ಅಂತರಾಷ್ಟ್ರೀಯ

ಅಮೆರಿಕಾ ರಾಜಕಾರಣದಲ್ಲಿ ಸಂಚಲನ ಮಾಡಿದ ಮದ್ದೂರು ಯುವಕ

Pinterest LinkedIn Tumblr


ಬೆಂಗಳೂರು: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ 43 ವರ್ಷದ ಡಾ. ವಿವೇಕ್ ಹೆಚ್ ಮೂರ್ತಿ ಅವರು ಡೆಮಾಕ್ರಾಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಜೋ ಬೈಡೆನ್ ಅವರ ಪ್ರಚಾರ ತಂಡದ ಪ್ರಮುಖ ಭಾಗವಾಗಿದ್ಧಾರೆ. ಒಂದು ವೇಳೆ ಡೊನಾಲ್ಡ್ ಟ್ರಂಪ್ ಸೋತು ಬೈಡೆನ್ ಅಮೆರಿಕ ಅಧ್ಯಕ್ಷರಾದರೆ ಕನ್ನಡಿಗ ಡಾ.ವಿವೇಕ್ ಮೂರ್ತಿ ಬಹುದೊಡ್ಡ ಸ್ಥಾನ ಅಲಂಕರಿಸುವ ಸಂಭವನೀಯತೆ ಹೆಚ್ಚಿದೆ.

ಡಾ. ವಿವೇಕ್ ಹೆಚ್ ಮೂರ್ತಿ ಅವರು ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಹಳ್ಳೆಗೆರೆ ಗ್ರಾಮದ ಮೂಲದವರು. ಇವರ ತಾತ ಹೆಚ್.ಟಿ. ನಾರಾಯಣಶೆಟ್ಟಿ ಅವರು ಹಿಂದುಳಿದ ವರ್ಗಗಳ ನಾಯಕರಾಗಿದ್ದವರು. ಕರ್ನಾಟಕದಲ್ಲಿ ಸಾಮಾಜಿಕ ಕ್ರಾಂತಿಯ ಹರಿಕಾರರಾಗಿದ್ದ ಮಾಜಿ ಸಿಎಂ ಡಿ ದೇವರಾಜ ಅರಸು ಅವರ ಆಪ್ತರಾಗಿದ್ದವರು. ಡಾ. ವಿವೇಕ್ ಮೂರ್ತಿ ಅವರ ಕುಟುಂಬದಲ್ಲಿ ಹಲವರು ವೈದ್ಯರಿದ್ಧಾರೆ. ತಂದೆ ಡಾ. ಹೆಚ್ ಎನ್ ಲಕ್ಷ್ಮೀನರಸಿಂಹ ಮೂರ್ತಿ ಅವರು ಮೈಸೂರು ಮೆಡಿಕಲ್ ಕಾಲೇಜಿನ ಪದವೀಧರ. ಬ್ರಿಟನ್​ನಲ್ಲಿ ಹಲವು ಸ್ತರಗಳಲ್ಲಿ ಸೇವೆ ನೀಡಿದ್ದಾರೆ. ಇವರ ಸಹೋದರಿ ಡಾ. ರಷ್ಮಿ ಅವರು ಅಮೆರಿಕದ ಫ್ಲೋರಿಡಾದಲ್ಲಿ ವೈದ್ಯರಾಗಿದ್ದಾರೆ.

