿದ್ದಾರೆ. ಕಾರಿಗನೂರು ಶ್ವೇತಾ (26) ಹಾಗೂ ವೇದಮೂರ್ತಿ (29) ಕೊಲೆಯಾದವರು. ದಾವಣಗೆರೆಯಲ್ಲಿ ಅಕ್ಟೋಬರ್‌ 28ರಂದು ನಡೆದ ಕೊಲೆ ತಡವಾಗಿ ಬೆಳಕಿಗೆ ಬಂದಿತ್ತು. ಹೊನ್ನಾಳಿಯ ತುಂಗಭದ್ರಾ ನದಿಯಲ್ಲಿ ವೇದಮೂರ್ತಿ ಶವ ಪತ್ತೆಯಾಗಿತ್ತು. ಚನ್ನಗಿರಿ ತಾಲೂಕಿನ ರಾಜಗೊಂಡನಹಳ್ಳಿಯ ಬಾವಿಯೊಂದರಲ್ಲಿ ಶ್ವೇತಾ ಶವ ಪತ್ತೆಯಾಗಿತ್ತು. ಬೇರೆ ಬೇರೆ ಕಡೆ ನಡೆದ ಈ ಎರಡು ಸಾವು​ ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿತ್ತು.

ವೇದಮೂರ್ತಿ ಮತ್ತು ಶ್ವೇತಾ ಅವರದ್ದು ಆಕಸ್ಮಿಕವಾದ ಸಾವಲ್ಲ ಎಂಬ ಅನುಮಾನ ಉಂಟಾಗಿತ್ತು. ಈ ಪ್ರಕರಣದ ಬೆನ್ನತ್ತಿದ ಪೊಲೀಸರಿಗೆ ಅವೆರಡು ಕೊಲೆಯೆಂಬುದು ಗೊತ್ತಾಗಿತ್ತು. ಹೆಚ್ಚಿನ ತನಿಖೆ ನಡೆಸಿದಾಗ ಆ ಎರಡೂ ಕೊಲೆಗಳಿಗೆ ಒಬ್ಬನೇ ಕಾರಣ ಎಂಬುದು ಗೊತ್ತಾಗಿತ್ತು. ಶಿವಕುಮಾರ್​ಗೆ ತನ್ನ ಹೆಂಡತಿ ಶ್ವೇತಾ ಜತೆ ವೇದಮೂರ್ತಿ ಹೊನ್ನಾಳಿಯಲ್ಲಿ ಸಿಕ್ಕಿದ್ದ. ಆಗ ವೇದಮೂರ್ತಿಯನ್ನು ಕೊಲೆ ಮಾಡಿ ಹೊನ್ನಾಳಿ ತುಂಗಭದ್ರಾ ನದಿಗೆ ಹಾಕಿದ್ದ. ಬಳಿಕ, ಹೆಂಡತಿಯನ್ನು ಕರೆದುಕೊಂಡು ವಾಪಾಸ್​ ಬಂದಿದ್ದ ಶಿವಕುಮಾರ್‌ ತನಗೆ ಮೋಸ ಮಾಡಿದಳು ಎಂಬ ಕೋಪದಿಂದ ಹೆಂಡತಿಯನ್ನೂ ಕೊಲೆ ಮಾಡಲು ಸಂಚು ರೂಪಿಸಿದ್ದ. ನಾವಿಬ್ಬರೂ ಸೂಳೆಕೆರೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳೋಣ ಎಂದು ಪತ್ನಿಯನ್ನು ನಂಬಿಸಿದ್ದ ಶಿವಕುಮಾರ್‌ ನಂತರ, ಚನ್ನಗಿರಿ ತಾಲೂಕಿನ ರಾಜಗೊಂಡನಹಳ್ಳಿ ತೋಟದಲ್ಲಿ ಆಕೆಯನ್ನು ಕೊಲೆ ಮಾಡಿ ಬಾವಿಗೆ ಹಾಕಿದ್ದ.

ಎರಡು ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿ ಶಿವಕುಮಾರ್‌ ಇದೀಗ ಪೊಲೀಸರಿಗೆ ಸೆರೆ ಸಿಕ್ಕಿದ್ದಾನೆ. ಎರಡೂ ಪ್ರಕರಣದ ಆರೋಪಿ ಒಬ್ಬನೇ ಎಂಬ ಅನುಮಾನದಿಂದ ತನಿಖೆ ಮುಂದುವರೆಸಿದ್ದ ಪೊಲೀಸರು ಘಟನೆ ನಡೆದು 48 ಗಂಟೆಯೊಳಗೆ ಆರೋಪಿಯನ್ನು ಬಂಧಿಸಿದ್ದಾರೆ. ಶಿವಕುಮಾರ್‌ ತನ್ನ ಸಹೋದರ ಶಿವರಾಜ್‌ ಸಹಕಾರದಿಂದ ಕೊಲೆ ಮಾಡಿದ್ದ. ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ಇಬ್ಬರನ್ನೂ ಕೊಲೆ ಮಾಡಿದ್ದಾಗಿ ಆರೋಪಿ ಶಿವಕುಮಾರ್‌ ಹೇಳಿಕೆ ನೀಡಿದ್ದಾನೆ.

Comments are closed.