ಕರ್ನಾಟಕ

ಬೈಕ್ ಸವಾರರೇ ಎಚ್ಚರ ! ಹೆಲ್ಮಟ್ ಧರಿಸದಿದ್ದರೆ ಕಡ್ಡಾಯವಾಗಿ 500 ರೂ. ದಂಡ, ಡ್ರೈವಿಂಗ್ ಲೈಸೆನ್ಸ್ ಮೂರು ತಿಂಗಳವರೆಗೆ ರದ್ದು

Pinterest LinkedIn Tumblr

ಬೆಂಗಳೂರು: ಬೈಕ್ ಸವಾರರೇ ಇನ್ನು ಎಚ್ಚರದಿಂದಿರಿ…! ಹೆಲ್ಮಟ್ ಧರಿಸದೆ ದ್ವಿಚಕ್ರ ವಾಹನ ಚಲಾಯಿಸುವವರಿಗೆ ಕಡ್ಡಾಯವಾಗಿ 500 ರೂಪಾಯಿ ದಂಡ ಮತ್ತು ಅವರ ಡ್ರೈವಿಂಗ್ ಲೈಸೆನ್ಸ್ ನ್ನು ಮೂರು ತಿಂಗಳವರೆಗೆ ರದ್ದುಪಡಿಸಬೇಕೆಂದು ರಾಜ್ಯ ಸಂಚಾರಿ ಇಲಾಖೆ ಸೂಚಿಸಿದೆ.

ರಸ್ತೆ ಕಾನೂನು ಉಲ್ಲಂಘನೆಗೆ ಕಡಿವಾಣ ಹಾಕಲು ಮುಂದಾಗಿರುವ ರಾಜ್ಯ ಸಂಚಾರಿ ಇಲಾಖೆ ಇನ್ನೂ ರಸ್ತೆಯಲ್ಲಿ ವಾಹನ ಚಲಾಯಿಸುವಾದ ಬೈಕ್ ಸವಾರರು ಹೆಲ್ಮೆಟ್ ಧರಿಸದೆ ಇದ್ದಲ್ಲಿ ಅವರ ಡಿಎಲ್ (ವಾಹನ ಚಾಲನಾ ಪರವಾನಗಿ) ಮೂರು ತಿಂಗಳ ಕಾಲ ಅಮಾನತುಗಳಿಸುವ ಮಹತ್ವದ ನಿರ್ಧಾರಕ್ಕೆ ಮುಂದಾಗಿದೆ.

ರಾಜ್ಯದಲ್ಲಿ ಹೆಲ್ಮೆಟ್ ರಹಿತ ವಾಹನ ಚಲಾವಣೆಗೆ ಸಂಬಂಧಿಸಿದಂತೆ ಇತ್ತೀಚೆಗೆ ಅಪಾರ ಸಂಖ್ಯೆಯ ಪ್ರಕರಣಗಳು ದಾಖಲಾಗುತ್ತಿವೆ. ಇದೇ ಕಾರಣಕ್ಕೆ ಸಂಚಾರಿ ಇಲಾಖೆ ಇಂತಹ ಮಹತ್ವದ ನಿರ್ಧಾರಕ್ಕೆ ಬಂದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮೋಟಾರು ವಾಹನ ಕಾಯ್ದೆ 2019ರ ಅನ್ವಯ ಹೆಲ್ಮೆಟ್ ರಹಿತ ವಾಹನ ಚಲಾವಣೆಗೆ 1000 ರೂ.ದಂಡ ಮತ್ತು ಮೂರು ತಿಂಗಳುಗಳ ಕಾಲ ಅವರ ಡಿಎಲ್ ಅನ್ನು ಅಮಾನತುಗೊಳಿಸಬಹುದು. ಆದರೆ, ರಾಜ್ಯದಲ್ಲಿ ದಂಡವನ್ನು 500ಕ್ಕೆ ಇಳಿಸಲಾಗಿತ್ತಾದರೂ ಡಿಎಲ್ ಅಮಾನತುಗೊಳಿಸಲು ಇಲಾಖೆ ಒಪ್ಪಿಗೆ ಸೂಚಿಸಿರಲಿಲ್ಲ. ಆದರೆ, ಇದೀಗ ಹೆಲ್ಮೆಟ್ ರಹಿತ ವಾಹನ ಚಲಾವಣೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಈ ಕಾನೂನನ್ನು ಕಟ್ಟುನಿಟ್ಟಾಗಿ ಪಾಲಿಸಲು ಇಲಾಖೆ ಮುಂದಾಗಿದೆ ಎನ್ನಲಾಗುತ್ತಿದೆ.

ಈ ವರ್ಷ ಸೆಪ್ಟೆಂಬರ್ ಅಂತ್ಯಕ್ಕೆ ಬೆಂಗಳೂರಿನಲ್ಲಿ ಮಾತ್ರ ಬರೋಬ್ಬರಿ 20.7 ಲಕ್ಷ ಹೆಲ್ಮೆಟ್ ರಹಿತ ವಾಹನ ಚಲಾವಣೆ ಪ್ರಕರಣಗಳು ದಾಖಲಾಗಿವೆ.

ಈ ಸಂಬಂಧ ಮಾಹಿತಿ ನೀಡಿರುವ ಸಂಚಾರಿ ಇಲಾಖೆ ಅಧಿಕಾರಿಯೊಬ್ಬರು, “ರಸ್ತೆ ಸಂಚಾರಿ ನಿಯಮ ಪಾಲನೆ ಮತ್ತು ಸುರಕ್ಷತೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಒಂದು ಸಮಿತಿಯನ್ನು ನೇಮಕ ಮಾಡಿದೆ. ರಾಜ್ಯದ ಅಧಿಕಾರಿಗಳ ಜೊತೆಯಲ್ಲಿ ಅಕ್ಟೋಬರ್ 14 ರಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಚರ್ಚೆ ನಡೆಸಿದ್ದ ಈ ಸಮಿತಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಸೂಚಿಸಿದ್ದಾರೆ” ಎಂದು ತಿಳಿಸಿದ್ದಾರೆ.

Comments are closed.