ವೈದ್ಯಕೀಯ ಸೇವೆಯನ್ನ ಸಾಮಾಜಿಕ ಸೇವೆಯಾಗಿ ಪರಿಗಣಿಸುವ ವಿವೇಕ್ ಹೆಚ್ ಮೂರ್ತಿ ಅವರು ತಮ್ಮ ಮೂಲ ಊರನ್ನು ಯಾವತ್ತೂ ಮರೆತವರಲ್ಲ. ಹುಟ್ಟಿ ಬೆಳೆದದ್ದೆಲ್ಲಾ ವಿದೇಶದಲ್ಲಾದರೂ ಕನ್ನಡ ಮಾತು ನಿಲ್ಲಿಸಿದವರಲ್ಲ. ಇವರು ಪ್ರತೀ ವರ್ಷ ಹಳ್ಳೆಗೆರೆ ತಪ್ಪದೇ ಭೇಟಿ ನೀಡುತ್ತಾರೆ. ಮದ್ದೂರಿನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಲಕ್ಷಾಂತರ ಡಾಲರ್ ಹಣವನ್ನು ಇವರು ದೇಣಿಗೆಯಾಗಿ ನೀಡಿದ್ದಾರೆ. ಇಲ್ಲಿಯ ಸರ್ಕಾರಿ ಶಾಲೆಗಳಿಗೆ ನೂರು ಕಂಪ್ಯೂಟರ್​ಗಳನ್ನ ಒದಗಿಸಿದ್ಧಾರೆ. ಮಂಡ್ಯ ಜಿಲ್ಲೆಯ ಎಲ್ಲಾ ಶಾಲೆಗಳಿಗೂ ಕಂಪ್ಯೂಟರ್ ಒದಗಿಸುವ ಯೋಜನೆಯನ್ನೂ ಹೊಂದಿದ್ಧಾರೆ. ಆದರೆ ಇಲ್ಲಿ ವಿದ್ಯುತ್ ಸಮಸ್ಯೆ ಹಾಗೂ ಮೈಂಟೆನೆನ್ಸ್ ಸಮಸ್ಯೆ ಇರುವುದರಿಂದ ಕಂಪ್ಯೂಟರ್​ನ ವಾಸ್ತವಿಕ ಬಳಕೆ ಅಸಮರ್ಪಕವಾಗುವ ಹಿನ್ನೆಲೆಯಲ್ಲಿ ಸದ್ಯಕ್ಕೆ ಈ ಯೋಜನೆಯನ್ನು ಸ್ಥಗಿತಗೊಳಿಸಿದ್ದಾರೆ. ಈಗ ಕಂಪ್ಯೂಟರ್​ಗಳಿಗೆ ಪವರ್ ಬ್ಯಾಕಪ್ ಆಗಿ ಸೋಲಾರ್ ಕಿಟ್​ಗಳನ್ನ ನೀಡಲು ಸ್ಕೋಪ್ ಫೌಂಡೇಶನ್ ನಿರ್ಧರಿಸಿದೆ.

ಇವರು ಪ್ರತಿ ವರ್ಷ ಹುಟ್ಟೂರಿಗೆ ಬಂದಾಗೆಲ್ಲಾ ತಮ್ಮ ಕುಟುಂಬದ ಸಂಸ್ಥಾಪಿತ ಸ್ಕೋಪ್ ಫೌಂಡೇಶನ್ ಅಡಿಯಲ್ಲಿ ಉಚಿತ ವೈದ್ಯಕೀಯ ಶಿಬಿರಗಳನ್ನ ನಡೆಸುತ್ತಾರೆ. ವೈದ್ಯರ ತಂಡಗಳನ್ನ ಕಟ್ಟಿ ಹಲವು ಬಾರಿ ಉಚಿತ ನೇತ್ರ ಶಿಬಿರಗಳನ್ನೂ ನಡೆಸಿದ್ದಾರೆ. ಉಚಿತ ಹೆಲ್ತ್ ಕವರ್ ಒದಗಿಸುವ ಪ್ರಕ್ರಿಯೆ ಬಗ್ಗೆ ಹಾಗು ವೈದ್ಯಕೀಯ ಸೇವೆಯನ್ನು ಇನ್ನಷ್ಟು ಉತ್ತಮಗೊಳಿಸುವ ವಿಧಾನಗಳ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಸಲಹೆ ನೀಡುವ ಇಚ್ಛೆ ಇವರಿಗೆ.

ಡಾ. ವಿವೇಕ್ ಹೆಚ್ ಮೂರ್ತಿ ಅವರು ಮದ್ದೂರಿನ ಹಳ್ಳೆಗೆರೆ ಮೂಲದವರಾದರೂ ಹುಟ್ಟಿದ್ದು ಲಂಡನ್​ನಗರಿಯಲ್ಲಿ. ಬೆಳೆದದ್ದು ಅಮೆರಿಕದಲ್ಲಿ. ಅಮೆರಿಕದ ಹಾರ್ವರ್ಡ್ ಯೂನಿವರ್ಸಿಟಿಯಲ್ಲಿ ಬಿಎ ಹಾಗೂ ಯಾಲೆ ಶಿಕ್ಷಣ ಸಂಸ್ಥೆಯಿಂದ ಎಂಬಿಎ ಹಾಗೂ ಯಾಲೆ ಸ್ಕೂಲ್ ಆಫ್ ಮೆಡಿಸಿನ್​ನಿಂದ ಎಂಡಿ ಪದವಿಗಳನ್ನ ಪೂರೈಸಿದ್ಧಾರೆ.ವೈದ್ಯಕೀಯ ಕ್ಷೇತ್ರದಲ್ಲಿ ಇವರು ಮುಂಚೂಣಿ ಸ್ಥಾನ ಅಲಂಕರಿಸುವ ಮಟ್ಟಕ್ಕೆ ಬೆಳೆದಿದ್ದಾರೆ. ಡಾಕ್ಟರ್ಸ್ ಫಾರ್ ಅಮೆರಿಕ ಎಂಬ ಸಂಘಟನೆಯ ಸಹಸಂಸ್ಥಾಪಕರು ಹಾಗು ಅಧ್ಯಕ್ಷರೂ ಇವರೇ. ಕಡಿಮೆ ಬೆಲೆಗೆ ಉತ್ತಮ ಗುಣಮಟ್ಟದ ವೈದ್ಯಕೀಯ ಸೇವೆ ನೀಡಬೇಕೆಂಬುದು ಈ ವೈದ್ಯರ ಗ್ರೂಪ್​ನ ಉದ್ದೇಶ. ವಾಷಿಂಗ್ಟನ್ ಮೂಲದ ಈ ಗ್ರೂಪ್​ನಲ್ಲಿ 16 ಸಾವಿರ ವೈದ್ಯರಿದ್ಧಾರೆ. 2008 ಮತ್ತು 2012ರ ಅಮೆರಿಕ ಅಧ್ಯಕ್ಷೀಯ ಚುನಾವಣೆಗಳಲ್ಲಿ ಬರಾಕ್ ಒಬಾಮ ಪರವಾಗಿ ಈ ಡಾಕ್ಟರ್ಸ್​ನ ಗುಂಪು ಸಕ್ರಿಯವಾಗಿ ಪ್ರಚಾರ ಮಾಡಿತ್ತು. ಈ ಹಿನ್ನೆಲೆಯಲ್ಲಿ ಈ ಗುಂಪು ಡಾಕ್ಟರ್ಸ್ ಆಫ್ ಒಬಾಮ ಎಂದೇ ಖ್ಯಾತವಾಗಿದೆ.

