ಕರ್ನಾಟಕ

ಕಾರಿನಲ್ಲಿ ಒಬ್ಬರೇ ಪ್ರಯಾಣಿಸಿದರೂ ಮಾಸ್ಕ್ ಬಳಕೆ ಕಡ್ಡಾಯ

Pinterest LinkedIn Tumblr


ಬೆಂಗಳೂರು: ಕಾರಿನಲ್ಲಿ ಒಬ್ಬರೇ ಪ್ರಯಾಣಿಸುತ್ತಿದ್ದರೂ ಮಾಸ್ಕ್ ಧರಿಸುವುದು ಕಡ್ಡಾಯ ಮಾಡಿರುವುದು ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವಿದ್ ಅಕ್ತರ್ ಅವರಿಗೆ ಪತ್ರ ಬರೆದಿರುವ ಪಾಲಿಕೆ ಆಯುಕ್ತ ಎನ್.ಮಂಜುನಾಥ್ ಪ್ರಸಾದ್ ಅವರು ಈ ಬಗ್ಗೆ ಸ್ಪಷ್ಟನೆ ನೀಡುವಂತೆ ಕೇಳಿದ್ದಾರೆಂದು ತಿಳಿದುಬಂದಿದೆ.

ಈ ವರೆಗೂ ನಾವು ಯಾವುದೇ ಆದೇಶಗಳನ್ನು ಹಿಂಪಡೆದುಕೊಂಡಿಲ್ಲ. ಜನರ ಸುರಕ್ಷತೆಗಾಗಿ ಆದೇಶ ನೀಡಲಾಗಿದೆ. ಆರೋಗ್ಯ ಇಲಾಖೆ ಸ್ಪಷ್ಟನೆ ನೀಡುತ್ತಿದ್ದಂತೆಯೇ ಆದೇಶ ವಾಪಸ್ ಪಡೆಯುವ ಕುರಿತು ಚಿಂತನೆ ನಡೆಸಲಾಗುತ್ತದೆ ಎಂದು ಮಂಜುನಾತ್ ಪ್ರಸಾದ್ ಅವರು ತಿಳಿಸಿದ್ದಾರೆ.

ಈ ನಡುವೆ ಮಂಜುನಾಥ್ ಪ್ರಸಾದ್ ಅವರು ಬರೆದಿರುವ ಪತ್ರವನ್ನು ಆರೋಗ್ಯ ಇಲಾಖೆ ಮರುಪರಿಶೀಲನೆಗೆ ತಾಂತ್ರಿಕ ಸಮಿತಿಗೆ ಕಳುಹಿಸಿದೆ ಎಂದು ತಿಳಿದುಬಂದಿದೆ.

ಸಮಿತಿಯಲ್ಲಿ ವೈದ್ಯರು ಹಾಗೂ ಆರೋಗ್ಯ ತಜ್ಞರಿದ್ದು, ಈ ಬಗ್ಗೆ ಮರುಪರಿಶೀಲನೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ಪಂಕಜ್ ಕುಮಾರ್ ಪಾಂಡೆಯವರು ಹೇಳಿದ್ದಾರೆ.

ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಯೊಬ್ಬರು ಮಾತನಾಡಿ, ಕಳೆದ ಆಗಸ್ಟ್ ತಿಂಗಳಿನಲ್ಲಿ ಮಾಸ್ಕ್’ಗಳನ್ನು ಯಾರೆಲ್ಲಾ ಧರಿಸಬೇಕು. ಯಾವಾಗ ಧರಿಸಬೇಕೆಂಬುದರ ಬಗ್ಗೆ ಗೊಂದಲಗಳಿದ್ದವು. ನಂತರ ಒಬ್ಬಂಟಿಯಾಗಿ ವ್ಯಕ್ತಿ ಕಾರಿನಲ್ಲಿ ತೆರಳುತ್ತಿದ್ದಾಗ ಕಿಟಕಿ ಗಾಜುಗಳನ್ನು ಹಾಕಿದ್ದಾಗ ಮಾಸ್ಕ್ ಧರಿಸುವ ಅಗತ್ಯವಿಲ್ಲ ಎಂದು ತಿಳಿಸಿದ್ದೆವು. ಬಿಬಿಎಂಪಿ ಆಯುಕ್ತರು ಇಂತಹ ಆದೇಶವನ್ನೇಕೆ ಮಾಡಿದರು ಎಂಬುದರ ಬಗ್ಗೆ ನಮಗೆ ಮಾಹಿತಿ ಇಲ್ಲ. ಆದೇಶ ನೀಡುವುದಕ್ಕೂ ಮುನ್ನ ಆಯುಕ್ತರು ನಮ್ಮನ್ನು ಸಂಪರ್ಕಿಸಿಲ್ಲ. ಸುರಕ್ಷತಾ ದೃಷ್ಟಿಯಿಂದ ಮಾಸ್ಕ್ ಧರಿಸುವುದರಲ್ಲಿ ಯಾವುದೇ ಅಪಾಯಗಳಿಲ್ಲ. ಆದರೆ, ಕಾರಿನಲ್ಲಿ ಒಬ್ಬಂಟಿಯಾಗಿದ್ದಾಗ, ಕಿಟಕಿ ಗಾಜುಗಳನ್ನು ಹಾಕಿದ್ದಾಗ ಮಾಸ್ಕ್ ಏಕೆ ಧರಿಸಬೇಕೆಂಬ ಸಾರ್ವಜನಿಕರ ಪ್ರಶ್ನೆಯಲ್ಲಿ ಅರ್ಥವಿದೆ ಎಂದು ಹೇಳಿದ್ದಾರೆ.

ಆರೋಗ್ಯ ಇಲಾಖೆ ಹಾಗೂ ಬಿಬಿಎಂಪಿ ಅಧಿಕಾರಿಗಳ ನಡುವೆ ಸಹಕಾರದ ಸಮಸ್ಯೆಗಳಿವೆ. ಸರ್ಕಾರಿ ಅಧಿಕಾರಿಗಳಲ್ಲೇ ಗೊಂದಲಗಳು ಮೂಡುತ್ತಿರುವುದರಿಂದ ಜನರಿಗೆ ಏನು ಮಾಡಬೇಕೆಂಬುದು ತಿಳಿಯುವುದಿಲ್ಲ. ಯಾವುದೇ ಆದೇಶ ತೆಗೆದುಕೊಂಡಾಗಲೂ ಸರ್ಕಾರ ಅದಕ್ಕೆ ಬದ್ಧವಾಗಿರಬೇಕು. ಇಲ್ಲದಿದ್ದರೆ, ಇಂತಹ ನಿರ್ಧಾರಗಳು ಸಮಸ್ಯೆಯನ್ನು ತಂದೊಡ್ಡಲಿದೆ ಎಂದು ವ್ಯಕ್ತಿಯೊಬ್ಬರು ಹೇಳಿದ್ದಾರೆ.

Comments are closed.