ಧಾರವಾಡ: ಕಾರ್ಯಕ್ರಮವೊಂದರಲ್ಲಿ ನಂಜುಂಡಿ ಕಲ್ಯಾಣದ ‘ಒಳಗೆ ಸೇರಿದರೆ ಗುಂಡು ಹುಡುಗಿ ಆಗುವಳು ಗಂಡು’ ಎಂಬ ಪ್ರಸಿದ್ಧ ಹಾಡಿಗೆ ಸ್ವಾಮೀಜಿಯೊಬ್ಬರು ಸ್ಟೆಪ್ ಹಾಕಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ನವರಾತ್ರಿ ಪ್ರಯುಕ್ತ ಧಾರವಾಡ ತಾಲೂಕಿನ ನಿಗದಿ ಗ್ರಾಮದ ಹೊರವಲಯದಲ್ಲಿನ ಅಂಬಾವನ ಮಠದಲ್ಲಿ ಆಯೋಜಿಸಿದ್ದ ಕರೋಕೆ ಮ್ಯೂಸಿಕ್ ಸಂಜೆಯಲ್ಲಿ ಬಾಲಕಿಯೊಬ್ಬಳು ಒಳಗೆ ಸೇರಿದರೆ ಗುಂಡು ಹುಡುಗಿ ಆಗುವಳು ಗಂಡು ಎಂಬ ಹಾಡು ಹಾಡಿದ್ದಳು. ಆ ಬಾಲಕಿಯ ಹಾಡು ಕೇಳಿ ಖುಷಿಯಾದ ಸ್ವಾಮೀಜಿ ವೇದಿಕೆ ಮೇಲೆ ಕುಣಿದು ಕುಪ್ಪಳಿಸಿದ್ದಾರೆ.
ಈ ಸ್ವಾಮೀಜಿ ಯಾರು ಅಂತೀರಾ? ಧಾರವಾಡ ತಾಲೂಕಿನ ನಿಗದಿ ಬಳಿಯ ಅಂಬಾವನ ಶ್ರೀಗಳೇ ಕುಣಿದು ಕುಪ್ಪಳಿಸಿದ ಸ್ವಾಮೀಜಿ. ದಸರಾ ಹಬ್ಬದ ಹಿನ್ನೆಲೆ ಅಂಬಾವನ ಮಠದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಆದರೆ, ಶನಿವಾರ ನಡೆದ ಕರೋಕೆ ಕಾರ್ಯಕ್ರಮದಲ್ಲಿ ಬಾಲಕಿಯ ಹಾಡಿಗೆ ತಾವೊಬ್ಬ ಸ್ವಾಮೀಜಿ ಎಂಬುದನ್ನು ಕೂಡ ಮರೆತು ಹಾಡಿನ ನಶೆಯಲ್ಲಿ ತೇಲಾಡಿದ್ದಾರೆ.
ಈ ಸ್ವಾಮೀಜಿ ಮೈಸೂರು, ಬಾಗಲಕೋಟೆ ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಹಲವು ವೇಶಗಳಿಂದ ಭಕ್ತರನ್ನು ಯಾಮಾರಿಸಿದ್ದಾರೆ ಎನ್ನಲಾಗುತ್ತಿದೆ. ಪ್ರವಚನ ಹಾಗೂ ಉತ್ತಮ ಸಂದೇಶಗಳನ್ನು ಭಕ್ತರಿಗೆ ನೀಡಬೇಕಿದ್ದ ಸ್ವಾಮೀಜಿಯೇ ಹೀಗೆ ಅಸಭ್ಯ ವರ್ತನೆ ತೋರಿದರೆ ಹೇಗೆ ಎಂಬ ಪ್ರಶ್ನೆ ಅಲ್ಲಿನ ಸಾರ್ವಜನಿಕರಲ್ಲಿ ಮೂಡಿದೆ.