ಡಾ. ವಿವೇಕ್ ಮೂರ್ತಿ ಅವರ ಕಾರ್ಯಕ್ಷಮತೆಯನ್ನ ಗ್ರಹಿಸಿದ ಬರಾಕ್ ಒಬಾಮ ತಮ್ಮ ಅಧ್ಯಕ್ಷೀಯ ಅವಧಿಯಲ್ಲಿ ಹಲವು ವಿರೋಧಗಳ ಮಧ್ಯೆ ಸರ್ಜನ್ ಜನರಲ್ ಆಗಿ ನೇಮಕ ಮಾಡಿದರು. 37ನೇ ವಯಸ್ಸಿಗೇ ವಿವೇಕ್ ಹೆಚ್ ಮೂರ್ತಿ ಅಮೆರಿಕದ ಸರ್ಜನ್ ಜನರಲ್ ಆದಾಗ ಹಲವು ಅಚ್ಚರಿಯ ಹುಬ್ಬುಗಳೇರಿದ್ದವು. ಒಂದು ಕಡೆ ಅಮೆರಿಕದ ಪ್ರಬಲ ಗನ್ ಲಾಬಿಯಿಂದ ನಿರಂತರ ಇದ್ದ ಒತ್ತಡ, ಮತ್ತೊಂದೆಡೆ ವಿವೇಕ್ ಮೂರ್ತಿ ಅವರಿಗಿದ್ದ ರಾಜಕೀಯ ಅನನುಭವ. ಇದರ ಮಧ್ಯೆ ಒಬಾಮ ಅವರು ಅಂತಿಮವಾಗಿ ಕನ್ನಡಿಗನಿಗೆ ದೊಡ್ಡ ಹುದ್ದೆ ನೀಡುವ ನಿರ್ಧಾರ ಮಾಡಿದ್ದರು.

ಈಗ ಡಾ. ವಿವೇಕ್ ಹೆಚ್ ಮೂರ್ತಿ ಅವರು ಜೋ ಬೈಡೆನ್ ಅವರ ಪ್ರಚಾರ ಕಾರ್ಯದ ಪ್ರಮುಖ ಸ್ಟ್ರಾಟಿಜಿಸ್ಟ್ ಪೈಕಿ ಒಬ್ಬರಾಗಿದ್ದಾರೆ. ಬೈಡೆನ್ ಅಮೆರಿಕ ಅಧ್ಯಕ್ಷರಾದರೆ ಡಾ. ವಿವೇಕ್ ಅವರಿಗೆ ಬಹುದೊಡ್ಡ ಹುದ್ದೆ ಸಿಗುವುದು ಬಹುತೇಕ ನಿಶ್ಚಿತ ಎನ್ನಲಾಗುತ್ತಿದೆ. ಇತ್ತ, ಮದ್ದೂರಿನ ಹಳ್ಳೆಗೆರೆಯಲ್ಲಿ ಜನರೂ ಇದನ್ನೇ ನಿರೀಕ್ಷಿಸಿ ಶುಭಹಾರೈಸುತ್ತಿದ್ದಾರೆ.

Comments are closed.