ಕರ್ನಾಟಕ

ಕಾಫಿ ತೋಟದಲ್ಲಿ ಅಕ್ರಮವಾಗಿ ದಾಸ್ತಾನಿಟ್ಟ 4.5 ಲಕ್ಷ ಮೌಲ್ಯದ ಬೀಟೆ ಮರ ವಶ

Pinterest LinkedIn Tumblr

ಮಡಿಕೇರಿ: ಕಾಫಿ ತೋಟವೊಂದರಲ್ಲಿ ಅಕ್ರಮವಾಗಿ ಬೀಟೆ ಮರಗಳನ್ನು ಕಡಿದು ಮಾರಾಟ ಮಾಡುವ ಉದ್ದೇಶದಿಂದ ದಾಸ್ತಾನು ಇಟ್ಟಿದ್ದನ್ನು ಪತ್ತೆ ಹಚ್ಚಿ ದಾಳಿ ಮಾಡಿ ವಶಪಡಿಸಿಕೊಳ್ಳುವಲ್ಲಿ ಕುಟ್ಟ ಪೊಲೀಸರು ಯಶಸ್ವಿಯಾಗಿದ್ದಾರೆ.

ವಿರಾಜಪೇಟೆ ಪೊಲೀಸ್ ಉಪಾಧೀಕ್ಷಕ ಸಿ.ಟಿ. ಜಯಕುಮಾರ್ ಅವರಿಗೆ ದೊರೆತ ಖಚಿತ ಮಾಹಿತಿಯನ್ನು ಆಧರಿಸಿ ಕುಟ್ಟ ಠಾಣಾ ಸರಹದ್ದಿನ ಕೆ.ಬಾಡಗ ಗ್ರಾಮದ ಗೌರು ಅಪ್ಪಯ್ಯ ಎಂಬವರ ಕಾಫಿ ತೋಟದಲ್ಲಿ ಆರೋಪಿಗಳಾದ ಬಾಡಗ ಗ್ರಾಮದ ನಿವಾಸಿಗಳಾದ ಬೊಳ್ಳೇರ ಚೆಂಗಪ್ಪ @ ದೀಪಕ್, ಅಶ್ರಫ್ ಮತ್ತು ಇತರರು ಸೇರಿ ಅಕ್ರಮವಾಗಿ ಬೀಟೆ ಮರಗಳನ್ನು ಕಡಿದು ಮಾರಾಟ ಮಾಡುವ ಉದ್ದೇಶದಿಂದ ದಾಸ್ತಾನು ಇಟ್ಟಿದ್ದನ್ನು ಪತ್ತೆಹಚ್ಚಿ ದಾಳಿ ನಡೆಸಿದ ಕುಟ್ಟ ಪೊಲೀಸರು ಅಂದಾಜು ರೂ. 4,50,000 ಮೌಲ್ಯದ ಬೀಟೆ ಮರಗಳನ್ನು ವಶಕ್ಕೆ ಪಡೆದು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಈ ಕಾರ್ಯಾಚರಣೆಯು ಕುಟ್ಟ ಠಾಣೆ ಪಿಎಸ್ಐ ಹೆಚ್.ಜೆ.ಚಂದ್ರಪ್ಪ ಇವರ ನೇತೃತ್ವದಲ್ಲಿ ನಡೆದಿದ್ದು ಕಾರ್ಯಾಚರಣೆಯಲ್ಲಿ ಎಎಸ್ಐ. ಕೆ.ಜೆ. ಪ್ರಾನ್ಸಿಸ್, ಸಿಬ್ಬಂದಿಗಳಾದ ಎಂ.ಎಸ್ ರಂಜಿತ್, ಎ.ಪಿ. ವಿಶ್ವನಾಥ್ ಮತ್ತು ಪ್ರಭಾಕರ ಮೊದಲಾದವರು ಭಾಗಿಯಾಗಿದ್ದು, ಇವರ ಕಾರ್ಯವೈಖರಿಯನ್ನು ಕೊಡಗು ಜಿಲ್ಲಾ ಎಸ್ಪಿ ಕ್ಷಮಾ ಮಿಶ್ರಾ ಶ್ಲಾಘಿಸಿದ್ದಾರೆ.

Comments are closed.